ಈಗಾಗಲೇ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ನೀಡುತ್ತಿದೆ. ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ನೀಡುವುದು ಯಾವಾಗ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.
ಧಾರವಾಡ (ಡಿ.1): ಈಗಾಗಲೇ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ನೀಡುತ್ತಿದೆ. ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ನೀಡುವುದು ಯಾವಾಗ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆಯಲ್ಲಿ 5 ಕೆಜಿ ಪಡಿತರ ಅಕ್ಕಿ ವಿತರಣೆ ಮುಂದುವರೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ದೇಶದ 80 ಕೋಟಿ ಜನರಿಗೆ ಐದು ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಕರ್ನಾಟಕದ ಆರೂವರೆ ಕೋಟಿ ಜನಸಂಖ್ಯೆ ಪೈಕಿ ಶೇ.50ರಷ್ಟು ಜನರಿಗೆ ಇದರ ಲಾಭ ಸಿಗಲಿದೆ. ಚುನಾವಣೆ ಪೂರ್ವ 10 ಕೆಜಿ ಅಕ್ಕಿ ನೀಡುವುದಾಗಿ ಸಾರ್ವಜನಿಕವಾಗಿ ಭಾಷಣ ಮಾಡಿದ ಕಾಂಗ್ರೆಸ್ ನಾಯಕರು, ಇದೀಗ ಅಕ್ಕಿ ನೀಡುತ್ತಿಲ್ಲ ಏತಕೆ? ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರ ವಿರುದ್ದ ವಿ.ಸೊಮಣ್ಣ ಅಸಮಾಧಾನ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?
ಭಾರತ ಸರ್ಕಾರ ಬೆಳೆಗೆ ನ್ಯಾನ್ಯೋ ಯುರಿಯೂ ಔಷಧಿ ಸಿಂಪಡನೆಗೆ ಯೋಜನೆ ರೂಪಿಸಿದೆ. ಇದಕ್ಕೆ ಮಹಿಳಾ ಸಂಘಗಳಿಗೆ ಶೇ. 35ರ ಸಬ್ಸಿಡಿ ಸಾಲ ನೀಡಲಿದೆ. ''''ನಮೋ ದ್ರೋಣ ಸಹೋದರಿ'''' ಅಡಿ ದ್ರೋಣ ಬಳಸಿ, ಔಷಧಿ ಸಿಂಪಡಿಸಲು ದೇಶದ 15 ಸಾವಿರ ಮಹಿಳಾ ಸ್ವಸಹಾಯ ಸಂಘಗಳಿಗೆ ತರಬೇತಿ ನೀಡಲಿದೆ ಎಂದು ಮಾಹಿತಿ ನೀಡಿದರು.
ಪಂಚರಾಜ್ಯ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಗುರಿ ಎಲ್ಲ ರಾಜ್ಯಗಳನ್ನು ಗೆಲ್ಲುವುದು. ನಾವು ಮೂರು ಕಡೆ ಗೆಲ್ಲಲಿದ್ದೇವೆ. ಮಿಜೋರಾಂದಲ್ಲಿ ಎನ್‌ಡಿಎ ಸರ್ಕಾರ ಬರಲಿದೆ. ತೆಲಂಗಾಣದಲ್ಲಿ ಮೂರು ಪಕ್ಷಗಳ ಮಧ್ಯೆ ಫೈಟ್ ನಡೆಯುತ್ತಿದೆ ಎಂದರು.
ಕಚ್ಚಾಟದಿಂದ ಅಭಿವೃದ್ಧಿ ಇಲ್ಲ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯ ಸರ್ಕಾರದಲ್ಲಿನ ಕಚ್ಚಾಟದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ನಮ್ಮ ಕಾಲದಲ್ಲಿ ಮಂಜೂರಿಯಾದ ರಸ್ತೆ ಕಾಮಗಾರಿ ತಡೆ ಹಿಡಿಯಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಅನೇಕ ರಸ್ತೆ ಕಾಮಗಾರಿಗಳು ನಿಂತಿವೆ ಎಂದ ಅವರು, ಒಬ್ಬ ವ್ಯಕ್ತಿಯ ರಕ್ಷಣೆಗೆ ಇಡೀ ಕಾನೂನು ಕೈಗೆ ತೆಗೆದುಕೊಂಡಿದ್ದು ಖಂಡನೀಯ. ನಾಡಿನ ಜನತೆ ಇಂತಹ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಡಿಕೆಶಿ ಸಿಬಿಐ ಪ್ರಕರಣ ಹಿಂಪಡೆಯುವುದು ಸರಿಯಲ್ಲ: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಸರ್ಕಾರದ ಉಚಿತ ವಿದ್ಯುತ್, ಗೃಹಲಕ್ಷ್ಮಿ, ಶಕ್ತಿ ಯೋಜನೆ, ಯುವನಿಧಿ ಯೋಜನೆಗಳು ಜನರಿಗೆ ಸರಿಯಾಗಿ ತಲುಪಿಲ್ಲ. 200 ಯುನಿಟ್ ಉಚಿತ ವಿದ್ಯುತ್ ನೀಡಿ, ಟ್ರಾನ್ಸಫಾರ್ಮರ್‌ಗೆ ಶುಲ್ಕ ನಿಗದಿ, ವಿದ್ಯುತ್ ದರ ಏರಿಕೆ, ಲೋಡ್ ಶೆಡ್ಡಿಂಗ್ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ದೇಶದಲ್ಲಿ ಕಲ್ಲಿದ್ದಲು ಇದೆ. ಇವರು ವಿದ್ಯುತ್ ಉತ್ಪಾದಿಸುತ್ತಿಲ್ಲ. ರಾಯಚೂರು ಥರ್ಮಲ್ ಯೂನಿಟ್‌ನಿಂದ ಕಲ್ಲಿದ್ದಲು ಕಳ್ಳತನ ಆಗಿರುವ ಅರಿವು ಸಹ ರಾಜ್ಯ ಸರ್ಕಾರಕ್ಕೆ ಇಲ್ಲದಿರುವುದು ಸೋಜಿಗದ ಸಂಗತಿ ಎಂದರು.
ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ನೀಡಿದ ಸರ್ಕಾರ ಬಸ್ ಸಂಖ್ಯೆ ಕಡಿತಗೊಳಿಸಿದೆ. ಉಳಿದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು.