
ಬೆಂಗಳೂರು (ಡಿ.1) ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಬೇಕು ಎಂಬುದು ನಮ್ಮ ಸರ್ಕಾರದ ಗುರಿ. ಅಪಘಾತ, ಹೃದಯಾಘಾತ ಸೇರಿದಂತೆ ತುರ್ತು ಚಿಕಿತ್ಸೆ ಅಗತ್ಯವಿದ್ದಾಗ ಯಾರೊಬ್ಬರೂ ಚಿಕಿತ್ಸೆ ಸಿಗದೆ ಸಾಯಬಾರದು. ಹಳೆ ಬಟ್ಟೆ, ಕೊಳಕು ಬಟ್ಟೆ ಹಾಕಿಕೊಂಡು ಬರುವವರನ್ನೂ ಗೌರವ ಹಾಗೂ ಮಾನವೀಯವಾಗಿ ನಡೆಸಿಕೊಂಡು ಆರೋಗ್ಯ ಸೇವೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ವಿಧಾನಸೌಧ ಆವರಣದಲ್ಲಿ ಗುರುವಾರ 262 ಆಧುನಿಕ 108-ಆರೋಗ್ಯ ಕವಚ ಆ್ಯಂಬುಲೆನ್ಸ್‌ಗಳನ್ನು ಸಾರ್ವಜನಿಕರ ಸೇವೆಗೆ ಅರ್ಪಿಸಿ ಅವರು ಮಾತನಾಡಿದರು.
ಜಯದೇವ ಆಸ್ಪತ್ರೆಯಲ್ಲಿರುವ ಗುಣಮಟ್ಟದ ಆರೋಗ್ಯ ಸೇವೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗಬೇಕು ಎಂಬುದು ನಮ್ಮ ಗುರಿ. ಚಿಕಿತ್ಸೆ ಸಿಗದೆ ಯಾರೂ ಪ್ರಾಣ ಕಳೆದುಕೊಳ್ಳುವಂತೆ ಆಗಬಾರದು ಎನ್ನುವ ಕಾರಣಕ್ಕೆ 262 ಹೊಸ ಆ್ಯಂಬುಲೆನ್ಸ್‌ಗಳ ಸೇವೆ ಆರಂಭಿಸುತ್ತಿದ್ದೇವೆ. ಇದರಿಂದ ರಾಜ್ಯದಲ್ಲಿ 840 ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ಸೇವೆ ಸಲ್ಲಿಸುವಂತಾಗಲಿದೆ. ಪ್ರತಿ ತಾಲೂಕಿನಲ್ಲಿ ನಾಲ್ಕು ಆ್ಯಂಬುಲೆನ್ಸ್ ತುರ್ತು ಆರೋಗ್ಯ ಸೇವೆ ದೊರೆಯುವಂತೆ ಮಾಡಲಿವೆ ಎಂದು ಹೇಳಿದರು.
ಗುಡ್ ನ್ಯೂಸ್: ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು 1 ದಿನದ ಅವಕಾಶ! ಯಾವಾಗ? ಇಲ್ಲಿದೆ ಮಾಹಿತಿ
ಪ್ರತಿ ಜಿಲ್ಲೆಯಲ್ಲೂ ಎಂಆರ್‌ಐ ಸ್ಕ್ಯಾನಿಂಗ್ ಇರಬೇಕು:
ಇನ್ನು ಪ್ರತೀ ಜಿಲ್ಲೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಇರಬೇಕು. ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ ಸೇವಾವೆಚ್ಚ ದುಬಾರಿ ಆಗಿರುವುದರಿಂದ ಬಡವರಿಗೆ ಬಹಳ ಕಷ್ಟ ಆಗುತ್ತಿದೆ. ಹೀಗಾಗಿ ಪರೀಕ್ಷಾ ಸೇವೆಗಳು ಸರ್ಕಾರಿ ಆಸ್ಪತ್ರೆಯಲ್ಲೇ ಸಿಗುವಂತಾಗಬೇಕು. ಇನ್ನು ಡಯಾಲಿಸಿಸ್ ಸೇವೆಯನ್ನು ಉತ್ತಮಪಡಿಸಬೇಕು. ಈ ಕಾರಣಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಶೇ.25 ರಷ್ಟು ಹಣ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲೇ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವ ವಾತಾವರಣ ರಾಜ್ಯದಲ್ಲಿ ಸೃಷ್ಟಿ ಆಗುತ್ತಿದೆ. ಜಯದೇವ ಆಸ್ಪತ್ರೆಯಿಂದ ಉತ್ತಮಸೇವೆ ಸಾಧ್ಯ ಆಗಿರುವಾಗ ಉಳಿದ ಕಡೆಗಳಲ್ಲೂ ಅದೇ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಿದೆ. ರಾಜ್ಯ ಸರ್ಕಾರ ಆ ದಿಕ್ಕಿನಲ್ಲಿ ಶ್ರಮಿಸುತ್ತಿದ್ದು, ಸಿಬ್ಬಂದಿಯೂ ಸಹಕರಿಸಬೇಕು ಎಂದರು.
ಖಾಸಗಿ ಜತೆ 108 ಆ್ಯಂಬುಲೆನ್ಸ್‌ಗಳ ಒಳ ಒಪ್ಪಂದ: ಡಿಕೆಶಿ ಕಿಡಿ
ಬೆಂಗಳೂರು: 108 ಆಂಬ್ಯುಲೆನ್ಸ್ ಚಾಲಕರು ಖಾಸಗಿ ಆಸ್ಪತ್ರೆಗಳ ಜತೆ ಒಳ ಒಪ್ಪಂದ ಮಾಡಿಕೊಂಡು ನಮ್ಮ ಕನಕಪುರ, ಮಳವಳ್ಳಿ ಚಾಮರಾಜನಗರ ಭಾಗದಲ್ಲಿ ಯಾವುದೇ ಆಪಘಾತವಾದರೂ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಾರೆ. ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸಾ ವ್ಯವಸ್ಥೆ ಇದ್ದರೂ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ನಂತರ ಅವರ ಬಿಲ್ ಗಳು ದುಬಾರಿಯಾಗಿ ಶಾಸಕರ ಬಳಿ ಸಹಾಯ ಕೇಳಿಕೊಂಡು ಬರುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೂರಿದರು.
ಇದರಿಂದ ನಾವು ಶಾಸಕರು ಮುಖ್ಯಮಂತ್ರಿಗಳ ಬಳಿ ಪರಿಹಾರ ಕೇಳಬೇಕಾಗುತ್ತದೆ. ಇಲ್ಲದಿದ್ದರೆ ನಾವು ನಮ್ಮ ಜೇಬಿನಿಂದಲೂ ಹಣ ನೀಡಬೇಕಾಗುತ್ತದೆ. ಕೆಲವೊಮ್ಮೆ ಈ ರೀತಿ ತಿಂಗಳಿಗೆ ₹20 ಲಕ್ಷದ ವರೆಗೂ ನೀಡಬೇಕಾಗುತ್ತದೆ. ಹೀಗಾಗಿ ಚಾಲಕರು ಹಾಗೂ ಆ್ಯಂಬುಲೆನ್ಸ್ ಕಂಪೆನಿಗಳಿಗೆ ಸೂಕ್ತ ತರಬೇತಿ ನೀಡಿ ಎಂದರು.
ಆರೋಗ್ಯ ಇಲಾಖೆಯ 262 ಹೊಸ ಆಂಬ್ಯುಲೆನ್ಸ್ ಸೇವೆಗಳಿಗೆ ಇಂದು ಸಿಎಂ ಚಾಲನೆ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗುಣಮಟ್ಟದ ತುರ್ತು ಸೇವೆ ಒದಗಿಸುವ ದೃಷ್ಟಿಯಿಂದ ಹೊಸ ಆ್ಯಂಬುಲೆನ್ಸ್‌ಗಳ ಸೇವೆ ಆರಂಭಿಸಲಾಗಿದೆ. ತನ್ಮೂಲಕ ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡುವುದು ನಮ್ಮ ಗುರಿ ಎಂದು ಹೇಳಿದರು.
ಶಾಸಕ ರಿಜ್ವಾನ್ ಅರ್ಷದ್, ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ