ಅಶ್ವಿನಿ ಪುನೀತ್ ರಾಜ್‌ಕುಮಾರ್ ಕುರಿತ ಅವಹೇಳನವನ್ನು ಮನುವಾದಕ್ಕೆ ಹೋಲಿಸಿದ ಸಿಎಂ ಸಿದ್ದರಾಮಯ್ಯ!

By Sathish Kumar KHFirst Published Apr 6, 2024, 8:43 PM IST
Highlights

ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಇದು ಸಂವಿಧಾನ ವಿರೋಧಿ ಮನುವಾದಿಗಳ ಮನಸ್ಥಿತಿ ಎಂದು ರಾಜಕೀಯ ಬಣ್ಣ ಬೆರೆಸಿದ್ದಾರೆ.

ಬೆಂಗಳೂರು (ಏ.06): ಕರುನಾಡಿನ ರಾಜಕುಮಾರ ಎಂತಲೇ ಖ್ಯಾತಿ ಹೊಂದಿದ ಪುನೀತ್ ರಾಜ್ ಕುಮಾರ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ ಕುಮಾರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಯೊಬ್ಬ ಅವಹೇಳನ ಮಾಡಿ ಪೋಸ್ಟ್‌ ಮಾಡಿದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, 'ಇದು ಸಂವಿಧಾನವನ್ನು ತಿರಸ್ಕರಿಸಿ ಮನುವಾದವನ್ನು ಪುರಸ್ಕರಿಸಬೇಕೆಂದು ಕೆಲವು ಸಮಾಜ ವಿರೋಧಿ ಶಕ್ತಿಗಳು ಹಾಕುತ್ತಿರುವ ಕೂಗಿನ ಫಲ' ಎಂದು ಕಿಡಿಗೇಡಿಯೊಬ್ಬನ ಅವಹೇಳನೆಗೆ ರಾಜಕೀಯ ಬಣ್ಣವನ್ನು ನೀಡಿದ್ದಾರೆ.

ರಾಯಲ್ ಚಾಲೆಂಜರ್ಸ್‌ ತಂಡದ ರಾಯಭಾರಿ ಆಗಿದ್ದ ಪುನೀತ್ ರಾಜ್‌ಕುಮಾರ್ ಅವರ ಸಾವಿನ ನಂತರ 2024ರಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್‌ ಈವೆಂಟ್‌ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಗೌರವಿಸಿ ಅವರಿಂದಲೇ ಹೊಸ ಟೀಶರ್ಟ್ ಬಿಡುಗಡೆ ಮಾಡಿಸಲಾಯಿತು. ಆದರೆ, ಈ ಬಗ್ಗೆ ಗಜಪಡೆ ಎಂಬ ಟ್ವಿಟರ್ ಖಾತೆಯನ್ನು ಹೊಂದಿದ ವ್ಯಕ್ತಿ ಗಂಡನಿಲ್ಲದ ಮಹಿಳೆಯಿಂದ ಅನ್‌ಬಾಕ್ಸಿಂಗ್ ಮಾಡಿಸಿದ್ದಕ್ಕೆ ಆರ್‌ಸಿಬಿ ಸೋಲುತ್ತಿದೆ ಎಂದು ಹೇಳಿ ಟ್ವೀಟ್‌ ಮಾಡಿದ್ದನು. ಈಗ ಈ ವಿಚಾರ ರಾಜ್ಯಾದ್ಯಂತ ಕ್ರೀಡೆ, ಸಿನಿಮಾ ಕ್ಷೇತ್ರ, ಸಾಮಾಜಿಕ ಜಾಲತಾಣ ಹಾಗೂ ಮಹಿಳಾಪರ ಹೋರಾಟಗಾರರಲ್ಲಿ ಭಾರಿ ಕಿಚ್ಚು ಹೊತ್ತಿಸಿದೆ.ಆದರೆ, ಈ ಕುರಿತು ಎಲ್ಲವನ್ನೂ ಕೂಲಂಕುಷವಾಗಿ ತಿಳಿದುಕೊಂಡು ತಡವಾಗಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ರಾಜಕೀಯ ಬಣ್ಣವನ್ನು ಬಳಿದಿದ್ದಾರೆ.

ಹೆಣ್ಣಿಗೆ ಗೌರವ ಸಿಗೋದು ಕನಸು ಅಷ್ಟೇ., ಅಶ್ವಿನಿ ಪುನೀತ್ ರಾಜ್ ಕುಮಾರ್ ಪರನಿಂತ ಆಂಕರ್ ಅನುಶ್ರೀ!

ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಈ ರೀತಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 'ಹೆಣ್ಣಿಗೆ ಸ್ವಾತಂತ್ರ್ಯವನ್ನು ನಿರಾಕರಿಸಿ ಗುಲಾಮಳನ್ನಾಗಿ ಮಾಡಿ ಮನೆಯೊಳಗೆ ಕೂರಿಸಿದ ಮನುವಾದದ ಸಂಕೋಲೆಯನ್ನು  ಮಹಿಳೆಯರೇ ಕಿತ್ತುಹಾಕಿ ಸ್ವತಂತ್ರರಾಗುತ್ತಿದ್ದಾರೆ. ಸಂವಿಧಾನದತ್ತ ಸ್ವಾತಂತ್ರ್ಯದೊಂದಿಗೆ ಪುರುಷರಿಗೆ ಸರಿಸಮಾನರಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಯುತ್ತಿದ್ದಾರೆ. ಪತಿಯನ್ನು ಕಳೆದುಕೊಂಡು ಹೆಣ್ಣುಮಕ್ಕಳು ಕೂಡಾ ವೈಯಕ್ತಿಕ ಬದುಕಿನ ನೋವುಗಳನ್ನು ನುಂಗಿಕೊಂಡು ಸಾಮಾಜಿಕ ಮತ್ತು ಔದ್ಯಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾದರಿಯಾಗುತ್ತಿದ್ದಾರೆ. 

ಈ ಸಾಮಾಜಿಕ ಬದಲಾವಣೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿಯವರಂತಹ ಮಹನೀಯರ ಸಮಾಜ ಸುಧಾರಣೆಯ ಕೊಡುಗೆಯೂ ಇದೆ. ಹೀಗಿದ್ದರೂ ಇತಿಹಾಸದ ಚಕ್ರವನ್ನು ಹಿಂದಕ್ಕೆ ಎಳೆದೊಯ್ಯುವ ಪ್ರಯತ್ನವನ್ನು ಕೆಲವು ಕಿಡಿಗೇಡಿಗಳು ನಡೆಸುತ್ತಿದ್ದಾರೆ. ಇತ್ತೀಚೆಗೆ ಕೆಲವು ಗೊಡ್ಡು ಸಂಪ್ರದಾಯವಾದಿಗಳು ಪತಿಯನ್ನು ಕಳೆದುಕೊಂಡ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಅಪಮಾನಿಸಿ ತಮ್ಮ ವಿಕೃತಿಯನ್ನು ಮೆರೆಯುತ್ತಿರುವುದು ಖಂಡನೀಯ. 

ಇದು ಸಂವಿಧಾನವನ್ನು ತಿರಸ್ಕರಿಸಿ ಮನುವಾದವನ್ನು ಪುರಸ್ಕರಿಸಬೇಕೆಂದು ಕೆಲವು ಸಮಾಜ ವಿರೋಧಿ ಶಕ್ತಿಗಳು ಹಾಕುತ್ತಿರುವ ಕೂಗಿನ ಫಲ. ಹೆಣ್ಣುಮಕ್ಕಳ ತುಚ್ಛೀಕರಣವನ್ನು ನಮ್ಮ ಸರ್ಕಾರ ಖಂಡಿತ ಸಹಿಸುವುದಿಲ್ಲ, ಇದಕ್ಕೆ ಕಾರಣಕರ್ತರಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್? ದರ್ಶನ್ ಫ್ಯಾನ್ಸ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಅಪ್ಪು ಫ್ಯಾನ್ಸ್!

'ಗಜ ಸೇನೆ' ಎಂಬ ನಕಲಿ Facebook ಖಾತೆಯ ಮೂಲಕ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅವರ ಧರ್ಮಪತ್ನಿ ಶ್ರೀಮತಿ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮತ್ತು ‌ಅಸಭ್ಯ post ಗಳನ್ನು ಹಾಕಿದವರ ವಿರುದ್ಧ "ಅಖಿಲ ಕರ್ನಾಟಕ ಡಾll ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ" ದ ವತಿಯಿಂದ ಇಂದು ಕೊಪ್ಪಳ, ಗದಗ, ಹೊಸಪೇಟೆ, ಬಳ್ಳಾರಿ, ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಗಂಗಾವತಿ, ಹಾಸನ, ತುಮಕೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ಪೋಲೀಸ್ ಠಾಣೆಗಳಲ್ಲಿ 30 ಕ್ಕೂ ಹೆಚ್ಚು ದೂರುಗಳನ್ನು ನೀಡಲಾಗಿದ್ದು, ಆರೋಪಿಗಳನ್ನು ಬಂಧಿಸಿ, ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಿಸಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳನ್ನು ಆಗ್ರಹಿಸಲಾಗಿದೆ ಎಂದು ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ  ಎನ್.ಆರ್.ರಮೇಶ್ ತಿಳಿಸಿದ್ದಾರೆ.

click me!