ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯವೇತನ: ಸಿಎಂ ಸೂಚನೆ| ಮುಷ್ಕರನಿತರ ಮನವೊಲಿಕೆ ಹೊಣೆ ಸಚಿವ ಸುಧಾಕರ್‌ಗೆ| ವಿದ್ಯಾರ್ಥಿಗಳೊಂದಿಗೂ ಮಾತನಾಡಿ ಸರ್ಕಾರ ತಮ್ಮ ಪರವಾಗಿದ್ದು, ಬಾಕಿ ಇರುವ ಪೂರ್ಣ ಶಿಷ್ಯ ವೇತನ ಕೊಡಿಸಲು ಸರ್ಕಾರ ಕ್ರಮ ವಹಿಸಲಿದೆ ಎಂದು ತಿಳಿಸಿದ ಸಿಎಂ|
ಬೆಂಗಳೂರು(ಜು.13): ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯೊಂದಿಗೆ ಮಾತನಾಡಿ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬಾಕಿ ಇರುವ ಶಿಷ್ಯ ವೇತನ ಕೊಡಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಸೂಚಿಸಿದ್ದಾರೆ.
ಕಾಲೇಜಿನಿಂದ ಬಾಕಿ ಇರುವ 16 ತಿಂಗಳಿಂದ ಶಿಷ್ಯ ವೇತನ ಕೊಡಿಸುವಂತೆ ಆಗ್ರಹಿಸಿ ವೈದ್ಯಕೀಯ ವಿದ್ಯಾರ್ಥಿಗಳು ಹಲವು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿರುವ ಮುಖ್ಯಮಂತ್ರಿ ಅವರು ಕಾಲೇಜಿನ ಆಡಳಿತ ಮಂಡಳಿ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಸಚಿವ ಸುಧಾಕರ್ ಅವರಿಗೆ ಭಾನುವಾರ ಸೂಚನೆ ನೀಡಿದ್ದಾರೆ. ಕಾಲೇಜು ಆಡಳಿತ ಮಂಡಳಿ ಸರ್ಕಾರದ ಮನವೊಲಿಕೆಗೆ ಒಪ್ಪದೆ ಇದ್ದರೆ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಮಂಡಳಿಗೆ (ಎಂಸಿಐ) ಪತ್ರ ಬರೆಯಲು ಕೂಡ ಸೂಚನೆ ನೀಡಿದ್ದಾರೆ.
ಸ್ಕಾಲರ್‌ಶಿಪ್‌ಗೆ ಆಗ್ರಹಿಸಿ JJM ಕಾಲೇಜ್ ವಿದ್ಯಾರ್ಥಿಗಳ ಪ್ರತಿಭಟನೆ
ಜೊತೆಗೆ, ವಿದ್ಯಾರ್ಥಿಗಳೊಂದಿಗೂ ಮಾತನಾಡಿ ಸರ್ಕಾರ ತಮ್ಮ ಪರವಾಗಿದ್ದು, ಬಾಕಿ ಇರುವ ಪೂರ್ಣ ಶಿಷ್ಯ ವೇತನ ಕೊಡಿಸಲು ಸರ್ಕಾರ ಕ್ರಮ ವಹಿಸಲಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಅನಿರ್ದಿಷ್ಟಾವಧಿ ಮುಷ್ಕರ ಕೈಬಿಡುವಂತೆ ಮನವೊಲಿಸುವ ಜವಾಬ್ದಾರಿಯನ್ನೂ ಸಚಿವ ಸುಧಾಕರ್ ಅವರಿಗೆ ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ತಿಳಿದು ಬಂದಿದೆ.