
ಬೆಂಗಳೂರು (ಜೂ.28): ಸಿದ್ಧರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರಸ ಅಧಿಕಾರ ಬಂದಾಗಿನಿಂದ ಗ್ಯಾರಂಟಿ ವಿಚಾರದ್ದೇ ಸದ್ದು. ಇದರ ನಡುವೆ ಸಿಎಂ ಸಿದ್ಧರಾಮಯ್ಯ ತಮ್ಮ ಕಚೇರಿಯ ಪ್ರಮುಖ ಹುದ್ದೆಗಳಲ್ಲಿ ಆಪ್ತರನ್ನು ನೇಮಿಸಿಕೊಂಡಿದ್ದಾರೆ. ರಾಜಕೀಯ ಕಾರ್ಯದರ್ಶಿ, ಸಲಹೆಗಾರ, ಮಾಧ್ಯಮ ಸಂಯೋಜಕ ಎಲ್ಲರಿಗೂ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ನೇಮಕ ಮಾಡಲಾಗಿದೆ. ಇದರ ನಡುವೆ ಮುಖ್ಯಮಂತ್ಇರ ಕಚೇರಿಯ ಜಂಟಿ ಕಾರ್ಯದರ್ಶಿಯ ನೇಮಕವೂ ಆಗಿದೆ. ಆದರೆ, ಅವರ ಸಂಪರ್ಕ ಸಂಖ್ಯೆಯಲ್ಲಿ ಆಗಿರುವ ಒಂದು ಯಡವಟ್ಟು ಸರ್ಕಾರದ ಗುಟ್ಟುಗಳನ್ನು ಬಯಲು ಮಾಡಿದೆ. ಹೌದು, ಜಂಟಿ ಕಾರ್ಯದರ್ಶಿಯವರ ಸಂಪರ್ಕ ಸಂಖ್ಯೆ ಇದ್ದ ಸ್ಥಳದಲ್ಲಿ ಅವರ ನಂಬರ್ ಬದಲು, ಈ ಹಿಂದೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮುಖ್ಯಮಂತ್ರಿ ಸಲಹೆಗಾರ (ಇ-ಆಡಳಿತ) ಸ್ಥಾನದಲ್ಲಿದ್ದ ಬೇಳೂರು ಸುದರ್ಶನ ಅವರ ನಂಬರ್ ಇತ್ತು. ಪಾಪ, ಸಿದ್ಧರಾಮಯ್ಯ ಸಿಎಂ ಆದಾಗಲಿನಿಂದ ಅವರ ಮೊಬೈಲ್‌ಗೆ ಬಿಡುವೇ ಇಲ್ಲ. ನಾನವನಲ್ಲ.. ನಾನವನಲ್ಲ ಎಂದು ಹೇಳಿ ಹೇಳಿ ಸಾಕಾಗಿ ಕೊನೆಗೆ ತಮ್ಮ ತಾಪತ್ರಯವನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಬೇಳೂರು ಸುದರ್ಶನ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಪೂರ್ಣಪಾಠ.
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರೇ,
ನೀವು ಅಧಿಕಾರ ವಹಿಸಿಕೊಂಡಾಗಿನಿಂದ ನನ್ನನ್ನು ಮುಖ್ಯಮಂತ್ರಿಗಳ ಕಚೇರಿಯಲ್ಲಿನ ಜಂಟಿ ಕಾರ್ಯದರ್ಶಿ ಎಂದು ಭಾವಿಸಿ ಡಜನ್‌ಗಟ್ಟಲೆ ಕರೆಗಳು ಬಂದಿವೆ; ಬರುತ್ತಿವೆ. ಹಲವಾರು ಉನ್ನತ ಅಧಿಕಾರಿಗಳು, ವರ್ಗಾವಣೆ ಬಯಸಿದ ಸಿಬ್ಬಂದಿ, ಮಾಜಿ ಶಾಸಕರು, ಹಾಲಿ ಶಾಸಕರು, ತಮ್ಮ ಸಚಿವ ಸಂಪುಟದ ಸಚಿವರೂ ಸಹಾ ನನಗೆ ಕರೆ ಮಾಡುತ್ತಿದ್ದಾರೆ. ನಿನ್ನೆ ಅಪರೂಪಕ್ಕೊಂದು ಸಿನೆಮಾ ನೋಡಲು ಹೋದ್ರೆ ನಿಮ್ಮ ಸಂಪುಟದ ಸಚಿವರೇ ಕರೆ ಮಾಡಿಬಿಟ್ರು!! "ಧೂಮಂ" ಸಿನೆಮಾ ನೋಡುವಾಗ ಹೊಗೆ ಹಾಕಿಸಿಕೊಳ್ಳೋದು ಅಂದ್ರೆ ಇದೇ ಇರಬಹುದು!!
ಇನ್ನು ನಿಮ್ಮ ಕರೆ ಬರೋದೊಂದೇ ಬಾಕಿ!! ಯಾವುದಾದ್ರೂ ಗ್ಯಾರಂಟಿ ಕಡತದ ಬಗ್ಗೆ ನೀವು ಕೇಳಿದ್ರೆ ಏನು ಉತ್ತರ ಕೊಡಲಿ? ಹೇಗೆ ಪ್ರತಿಕ್ರಿಯಿಸಲಿ? ಏನೂ ತೋಚುತ್ತಿಲ್ಲ.
ನಿಮ್ಮ ಅನುಮೋದನೆಗೆಂದು ಇ-ಆಫೀಸ್ ತಂತ್ರಾಂಶದ ಮೂಲಕ ರವಾನೆಯಾಗುತ್ತಿದ್ದ ಒಂದು ಕಡತದ ಸ್ಕ್ರೀನ್‌ಶಾಟ್ ಸಹಾ ನನ್ನ ವಾಟ್ಸಪ್‌ಗೆ ಬಂದು ಬಿದ್ದಿದೆ!! ರಹಸ್ಯವಾಗೇ ಇಟ್ಟಿದ್ದೇನೆ ಬಿಡಿ.
ಅದು ಕಾಲ್ ಮಾಡಿದವರ ಅಥವಾ ಆ ಜಂಟಿ ಕಾರ್ಯದರ್ಶಿ ಅವರ ತಪ್ಪು ಅಲ್ಲವೇ ಅಲ್ಲ. ನಾನು ಈ ಬಗ್ಗೆ ಪರಿಶೀಲಿಸಿದಾಗ, ಯಾರೋ ಖಾಸಗಿ ವ್ಯಕ್ತಿ (ಅವರು ಸರ್ಕಾರದ ಸಿಬ್ಬಂದಿ ಆಗಿದ್ದರೂ ಇರಬಹುದು) ಸರ್ಕಾರದ ಸಂಪರ್ಕ ದೂರವಾಣಿ ಪಟ್ಟಿಯ ಜೊತೆಗೆ ಸದರಿ ಜಂಟಿ ಕಾರ್ಯದರ್ಶಿಯವರ ಹೆಸರಿನ ಮುಂದೆ ನನ್ನ ನಂಬರ್ ತಳುಕು ಹಾಕಿ ಎಲ್ಲೆಡೆ ಹಂಚಿರುವುದು ಕಂಡುಬಂದಿದೆ. ಹೆಚ್ಚಿನ ಮಾಹಿತಿ ಪಡೆಯಲು ನನಗೆ ಆಗಲಿಲ್ಲ.
"ನಾನು ಅವರಲ್ಲ" ಎಂದು ಹೇಳಿ ಹೇಳಿ ಸಾಕಾಗಿದೆ. ದಯಮಾಡಿ ಈ ಸಂಕಷ್ಟದಿಂದ ನನ್ನನ್ನು ಪಾರು ಮಾಡಿ. ಡಿಪಿಎಆರ್ ಇಲಾಖೆಯ ಮೂಲಕ ನನ್ನ ನಂಬರ್ ಬಳಸದಂತೆ ಮತ್ತು ಸದರಿ ಅಧಿಕಾರಿಯವರ ಸರಿಯಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಅದನ್ನೇ ಬಳಸುವಂತೆ ಸೂಚನೆ ಕಳಿಸಿದರೆ ತುಂಬಾ ಉಪಕೃತ. (ಹಾಗಂತ ನನ್ನ ನಂಬರನ್ನು ಇಲ್ಲಿ ಹಾಕಿ ಇನ್ನಷ್ಟು ತಾಪತ್ರಯಕ್ಕೆ ಒಳಗಾಗಲಾರೆ!!). ಈ ಅಧಿಕಾರಿಗೆ ಎಷ್ಟು ಧಿಮಾಕು ಅಂತ ಕಾಲ್ ಮಾಡಿದವರು ತಿಳಿದುಕೊಂಡರೆ ಆ ಅಧಿಕಾರಿಯವರ ಕ್ರೆಡಿಬಿಲಿಟಿಗೇ ತೊಡಕು. ನನ್ನ ಕೆಲಸಗಳ ನಡುವೆ ಎಲ್ಲರಿಗೂ ನಾನಲ್ಲ, ನಾನಲ್ಲ ಎಂದು ವಿವರಣೆ ಕೊಡಲು ನನಗೂ ಅಸಾಧ್ಯ. ಆದ್ದರಿಂದ ನನ್ನ ಈ ಆಡಳಿತಾತ್ಮಕ ಬಿಕ್ಕಟ್ಟನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ.
ಇಲ್ಲವೇ ನನ್ನನ್ನು ಜಂಟಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ರೆ ಈ ಕರೆಗಳಿಗೆ ಸಮರ್ಥವಾಗಿ ಉತ್ತರಿಸಬಹುದು!! ಸರ್ಕಾರದ ಸೇವೆ ಮಾಡುವಷ್ಟು ಅನುಭವ ಆಗಿದೆ!!! ಆಗ ರಾಂಗ್ ಡಯಲಿಂಗ್ ಸಮಸ್ಯೆ ಮಂಗಮಾಯ !
ಸುಳ್ಳು ಸುದ್ದಿ ಹಂಚುವವರ ವಿರುದ್ಧ ತಾವು ಕಠಿಣ ಕ್ರಮ ಕೈಗೊಳ್ಳುವುದಾಗಿ ಪದೇ ಪದೇ ಹೇಳಿದ್ದರಿಂದ, ನನಗೂ ಪದೇ ಪದೇ ಅನಗತ್ಯ ಕರೆಗಳು ಬಂದಿದ್ದರಿಂದ ಈ ವಿನಂತಿಯನ್ನು ಮಾಡುತ್ತಿದ್ದೇನೆ.
Breaking: ಬಿಪಿಎಲ್ ಕಾರ್ಡುದಾರರಿಗೆ ಬಂಪರ್: 5 ಕೆಜಿ ಅಕ್ಕಿ ಜತೆಗೆ ಹಣ ನೀಡಲು ಸರ್ಕಾರ ತೀರ್ಮಾನ
ಹೀಗೆಂದು ಬೇಳೂರು ಸುದರ್ಶನ ಬುಧವಾರ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ತಮಾಷೆಯ ಕಾಮೆಂಟ್‌ಗಳೂ ಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ