ಲೋಕಾಯುಕ್ತ ದಾಳಿ ವೇಳೆ ಸಿಕ್ಕಿಬಿದ್ದ ಕೆ.ಆರ್.ಪುರಂ ತಹಶಿಲ್ದಾರ್ ಆಗಿರೋ ಅಜಿತ್ ಕುಮಾರ್ ರೈ ಅವರ ಹಿನ್ನೆಲೆ ಏನು? ಯಾವ ಊರು? ಬೇನಾಮಿ ಆಸ್ತಿ ಸಂಪಾದನೆ ಮಾಡಿದ್ದು ಹೇಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು (ಜೂ.28): ರಾಜ್ಯಾದ್ಯಂತ ಲೋಕಾಯುಕ್ತ ದಾಳಿ ನಡೆದಿದೆ. ಅದರಲ್ಲೂ ಪ್ರಮುಖವಾಗಿ ಹೆಚ್ಚು ಸುದ್ದಿಯಲ್ಲಿರುವುದು ಬೆಂಗಳೂರಿನ ಕೆ.ಆರ್.ಪುರಂ ತಹಶಿಲ್ದಾರ್ ಆಗಿರೋ ಅಜಿತ್ ಕುಮಾರ್ ರೈ ಮಾಲಾಡಿ. ಕೋಟ್ಯಂತರ ರೂ ಅಕ್ರಮ ಆಸ್ತಿ, ಲಕ್ಷಾಂತರ ರೂ ಹಣ, ಕೆ.ಜಿ ಗಟ್ಟಲೆ ಆಭರಣಗಳು, ಬೆಲೆಬಾಳುವ ವಿದೇಶಿ ಮದ್ಯ, ಐಶಾರಾಮಿ ಕಾರು, ಚಂದ್ರಾಲೇಔಟ್ ನಿವಾಸದಲ್ಲಿ 40 ಲಕ್ಷ ನಗದು, ವಾಚ್ ಗಳು ಸೇರಿ ಐಷಾರಾಮಿ ವಸ್ತುಗಳು ಹಾಗೂ ದಾಖಲೆಗಳು ಇತ್ಯಾದಿ ಅಜಿತ್ ಮನೆಯಲ್ಲಿ ಪತ್ತೆಯಾಗಿದೆ. ಅಜಿತ್ ಆಪ್ತರ ಮನೆ, ಸಹೋದರನ ಮನೆ. ಆತನ ಹುಟ್ಟೂರು ಸೇರಿ ಹಲವು ಕಡೆ ಈ ದಾಳಿ ನಡೆದಿದ್ದು, ಹಲವು ಮಹತ್ವದ ದಾಖಲೆಯನ್ನು ಲೋಕಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಷ್ಟಕ್ಕೂ ಯಾರು ಈ ಅಜಿತ್ ಕುಮಾರ್ ರೈ? ಅವರ ಹಿನ್ನೆಲೆ ಏನು? ಯಾವ ಊರು? ಎಷ್ಟು ಅಕ್ರಮ ಆಸ್ತಿ ಲಭಿಸಿದೆ? ಬೇನಾಮಿ ಆಸ್ತಿ ಸಂಪಾದನೆ ಮಾಡಿದ್ದು ಹೇಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಅಜಿತ್ ಗೆ ತಹಶೀಲ್ದಾರ್ ಕೆಲಸ ಸಿಕ್ಕಿದ್ದೇಗೆ?
ಕೋಟ್ಯಾದಿಪತಿಯಾಗಿರೋ ಅಜಿತ್ ಕುಮಾರ್ ರೈ ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಸೊರಕೆಯವರು. ತಂದೆ ದಿ.ಆನಂದ್ ರೈ ಸರ್ಕಾರಿ ಸರ್ವೇಯರ್(ಭೂ ಮಾಪಕ) ಆಗಿ ಕೆಲಸ ಮಾಡುತ್ತಿದ್ದರು. ಸರ್ವೇಯರ್ ಆಗಿದ್ದ ತಂದೆ ಆನಂದ ರೈ 51. ವರ್ಷ ವಯಸ್ಸಿನಲ್ಲಿ ಮರಣ ಹೊಂದಿದ್ದರು. ಮರಣ ನಂತರ ಅನುಕಂಪದ ಆಧಾರದಲ್ಲಿ ಅಜಿತ್ ರೈಗೆ ಸರ್ಕಾರಿ ಕೆಲಸ ಸಿಕ್ಕಿತ್ತು. ಸಣ್ಣ ವಯಸ್ಸಿನಲ್ಲೇ ಕಂದಾಯ ನಿರೀಕ್ಷಕರಾಗಿ ಆಗಿ ಬೆಂಗಳೂರಿನಲ್ಲೇ ಸರ್ಕಾರಿ ಕೆಲಸಕ್ಕೆ ನೇಮಕವಾಗಿದ್ದ ಈತ ಅಲ್ಲಿಂದ ಭಡ್ತಿ ಪಡೆದು ಉಪ ತಹಶೀಲ್ದಾರ್ ಬಳಿಕ ತಹಶಿಲ್ದಾರ್ ಹುದ್ದೆಗೆ ನೇಮಕವಾಗಿದ್ದ. ಓರ್ವ ಸಹೋದರ ಕೂಡ ಬೆಂಗಳೂರಿನಲ್ಲೇ ವಾಸವಾಗಿದ್ದು, ಪುತ್ತೂರಿನ ಸೊರಕೆಯಲ್ಲಿ ತಾಯಿ ಮಾತ್ರ ಇದ್ದಾರೆ. ತಂದೆ ದಿ.ಅನಂದ ರೈ ಅವರು ಸೊರಕೆಯಲ್ಲಿ ಮನೆ ಮತ್ತು ತೋಟ ಮಾಡಿದ್ದಾರೆ. ಸರ್ಕಾರಿ ಕೆಲಸದಲ್ಲಿ ಬಹುತೇಕ ದಕ್ಷಿಣ ಕನ್ನಡ ಜಿಲ್ಲೆಯ ಹೊರಗೆ ಅಜಿತ್ ರೈ ಪೋಸ್ಟಿಂಗ್ ಆಗಿದ್ದ. ಹೀಗಾಗಿ ಅಜಿತ್ ರೈ ದ.ಕ ಜಿಲ್ಲೆಯ ಹೊರಗೆ ಬೆಂಗಳೂರು ಸೇರಿ ಹಲವಡೆ ಕೋಟ್ಯಂತರ ರೂ ಆಸ್ತಿ ಮಾಡಿಟ್ಟಿದ್ದಾರೆ. ಇಂದು ಪುತ್ತೂರಿನಲ್ಲಿರೋ ಮನೆ ಮೇಲೂ ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೆಲಸದಿಂದ ಅಮಾನತುಗೊಂಡಿದ್ದ ಅಜಿತ್ ರೈ:
ಬಿಬಿಎಂಪಿ ಕೈಗೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆಗೆ ಸಹಕರಿಸಿದ ಅರೋಪದಡಿ ಬೆಂಗಳೂರು ಪೂರ್ವ ತಾಲೂಕಿನ (ಕೆ.ಆರ್.ಪುರ) ತಹಶೀಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈಯನ್ನ ಸರ್ಕಾರ 2022, ನವೆಂಬರ್ ನಲ್ಲಿ ಅಮಾನತು ಮಾಡಲಾಗಿತ್ತು. ಬಿಬಿಎಂಪಿ ವತಿಯಿಂದ ಮಹದೇವಪುರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡುತ್ತಿದ್ದರೂ ಇದಕ್ಕೆ ಕಾನೂನಾತ್ಮಕವಾಗಿ ತೊಡಕು ಉಂಟಾಗುತ್ತಿತ್ತು. ಈ ಪ್ರಕರಣದಲ್ಲಿ ತಹಶೀಲ್ದಾರ್ ಎಸ್. ಅಜಿತ್ ಕುಮಾರ್ ರೈ ಒತ್ತುವರಿದಾರರಿಗೆ ಸಹಕಾರ ನೀಡುವ ಮೂಲಕ ಕಾನೂನಾತ್ಮಕವಾಗಿ ತೆರವು ಮಾಡದಂತೆ ನೋಡಿಕೊಂಡಿದ್ದ. ಒತ್ತುವರಿ ತೆರವು ಕಾರ್ಯಕ್ಕೆ ತಹಶೀಲ್ದಾರ್ ವತಿಯಿಂದ ನಿರಂತರ ತಕರಾರು ಉಂಟಾಗುವಂತೆ ಮಾಡಿದ್ದ. ಜತೆಗೆ ಒತ್ತುವರಿದಾರರು ನ್ಯಾಯಾಲಯಗಳಿಂದ ಸ್ಟೇ ಆದೇಶ ತರಲು ಕೂಡ ನೆರವಾಗಿದ್ದ. ಆದರೆ ಅಮಾನತು ಆದೇಶದ ವಿರುದ್ದ ಕೆ.ಎಟಿಯಲ್ಲಿ ಪ್ರಶ್ನಿಸಿ ತಡೆ ತೆರವು ಮಾಡಿದ್ದ ಅಜಿತ್ ರೈ ಮತ್ತೆ ಬೆಂಗಳೂರು ಪೂರ್ವ ತಾಲೂಕಿನ (ಕೆ.ಆರ್.ಪುರ) ತಹಶೀಲ್ದಾರ್ ಆಗಿ ನೇಮಕಗೊಂಡಿದ್ದ.
ಸಹೋದರನ ಮನೆಯಲ್ಲಿ ಸಿಕ್ಕಿದ್ದೆಷ್ಟು?
ತಹಸೀಲ್ದಾರ್ ಅಜಿತ್ ರೈ ಮನೆ ಮೇಲೆ ಲೋಕಾ ದಾಳಿ ಪ್ರಕರಣ ಸಂಬಂಧ ಸಹಕಾರನಗರದಲ್ಲಿ ಲೋಕಾಯುಕ್ತ ಎಸ್ಪಿ ಅಶೋಕ್ ಮಾಹಿತಿ ನೀಡಿ, ತಹಸೀಲ್ದಾರ್ ಅಜಿತ್ ರೈ ವಿರುದ್ಧ ಆದಾಯಕ್ಕೆ ಮೀರಿದ ಆಸ್ತಿಗಳಿಸಿದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಿಸಿದ್ದೇವೆ. ಹೀಗಾಗಿ ಅಜಿತ್ ರೈ ಗೆ ಸಂಬಂಧಿಸಿದ 12 ಕಡೆ ದಾಳಿ ಮಾಡಲಾಗಿದೆ. ಸಹಕಾರ ಮನೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಇದುವರೆಗೂ ಸಹೋದರನ ಮನೆಯಲ್ಲಿ 40 ಲಕ್ಷ ಹಣ ,ಸಹಕಾರ ನಗರ ಮನೆಯಲ್ಲಿ 2 ಲಕ್ಷ ಹಣ, 700 ಗ್ರಾಂ ಚಿನ್ನಾಭರಣ ಸಿಕ್ಕಿದೆ. ಎಲ್ಲಾ ಮಹಜರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಮಹಜರ್ ಬಳಿಕ ಹಣ ,ಚಿನ್ನಾಭರಣ ,ಲಿಕ್ಕರ್, ಕಾರ್ ಗಳ ವಿವರ ಸಿಗಲಿದೆ. ಸಂಜೆ ವೇಳೆಗೆ ಪೂರ್ಣ ಮಾಹಿತಿ ನೀಡಲಾಗುವುದು ಎಂದಿದ್ದಾರೆ.
ಐಶಾರಾಮಿ ಅಪಾರ್ಟ್ಮೆಂಟ್ ನಲ್ಲಿ ವಾಸ:
ಸಹಕಾರ ನಗರದಲ್ಲಿ ಅಜಿತ್ ರೈ ಐಷಾರಾಮಿ ಅಪಾರ್ಟ್ಮೆಂಟ್ ನಲ್ಲಿ ದಾಳಿ ನಡೆದಿದೆ. ಸಹಕಾರನಗರದ ಪಾರ್ಚೂನ್ ಸೆಂಟರ್ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಐಟಿಸಿ ಪಾರ್ಕ್ ಬಳಿ ಈ ಮನೆ ಇದೆ. ಅಪಾರ್ಟ್ಮೆಂಟ್ ನಲ್ಲಿ ಮೂರು ಪ್ಲಾಟ್ ಗಳು ಇದ್ದು, ಒಂದು ಪ್ಲಾಟ್ ಅಂದಾಜು ಮೂರು ಕೋಟಿ ಮೌಲ್ಯ ಹೊಂದಿದೆ. ಮೊದಲನೇ ಮಹಡಿಯಲ್ಲಿ ತಹಸೀಲ್ದಾರ್ ಅಜಿತ್ ರೈ ವಾಸವಿದ್ದು, ಕೋಟಿ ಕೋಟಿ ಖರ್ಚು ಮಾಡಿ ಇಂಟಿರಿಯರ್ ಮಾಡಿಸಿದ್ದಾನೆ.
ಸಹಕಾರ ನಗರದ ಅಜೀತ್ ರೈ ಮನೆಯಲ್ಲಿ ಲಿಕ್ಕರ್ ಬಾಟಲ್ ಗಳ ಪತ್ತೆಯಾಗಿದೆ. ವಿದೇಶಿ ಲಿಕ್ಕರ್ ಗಳು ತಪಾಸಣೆ ವೇಳೆ ಪತ್ತೆಯಾಗಿದ್ದು, ಒಂದೊಂದು ಬಾಟಲ್ 5 ಸಾವಿರದಿಂದ 50 ಸಾವಿರ ಹಾಗೂ ಒಂದು ಲಕ್ಷದವರೆಗೆ ಇವೆ.
ಲೋಕಾಯುಕ್ತ ಡಿವೈಎಸ್ಪಿ ಪ್ರಮೋದ್ ನೇತೃತ್ವದಲ್ಲಿ ನಾಲ್ಕು ಕಾರುಗಳಲ್ಲಿ ಬೆಳ್ಳಂಬೆಳಗ್ಗೆ 4.30ರ ಸಮಯದಲ್ಲಿ ಅಜಿತ್ ರೈ ಮನೆ ಮೇಲೆ ದಾಳಿ ನಡೆದಿದೆ. ಸುಮಾರು 15 ಕ್ಕೂ ಹೆಚ್ಚು ಅಧಿಕಾರಿಗಳು ಅಜಿತ್ ರೈ ವಾಕಿಂಗ್ ಹೋಗುವ ಮುನ್ನ ದಾಳಿ ಮಾಡಿದ್ದು, ಅಜಿತ್ ರೈ ವಾಕಿಂಗ್ ಹೋಗಿದ್ರೆ, ತಪ್ಪಿಸಿಕೊಳ್ಳುವ ಸಾಧ್ಯತೆ ಇತ್ತು. ಅಜಿತ್ ಮನೆಯ ಪಾರ್ಕಿಂಗ್ ನಲ್ಲಿ ಬೈಕ್ ಹಾಗೂ ಕಾರ್ ಗಳ ತಪಾಸಣೆ ನಡೆದಿದೆ. ಐಶಾರಾಮಿ ಕಾರು, ಜೀಪ್ ಪತ್ತೆಯಾಗಿದೆ. ಇದಲ್ಲದೆ, ಮಂಗಳೂರಿನ ಕೇಯೂರು ನಲ್ಲಿರುವ ತಾಯಿ ಮನೆ, ದೇವನಹಳ್ಳಿಯ ಇಳತ್ತೋರೆ ನಲ್ಲಿರುವ ಮನೆ, ದೊಡ್ಡಬಳ್ಳಾಪುರದಲ್ಲಿ ಅಜಿತ್ ಗೆ ಸಂಬಂಧಿಸಿದ ಮನೆ, ಚಂದ್ರಾಲೇಔಟ್ ಮನೆಯಲ್ಲಿ ದಾಳಿ ನಡೆದಿದೆ.
ಇನ್ನು ತಹಶಿಲ್ದಾರ್ ಅಜಿತ್ ರೈಗೆ ಆಪ್ತನಾಗಿರುವ ಗೌರವ್ ಶೆಟ್ಟಿ ಮನೆ ಮೇಲೂ ದಾಳಿ ನಡೆದಿದೆ. ಬಸವೇಶ್ವರ ನಗರದ ಗೌರವ್ ಶೆಟ್ಟಿ ನೆ ಮೇಲೆ ದಾಳಿ ನಡೆದಿದ್ದು, ಬೆನಾಮಿ ಆಸ್ತಿ ಪತ್ತೆಯಾಗಿದೆ. ಇಷ್ಟು ಮಾತ್ರವಲ್ಲದೆ ಅಜಿತ್ ರೈ ಸಂಬಂಧಿಕರು,ಕುಟುಂಬಸ್ಥರು ಸೇರಿದಂತೆ ಆಪ್ತ ವಲಯದ ಹಲವು ಕಡೆ ದಾಳಿ ನಡೆದಿದೆ.