ಭೀಕರ ಪ್ರವಾಹ: ನೆರೆ ನಷ್ಟದ ಪೂರ್ತಿ ಮಾಹಿತಿ ಬಳಿಕ ಕೇಂದ್ರಕ್ಕೆ ಮನವಿ, ಸಿಎಂ

By Kannadaprabha NewsFirst Published Oct 23, 2020, 9:57 AM IST
Highlights

ಪ್ರವಾಹಕ್ಕೆ 10 ಬಲಿ, 993 ಪ್ರಾಣಿ ಸಾವು| 3 ಲಕ್ಷ ಹೆಕ್ಟೇರ್‌ ಬೆಳೆ, 12,700 ಮನೆಗೆ ಹಾನಿ| ಮನೆ ಹಾನಿಯಾದ ಕುಟುಂಬಕ್ಕೆ ತಲಾ 10 ಸಾವಿರ ರು. ಪರಿಹಾರ: ಅಶೋ​ಕ್‌| ಅದಷ್ಟು ಬೇಗ ವರದಿ ತರಿಸಿಕೊಂಡು ಕೇಂದ್ರಕ್ಕೆ ಮನವಿ ಮಾಡುವ ಕುರಿತು ಸಮಾಲೋಚನೆ| 

ಬೆಂಗಳೂರು(ಅ.23): ರಾಜ್ಯದಲ್ಲಿ ಉಂಟಾದ ಪ್ರವಾಹದಿಂದಾಗಿ 10 ಜನರು ಪ್ರಾಣ ಕಳೆದುಕೊಂಡಿದ್ದು, 993 ಜಾನುವಾರುಗಳು ಸಾವನ್ನಪ್ಪಿವೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಸಮರೋಪಾದಿಯಲ್ಲಿ ನೆರೆ ಪರಿಹಾರ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಳೆಗೆ 6.3 ಲಕ್ಷ ಹೆಕ್ಟೇರ್‌ ಬೆಳೆಹಾನಿಯಾಗಿದೆ. 12,700 ಮನೆಗಳು ಹಾನಿಯಾಗಿವೆ. ಮನೆ ಹಾನಿಯಾಗಿರುವ ಕುಟುಂಬಗಳಿಗೆ ತಲಾ 10 ಸಾವಿರ ರು.ನಂತೆ 12,300 ಕುಟುಂಬಗಳಿಗೆ ಒಟ್ಟು 35.48 ಕೋಟಿ ರು. ಪಾವತಿಸಲಾಗಿದೆ. ಉಳಿದವರಿಗೆ ಶೀಘ್ರದಲ್ಲಿಯೇ ಬಾಕಿ ಪಾವತಿಸಲಾಗುತ್ತದೆ. ಅಲ್ಲದೇ, ನಷ್ಟದ ಪ್ರಮಾಣವನ್ನು ಅಂದಾಜಿಸಲಾಗುತ್ತಿದೆ. ರಸ್ತೆ, ಕಟ್ಟಡಗಳ ಹಾನಿ ವರದಿಯನ್ನು ಅವಲೋಕಿಸಲಾಗುತ್ತಿದ್ದು, ಜಿಲ್ಲಾಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಕಲಬುರಗಿ, ವಿಜಯಪುರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ 14 ತಾಲೂಕುಗಳ 247 ಗ್ರಾಮಗಳನ್ನು ಪ್ರವಾಹ ಸಂಭವಿಸಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ. ಸುಮಾರು 136 ಗ್ರಾಮಗಳ 43,158 ಜನರನ್ನು ಸ್ಥಳಾಂತರ ಮಾಡಲಾಗಿದೆ. 5016 ಜನರನ್ನು ಪ್ರವಾಹದಿಂದ ಪಾರು ಮಾಡಲಾಗಿದೆ. 233 ಕಾಳಜಿ ಕೇಂದ್ರಗಳನ್ನು ಆರಂಭಿಸಿ 38,676 ನಿರಾಶ್ರಿತರಿಗೆ ಆಶ್ರಯ ಒದಗಿಸಲಾಗಿದೆ. ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 666.50 ಕೋಟಿ ರು. ಅನುದಾನ ಲಭ್ಯ ಇದೆ. ಆ.8ರಂದು ಪ್ರವಾಹ ಪರಿಸ್ಥಿತಿ ನಿಭಾಯಿಸಲು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಹಾವೇರಿ, ಮೈಸೂರು, ಚಾಮರಾಜನಗರ, ಕೊಡಗು ಮತ್ತು ಧಾರವಾಡ ಜಿಲ್ಲೆಗಳ ಒಟ್ಟು 10 ಜಿಲ್ಲೆಗಳಿಗೆ ತಲಾ 5 ಕೋಟಿ ರು. ನಂತೆ 50 ಕೋಟಿ ರು. ಮತ್ತು ಉಡುಪಿ ಜಿಲ್ಲೆಗೆ ಅ.10ಕ್ಕೆ 17.93 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹ ತಂದ ಸಂಕಷ್ಟ: ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಯಡಿಯೂರಪ್ಪ

ವಿಜಯಪುರ, ಬೀದರ್‌ಗೆ ತಲಾ 10 ಕೋಟಿ ರು. ಕಲಬುರಗಿಗೆ 20 ಕೋಟಿ ರು. ಯಾದಗಿರಿ 15 ಕೋಟಿ ರು. ರಾಯಚೂರಿಗೆ 5 ಕೋಟಿ ರು.ನಂತೆ ಒಟ್ಟು 60 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಕನಿಷ್ಠ 20 ಕೋಟಿ ರು. ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಎಸ್‌ಡಿಆರ್‌ಎಫ್‌ನಡಿ ಪ್ರವಾಹ ಪರಿಹಾರಕಾಕಗಿ 162.92 ಕೋಟಿ ರು. ರಕ್ಷಣಾ ಸಾಮಗ್ರಿಗಾಗಿ ಅಗ್ನಿಶಾಮಕ ಇಲಾಖೆಗೆ 20.09 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

4 ಪಟ್ಟು ಅನುದಾನ: 

ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ 724 ಕೋಟಿ ರು. ಎಸ್‌ಡಿಆರ್‌ಎಫ್‌, 2669 ಕೋಟಿ ರು. ಎನ್‌ಡಿಆರ್‌ಎಫ್‌ ನಿಧಿ ಬಿಡುಗಡೆ ಮಾಡಲಾಗಿದೆ. ಆದರೆ, ಎನ್‌ಡಿಎ ಸರ್ಕಾರದ ಅವಧಿಯಲ್ಲಿ 1332 ಕೋಟಿ ರು. ಎಸ್‌ಡಿಆರ್‌ಎಫ್‌ ಮತ್ತು 9279 ಕೋಟಿ ರು. ಎನ್‌ಡಿಆರ್‌ಎಫ್‌ ನಿಧಿ ಬಿಡುಗಡೆಯಾಗಿದೆ ಎಂದು ಕಾಂಗ್ರೆಸ್‌ಗೆ ಚಾಟಿ ಬೀಸಿದರು.

ನೆರೆ ನಷ್ಟದ ಪೂರ್ತಿ ಮಾಹಿತಿ ಬಳಿಕ ಕೇಂದ್ರಕ್ಕೆ ಮನವಿ

ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದಾಗಿ ಸಂಭವಿಸಿದ ನಷ್ಟದ ಕುರಿತು ಸಂಪೂರ್ಣ ಮಾಹಿತಿ ಬಂದ ಬಳಿಕ ಕೇಂದ್ರಕ್ಕೆ ನೆರವಿಗೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅತಿವೃಷ್ಟಿಯಿಂದ ಆಗಿರುವ ಹಾನಿಯ ಕುರಿತು ಸಮೀಕ್ಷೆ ಮಾಡಿದ್ದೇವೆ. ಕಳೆದ ಬಾರಿಗಿಂತಲೂ ಈ ಬಾರಿ ಹಾನಿ ಪ್ರಮಾಣ ಹೆಚ್ಚಾಗಿದೆ. ಭಾರೀ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಸಂತ್ರಸ್ತರಿಗೆ ಹೆಚ್ಚಿನ ನೆರವು ನೀಡಬೇಕು. ನಷ್ಟದ ಅಂದಾಜು ಮೊತ್ತದ ಬಗ್ಗೆ ಸಂಪೂರ್ಣವಾದ ವರದಿ ಬರಬೇಕಾಗಿದೆ. ಬಳಿಕ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು. ಮನೆ ಕಳೆದುಕೊಂಡವರಿಗೆ ತಕ್ಷಣ 10 ಸಾವಿರ ರು. ತಾತ್ಕಾಲಿಕ ಪರಿಹಾರ ವಿತರಣೆ ಮಾಡಲಾಗಿದೆ ಎಂದರು.

ಸಚಿವ ಸಂಪುಟ ಸಭೆಯಲ್ಲಿ ನೆರೆ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳು ಚರ್ಚೆ ನಡೆಸಿದರು. ಅದಷ್ಟು ಬೇಗ ವರದಿ ತರಿಸಿಕೊಂಡು ಕೇಂದ್ರಕ್ಕೆ ಮನವಿ ಮಾಡುವ ಕುರಿತು ಸಮಾಲೋಚನೆ ನಡೆಸಲಾಯಿತು. ಅಲ್ಲದೇ, ಎನ್‌ಡಿಆರ್‌ಎಫ್‌ ನಿಯಮಾವಳಿ ತಿದ್ದುಪಡಿ ಬಗ್ಗೆಯೂ ಚರ್ಚಿಸಲಾಯಿತು.
 

click me!