ಬೆಂಗಳೂರು(ಜೂ.24): ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವ ಧನ ಹೆಚ್ಚಳ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ್ದ 6ನೇ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜೂ.27 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟ ನಿರ್ಧರಿಸಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಧನವನ್ನು ಕ್ರಮವಾಗಿ 15 ಸಾವಿರ ಮತ್ತು 10 ಸಾವಿರ ರುಪಾಯಿಗೆ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲೂ ಪ್ರತಿಭಟನೆ ನಡೆಯಲಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ತಿಳಿಸಿದ್ದಾರೆ.
65 ಸಾವಿರ ಅಂಗನವಾಡಿಗಳ 2.60 ಲಕ್ಷ ಮಕ್ಕಳಿಗಿಲ್ಲ ಹಾಲು: 5 ತಿಂಗಳಿಂದ ಹಾಲಿನ ಪೌಡರ್ ಪೂರೈಕೆ ಮಾಡದ ಕೆಎಂಎಫ್!
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 4 ವರ್ಷದ ಹಿಂದೆ ಕಾರ್ಯಕರ್ತೆಯರಿಗೆ ನೀಡಿದ್ದ ಮೊಬೈಲ್‌ಗಳು ಕಳಪೆ ಗುಣಮಟ್ಟದ್ದಾಗಿದ್ದು ಹಾಳಾಗಿವೆ. ಆದ್ದರಿಂದ ಹೊಸ ಮೊಬೈಲ್ ಅಥವಾ ಮಿನಿ ಟ್ಯಾಬ್ ನೀಡಬೇಕು. ಇಲ್ಲದಿದ್ದರೆ ಜುಲೈ ಮೊದಲ ವಾರದಲ್ಲಿ ಇಲಾಖೆಗೆ ಹಿಂದಿರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಮೊಟ್ಟೆ ಸರಬರಾಜಿಗೆ ಟೆಂಡರ್ ನೀಡುವುದನ್ನು ಕೈಬಿಟ್ಟು ಖರೀದಿಯ ಜವಾಬ್ದಾರಿಯನ್ನು ಬಾಲ ವಿಕಾಸ ಸಮಿತಿಗೆ ವಹಿಸಬೇಕು. ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ಬಾಕಿ ತಕ್ಷಣ ಬಿಡುಗಡೆಗೊಳಿಸಬೇಕು. ಆರೋಗ್ಯ ಸಮೀಕ್ಷೆ ಕಾರ್ಯ ನಡೆಸಲು ಒತ್ತಡ ಹೇರುತ್ತಿರುವುದನ್ನು ಕೈಬಿಡಬೇಕು. ನಿವೃತ್ತರಿಗೆ 3 ಲಕ್ಷ ರು. ಇಡುಗಂಟು ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ