‘ಭಾಗ್ಯಲಕ್ಷ್ಮಿ’ ಯೋಜನೆ ಬಗ್ಗೆ BSY ಸರ್ಕಾರದ ಹೊಸ ತೀರ್ಮಾನ

Kannadaprabha News   | Asianet News
Published : Oct 23, 2020, 07:08 AM IST
‘ಭಾಗ್ಯಲಕ್ಷ್ಮಿ’ ಯೋಜನೆ ಬಗ್ಗೆ BSY ಸರ್ಕಾರದ ಹೊಸ ತೀರ್ಮಾನ

ಸಾರಾಂಶ

ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಹೊಸ ತೀರ್ಮಾನ ಕೈಗೊಂಡಿದೆ.. ಏನದು..?

ಬೆಂಗಳೂರು (ಅ.23):  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮಹತ್ವಾಕಾಂಕ್ಷೆ ಯೋಜನೆಯಾದ ಭಾಗ್ಯಲಕ್ಷ್ಮಿ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಬದಲು ಸುಕನ್ಯಾ ಸಮೃದ್ಧಿ ಯೋಜನೆಯಡಿ ಅಂಚೆ ಇಲಾಖೆ ಮೂಲಕ ಮುಂದುವರಿಸಲು ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ.

ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಇನ್ನು ಎಲ್‌ಐಸಿ ಬದಲು ಅಂಚೆ ಇಲಾಖೆ ಯೋಜನೆಯ ಏಜೆನ್ಸಿಯಾಗಲಿದೆ. ಭಾಗ್ಯಲಕ್ಷ್ಮೇ ಯೋಜನೆಯಡಿ ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ 1 ಲಕ್ಷ ರು. ಲಭ್ಯವಾಗುತ್ತಿತ್ತು. ಆದರೆ, ಯೋಜನೆಯನ್ನು ಮರು ವಿನ್ಯಾಸಗೊಳಿಸಿರುವ ಕಾರಣ 21 ವರ್ಷಕ್ಕೆ ಬಾಂಡ್‌ ಮೆಚ್ಯೂರಿಟಿಯಾಗಲಿದೆ. 18 ವರ್ಷದ ಬಳಿಕ ಯೋಜನೆಯ ಅರ್ಧ ಮೊತ್ತವನ್ನು ಪಡೆಯಲು ಫಲಾನುಭವಿ ಅರ್ಹರಾಗಿರುತ್ತಾರೆ.

ಅಧಿಕಾರ ಬಿಟ್ಟು ಕೆಳಗಿಳಿಯಿರಿ, ನಾವು ಮ್ಯಾನೇಜ್‌ ಮಾಡ್ತೇವೆ: ಬಿಎಸ್‌ವೈ ಸರ್ಕಾರಕ್ಕೆ ಸಿದ್ದು ಟಾಂಗ್‌ .

ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಎಲ್‌ಐಸಿ, ಬಾಂಡ್‌ ಮೆಚ್ಯೂರಿಟಿಯಾದ ಬಳಿಕ 1 ಲಕ್ಷ ರು. ಪಾವತಿ ಮಾಡಲು ತಕಾರರು ಮಾಡಿತ್ತು. ಕಡಿಮೆ ಬಡ್ಡಿದರ ಇರುವ ಕಾರಣ ಕಡಿಮೆಯಾಗುವ ಮೊತ್ತವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯ ಮಾಡಿತ್ತು. ಸರ್ಕಾರವು ಒಮ್ಮೆ ಪತ್ರಿ ಮಗುವಿಗೆ 19,300 ರು. ಪಾವತಿಸುತ್ತಿತ್ತು. ಬಾಂಡ್‌ ಮೆಚ್ಯೂರಿಟಿಯಾದ ನಂತರ 1 ಲಕ್ಷ ರು. ಎಲ್‌ಐಸಿ ನೀಡಬೇಕಾಗಿತ್ತು. ಇದಕ್ಕೆ ತಕರಾರು ಮಾಡಿದ ಎಲ್‌ಐಸಿ, ಸರ್ಕಾರವು ಒಂದು ಮಗುವಿಗೆ 30 ಸಾವಿರ ರು. ಪಾವತಿಸಬೇಕು. ಇಲ್ಲದಿದ್ದರೆ 1 ಲಕ್ಷ ರು. ನೀಡಲು ಸಾಧ್ಯವಾಗಿಲ್ಲ ಎಂದು ತಿಳಿಸಿತ್ತು. ಹೀಗಾಗಿ ಭಾಗ್ಯಲಕ್ಷ್ಮೇ ಯೋಜನೆಯನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ವರ್ಗಾಯಿಸಲಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆಯಡಿ ರಾಜ್ಯ ಸರ್ಕಾರವು ಪ್ರತಿ ಮಗುವಿಗೆ ವರ್ಷಕ್ಕೆ 3 ಸಾವಿರ ರು.ನಂತೆ 15 ವರ್ಷಗಳ ಕಾಲ ಪಾವತಿಸಲಿದೆ. ಫಲಾನುಭವಿಗಳಿಗೆ 21 ವರ್ಷವಾದಾಗ 1.27 ಲಕ್ಷ ಮುಕ್ತಾಯ ಹಣ ಬರಲಿದೆ. ಒಂದು ವೇಳೆ ಫಲಾನುಭವಿಗಳಿಗೆ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ನಂತರದ ಶಿಕ್ಷಣಕ್ಕೆ ಹಣ ಬೇಕಿದ್ದರೆ ಆ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲು ಅವಕಾಶ ಇದೆ.

ಸಚಿವ ಸಂಪುಟ ಸಭೆಯ ತೀರ್ಮಾನಗಳು

- ಕರ್ನಾಟಕ ಭೂ ಸುಧಾರಣೆಗಳ (2ನೇ ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ

- ಬಹುಗ್ರಾಮ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಮತ್ತು ಇತರ 127 ಜನವಸತಿಗಳಿಗೆ ಬಹುಗ್ರಾಮ ಕುಡಿವ ನೀರು ಯೋಜನೆಯ ಪರಿಸ್ಕೃತ ಮೊತ್ತ 91.50 ಕೋಟಿ ರು.ಗೆ ಅನುಮೋದನೆ

- 3 ವೇಸ್ಟೆಫ್ರೆಂಚ್‌ ಕಂಪನಿಗೆ ಬಿಬಿಎಂಪಿ ವ್ಯಾಪ್ತಿಯ ಚಿಕ್ಕನಾಗಮಂಗಲದಲ್ಲಿ 500 ಮೆಟ್ರಿಕ್‌ ಟನ್‌ ಘನತ್ಯಾಜದಿಂದ ವಿದ್ಯುತ್‌ ಉತ್ಪಾದಿಸುವ ಘಟಕವನ್ನು ಸ್ಥಾಪಿಸಲು ನೀಡಿದ ಆದೇಶವನ್ನು ಹಿಂಪಡೆಯಲು ತೀರ್ಮಾನ

- ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣಕ್ಕೆ ಬೈಪಾಸ್‌ ರಸ್ತೆ ನಿರ್ಮಿಸಲು ಕಾಮಗಾರಿಯ 109.81 ಕೋಟಿ ರು. ಪರಿಷ್ಕೃತ ಅಂದಾಜಿಗೆ ಒಪ್ಪಿಗೆ

- ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ತಿಮ್ಮಾಪುರದ ರನ್ನನಗರದಲ್ಲಿನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತವನ್ನು 40 ವರ್ಷಗಳ ಅವಧಿಗೆ ಎಲ್‌ಆರ್‌ಓಟಿ ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಅನುಮತಿ

- ಕೇಂದ್ರಿಯ ಪ್ಲಾಸ್ಟಿಕ್ಸ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆಯ (ಸಿಪೇಟ್‌) ಅತ್ಯಾಧುನಿಕ ಪಾಲಿಮರ್‌ ವಿನ್ಯಾಸ ಮತ್ತು ಅಭಿವೃದ್ಧಿ ಸಂಶೋಧನಾ ಪ್ರಯೋಗಾಲಯವನ್ನು ಬೆಂಗಳೂರಿಸನಲ್ಲಿ ಸ್ಥಾಪಿಸಲು ಹೆಚ್ಚುವರಿ ಕಟ್ಟಡ ನಿರ್ಮಾಣ ವೆಚ್ಚ 19.04 ಕೋಟಿ ರು. ಪೈಕಿ 9.52 ಕೋಟಿ ರು. ಸರ್ಕಾರ ನೀಡಲು ಒಪ್ಪಿಗೆ

- ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ಬಿಳಿಯೂರು ಎಂಬಲ್ಲಿ ಕಿಂಡಿ ಅಣೆಕಟ್ಟು ರಚನೆ ಕಾಮಗಾರಿಯ 46.70 ಕೋಟಿ ರು. ಪರಿಷ್ಕೃತ ಅಂದಾಜಿಗೆ ಅನುಮೋದನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!
ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!