ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದೆ.
ಬೆಂಗಳೂರು (ಅ.23): ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಸಾರ್ವಜನಿಕರನ್ನು ವಂಚಿಸುವ ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲು ರಾಜ್ಯ ಸರ್ಕಾರ ಮುಂದಾಗಿದೆ. ಇಂತಹ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ವಿಧೇಯಕಕ್ಕೆ ನಿಯಮಗಳನ್ನು ರೂಪಿಸಲು ಸಚಿವ ಸಂಪುಟ ಸಭೆ ಮಹತ್ವದ ನಿರ್ಣಯ ಕೈಗೊಂಡಿದೆ.
ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾಟಕ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ವಿಧೇಯಕ -2020’ಕ್ಕೆ ಅನುಮೋದನೆ ನೀಡಲಾಗಿದೆ. ಮಸೂದೆಗೆ ವಿಧಾನಮಂಡಲದ ಒಪ್ಪಿಗೆ ಬೇಕಿದೆ. ತೀರಾ ತುರ್ತು ಅಗತ್ಯ ಬಿದ್ದರೆ ಸುಗ್ರೀವಾಜ್ಞೆ ಹೊರಡಿಸುವ ಅವಕಾಶವೂ ಎಂದು ಮೂಲಗಳು ಹೇಳಿವೆ.
undefined
ಏರಿದ ಚಿನ್ನದ ದರ, ಬೆಳ್ಳಿ ಬೆಲೆ ಇಳಿಕೆ: ಇಲ್ಲಿದೆ ಅ.22 ಗೋಲ್ಡ್ ರೇಟ್! ..
ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಸಾರ್ವಜನಿಕರನ್ನು ವಂಚಿಸುವ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ವಿಧೇಯಕ ಇದಾಗಿದೆ. ರಾಜ್ಯದಲ್ಲಿ ಐಎಂಎ ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳು ಠೇವಣಿಯನ್ನು ಸಾರ್ವಜನಿಕರಿಂದ ಸಂಗ್ರಹಿಸಿ ವಂಚನೆ ಮಾಡುವ ಪ್ರಕರಣಗಳಿಗೆ ಕಡಿವಾಣ ಹಾಕಲು ಇದರಿಂದ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ವಿಧೇಯಕಕ್ಕೆ ನಿಯಮಗಳನ್ನು ರೂಪಿಸಲು ಸಂಪುಟ ಸಭೆಯು ಒಪ್ಪಿಗೆ ಸೂಚಿಸಿದೆ.
ಸುಗ್ರೀವಾಜ್ಞೆಗೂ ಸಿದ್ಧ:
ವಿಧೇಯಕಕ್ಕೆ ನಿಯಮಗಳನ್ನು ರೂಪಿಸಿ ನಂತರ ಅನುಷ್ಠಾನಗೊಳಿಸಲಾಗುವುದು. ಅಕ್ರಮ ಠೇವಣಿ ಚಟುವಟಿಕೆಗಳ ಭೀತಿಯನ್ನು ನಿಭಾಯಿಸಲು ಈ ವಿಧೇಯಕ ಸಹಾಯವಾಗಲಿದೆ. ಕಠಿಣ ಆಡಳಿತಾತ್ಮಕ ಕ್ರಮಗಳ ಕೊರತೆಯಿಂದಾಗಿ, ಪ್ರಸ್ತುತ ಇರುವ ನಿಯಂತ್ರಣಗಳನ್ನು ದುರ್ಬಳಕೆ ಮಾಡಿಕೊಂಡು, ಬಡವರು ಮತ್ತು ಕಷ್ಟಪಟ್ಟು ದುಡಿದ ಜನರು ತಮ್ಮ ಉಳಿತಾಯದ ಹಣಕ್ಕೆ ಮೋಸ ಹೋಗುವುದನ್ನು ತಪ್ಪಿಸಲಾಗುತ್ತದೆ. ಕೇಂದ್ರದ ವಿಧೇಯಕಕ್ಕೆ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಿದ ಬಳಿಕ ಕರಡು ಸಿದ್ಧಪಡಿಸಲಾಗುತ್ತದೆ. ತದನಂತರ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ವಿಧೇಯಕ ಮಂಡಿಸಿದ ಬಳಿಕ ರಾಜ್ಯದಲ್ಲಿ ಕಾಯ್ದೆಯನ್ನಾಗಿ ಪರಿವರ್ತನೆಯಾಗಲಿದೆ. ತೀರಾ ತುರ್ತು ಎನಿಸಿದಲ್ಲಿ ಸುಗ್ರೀವಾಜ್ಞೆ ಮೂಲಕ ಅನುಷ್ಠಾನಗೊಳಿಸುವ ಅವಕಾಶವೂ ಇದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರದ ರೀತಿ ರಾಜ್ಯದಲ್ಲೂ ಮಸೂದೆ
ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಇಂಥದೊಂದು ವಿಧೇಯಕವನ್ನು ಮಂಡಿಸುವುದು ಅಗತ್ಯ ಎಂದು ಮನಗಂಡ ಕೇಂದ್ರ ಸರ್ಕಾರವು ಕಳೆದ ವರ್ಷ ಈ ವಿಧೇಯಕವನ್ನು ಮಂಡಿಸಿ ಜಾರಿಗೊಳಿಸಿತ್ತು. ಕೇಂದ್ರದ ನಿರ್ಣಯದ ಆಧಾರದ ಮೇಲೆ ಇದೀಗ ರಾಜ್ಯ ಸರ್ಕಾರವು ಜಾರಿಗೊಳಿಸಲು ಮುಂದಾಗಿದೆ.