ಕೊರೋನಾ ಭೀತಿ: 'ಪೂರಕ ಪರೀಕ್ಷೆ ಇಲ್ಲದೇ ಮೊದಲ ಪಿಯು ಪಾಸ್‌ ಮಾಡಿ'

By Kannadaprabha NewsFirst Published Jul 13, 2020, 8:28 AM IST
Highlights

ಎಂಜಿನಿಯರಿಂಗ್‌, ಸಾಮಾನ್ಯ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನ ಮೂಲಕ ಮುಂದಿನ ತರಗತಿಗಳಿಗೆ ಉತ್ತೀರ್ಣ| ಇದೇ ಮಾದರಿಯಲ್ಲಿ ಪಿಯು ವಿದ್ಯಾರ್ಥಿಗಳನ್ನು ಸಹ ಪಾಸ್‌ ಮಾಡುವುದು ಸೂಕ್ತ|

ಬೆಂಗಳೂರು(ಜು.13): ಪ್ರಥಮ ಪಿಯುಸಿಯ ಪೂರಕ ಪರೀಕ್ಷೆಗಳನ್ನು ರದ್ದುಗೊಳಿಸಿ ದ್ವಿತೀಯ ಪಿಯುಗೆ ಪಾಸ್‌ ಮಾಡುವಂತೆ ಶಿಕ್ಷಣ ತಜ್ಞ ಹಾಗೂ ಬೆಂಗಳೂರು ಕೇಂದ್ರ ವಿವಿ ಸಿಂಡಿಕೇಟ್‌ ಸದಸ್ಯ ಕರಣ್‌ಕುಮಾರ್‌ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇದಕ್ಕೆ ಕೆಲವು ಶಿಕ್ಷಣ ತಜ್ಞರು ಸಹ ಸಹಮತ ಸೂಚಿಸಿದ್ದಾರೆ.

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯು ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಎಂಜಿನಿಯರಿಂಗ್‌, ಸಾಮಾನ್ಯ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನ ಮೂಲಕ ಮುಂದಿನ ತರಗತಿಗಳಿಗೆ ಉತ್ತೀರ್ಣ ಮಾಡುವಂತೆ ಘೋಷಿಸಿದೆ.

ಆನ್ ಲೈನ್ ಶಿಕ್ಷಣ ಕಷ್ಟಸಾಧ್ಯ, ಹಾಗಾಗಿ ಸುರೇಶ್ ಕುಮಾರ್ ಹೊಸ ಪರಿಹಾರ

ಇದೇ ಮಾದರಿಯಲ್ಲಿ ಪಿಯು ವಿದ್ಯಾರ್ಥಿಗಳನ್ನು ಸಹ ಪಾಸ್‌ ಮಾಡುವುದು ಸೂಕ್ತ. ಮತ್ತೊಂದು ಕಡೆ ಕೊರೋನಾ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಜು.14ರಿಂದ 22ರವರೆಗೆ ಲಾಕ್‌ಡೌನ್‌ ಘೋಷಿಸಿದೆ. ಇಂತಹ ಸಮಯದಲ್ಲಿ ಸಾಕಷ್ಟು ವೆಚ್ಚ ಮಾಡಿ ಪಿಯು ಪೂರಕ ಪರೀಕ್ಷೆ ನಡೆಸುವುದು ಸರಿಯಲ್ಲ. ಹೀಗಾಗಿ, ವಿದ್ಯಾರ್ಥಿಗಳನ್ನು ಪಾಸ್‌ ಮಾಡುವಂತೆ ಒತ್ತಾಯಿಸಿದ್ದಾರೆ.

click me!