
ಬೆಂಗಳೂರು(ಮೇ.27): ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಬರುವವರ ಮೇಲೆ ನಿಗಾ ವಹಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ದೇಶನ ನೀಡಿದ್ದಾರೆ.
ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಂತೆ, ಜಾತ್ರೆ ಸೇರಿದಂತೆ ಇತರೆ ಕಾರ್ಯಕ್ರಮಗಳ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದೂ ಅವರು ಸೂಚನೆ ಕೊಟ್ಟಿದ್ದಾರೆ.
ರಾಜ್ಯಗಳಿಗೆ ನೇರ ಲಸಿಕೆ ವಿತರಿಸಲು ಫೈಝರ್ ಕೂಡಾ ನಕಾರ!
ಬುಧವಾರ ಬೆಳಗಾವಿ, ಬಳ್ಳಾರಿ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಯ ಆಯ್ದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಪಿಡಿಓಗಳ ಜತೆ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಳ್ಳಿಗಳಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಮಾಹಿತಿ ಪಡೆದುಕೊಂಡು ಹಲವು ಸಲಹೆ-ಸೂಚನೆಗಳನ್ನು ನೀಡಿದರು. ಅಲ್ಲದೆ, ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಪ್ರಯತ್ನವನ್ನೂ ಮಾಡಿದರು.
ಹಳ್ಳಿಗಳಲ್ಲಿ ಪಾಸಿಟಿವ್ ಆದವರನ್ನು ಮನೆಯಲ್ಲಿ ಬಿಡಬಾರದು. ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಬೇಕು. ಅಲ್ಲದೇ, ಪರೀಕ್ಷೆಗಳನ್ನು ಜಾಸ್ತಿ ಮಾಡಬೇಕು. ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಂತೆ, ಜಾತ್ರೆ ಸೇರಿದಂತೆ ಇತರೆ ಕಾರ್ಯಕ್ರಮಗಳ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದರು.
'ಮಳೆಗಾಲಕ್ಕೂ ಮುನ್ನ ಮಕ್ಕಳಿಗೆ ಶೀತಜ್ವರದ ಲಸಿಕೆ ನೀಡಿ'
ಸೋಂಕಿತರಿಗೆ ನೆರವಾಗಲು ಗ್ರಾಮ ಪಂಚಾಯತ್‌ಗಳಲ್ಲಿ ಹೆಲ್ಪ್ ಡೆಸ್ಕ್ ಮತ್ತು ಹೆಲ್ಪ್‌ಲೈನ್‌ಗಳನ್ನು ಪ್ರಾರಂಭಿಸಬೇಕು. ಕಾರ್ಯಪಡೆಗಳ ಜತೆ ಕಾರ್ಯನಿರ್ವಹಿಸಲು ಸ್ವಯಂ ಸೇವಾ ಸಂಸ್ಥೆಗಳು ಮತ್ತು ದಾನಿಗಳ ನೆರವನ್ನು ಪಡೆಯಬಹುದು. ಮಕ್ಕಳು, ಮಹಿಳೆಯರು, ವಿಕಲಚೇತನರು ಮತ್ತು ವೃದ್ಧರು ತೊಂದರೆಯಲ್ಲಿದ್ದಲ್ಲಿ ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಸೋಂಕಿತರು ಮೃತಪಟ್ಟು ಮಕ್ಕಳು ಅನಾಥರಾದರೆ ಅವರನ್ನು ಯಾರೂ ನೇರವಾಗಿ ದತ್ತು ತೆಗೆದುಕೊಳ್ಳಬಾರದು. ಬದಲಾಗಿ ಮಕ್ಕಳ ರಕ್ಷಣಾ ಸಮಿತಿಗೆ ಸೇರಿಸಬೇಕು ಎಂದು ಸಲಹೆ ನೀಡಿದರು.
ಆರ್‌ಡಿಪಿಆರ್ ಸಿಬ್ಬಂದಿ ಕೊರೋನಾ ವಾರಿಯರ್ಸ್:
ಇದೇ ವೇಳೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿಯನ್ನು ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿ ಕಂದಾಯ ಇಲಾಖೆ ಸಿಬ್ಬಂದಿಗೆ ನೀಡುತ್ತಿರುವ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬೆಳಗಾವಿ ಜಿಲ್ಲೆಯ ತೊಂಡಿಕಟ್ಟಿಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್.ಎನ್. ದೇಸಾಯಿ, ಬಳ್ಳಾರಿ ಜಿಲ್ಲೆಯ ಅಲಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದಪ್ಪ, ಮೈಸೂರು ಜಿಲ್ಲೆ ವರುಣಾ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್, ಶಿವಮೊಗ್ಗ ಜಿಲ್ಲೆಯ ಅರಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ಸೇರಿದಂತೆ ಇತರರು ಮಾತನಾಡಿ, ತಮ್ಮ ಗ್ರಾಮದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಮತ್ತು ಕೈಗೊಂಡಿರುವ ಮುನ್ನಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು. ಈ ವೇಳೆ ಆರ್‌ಎಟಿ ಕಿಟ್ ಮತ್ತು ಲಸಿಕೆಗಳನ್ನು ಪೂರೈಕೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಮಂದಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಕೋವಿಡ್ ಮೊದಲ ಅಲೆ ಯಶಸ್ವಿಯಾಗಿ ನಿಯಂತ್ರಿಸುವಲ್ಲಿ ಗ್ರಾಮ ಪಂಚಾಯತ್ ಟಾಸ್ಕ್‌ಪೋರ್ಸ್‌ಗಳು ಮಹತ್ವದ ಪಾತ್ರ ವಹಿಸಿವೆ. ಇದೀಗ ಎರಡನೇ ಅಲೆಯನ್ನೂ ನಿಯಂತ್ರಿಸುವಲ್ಲಿ ಈ ಟಾಸ್ಕ್‌ಪೋರ್ಸ್‌ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸುವಲ್ಲಿ ಟಾಸ್ಕ್‌ಪೋರ್ಸ್ ಪಾತ್ರ ಅತ್ಯಂತ ಮಹತ್ವಪೂರ್ಣ ಎಂದು ತಿಳಿಸಿದರು.
ಸಂವಾದದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಇತರರು ಉಪಸ್ಥಿತರಿದ್ದರು.
'ಕೊರೋನಾ ಗೆಲ್ಲಲು ಇನ್ನೆರಡು ವರ್ಷ : ಜೈವಿಕ ಲಸಿಕೆ ಜತೆ ಸಾಮಾಜಿಕ ಲಸಿಕೆ ಬೇಕು'
ಗ್ರಾಮೀಣ ಸೋಂಕಿತರಿಗೆ ಆಹಾರ, ಔಷಧಿ ಕಿಟ್ ನೀಡಲು ಸೂಚನೆ
ಗ್ರಾಮೀಣ ಪ್ರದೇಶದಲ್ಲಿ ಹೋಮ್ ಐಸೋಲೇಷನ್‌ನಲ್ಲಿರುವ ಕೋವಿಡ್ ಸೋಂಕಿತರ ಕುಟುಂಬಗಳಿಗೆ ಆಹಾರ ಮತ್ತು ಔಷಧಿ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಮುಖ್ಯಮಂತ್ರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಸೋಂಕಿತರ ಮನೆಗಳನ್ನು ಕಂಟೇನ್ಮೆಂಟ್ ವಲಯಗಳೆಂದು ಪರಿಗಣಿಸಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆ ಕುಟುಂಬಗಳಿಗೆ ಅಗತ್ಯ ಔಷಧಿ ಮತ್ತು ಪಡಿತರ ವ್ಯವಸ್ಥೆ ಮಾಡಬೇಕು. ಸೋಂಕಿತರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಿಕೊಳ್ಳಬೇಕು. ಉಸಿರಾಟದಲ್ಲಿ ಸ್ವಲ್ಪ ಏರುಪೇರು ಕಂಡು ಬಂದರೂ ತಕ್ಷಣ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಬೇಕು. ಮನೆಯಲ್ಲಿ ಐಸೋಲೇಷನ್ ಆಗಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಇಲ್ಲದಿದ್ದರೂ ತಡ ಮಾಡದೆ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗುವ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ