ಬಿಎಸ್‌ವೈ, ಸಿದ್ದು ಬಹುತೇಕ ಚೇತರಿಕೆ| ಶೀಘ್ರ ಮತ್ತೊಮ್ಮೆ ಕೊರೋನಾ ಟೆಸ್ಟ್| ನೆಗೆಟಿವ್ ಬಂದರೆ ಸದ್ಯದಲ್ಲೇ ಡಿಸ್ಚಾರ್ಜ್| ಆಸ್ಪತ್ರೆಯಲ್ಲೇ ಇಬ್ಬರೂ ನಾಯಕರಿಂದ ಕರ್ತವ್ಯ ನಿರ್ವಹಣೆ
ಬೆಂಗಳೂರು(ಆ.10); ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊರೋನಾ ಸೋಂಕಿನಿಂದ ಬಹುತೇಕ ಗುಣಮುಖರಾಗಿದ್ದು ಆಸ್ಪತ್ರೆಯಿಂದಲೇ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಆರಾಮವಾಗಿದ್ದಾರೆ. ಸದ್ಯದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
'ಆಸ್ಪತ್ರೆಯಲ್ಲಿದ್ದೇನೆ, ಬರಲಾಗ್ತಿಲ್ಲ ನೆರೆ ಬಗ್ಗೆ ಎಚ್ಚರಿಕೆ ವಹಿಸಿ'
ಆ.2ರಂದು ಆಸ್ಪತ್ರೆಗೆ ದಾಖಲಾಗಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ಭಾನುವಾರ ಸೋಂಕು ಪರೀಕ್ಷೆ ನಡೆಸಿದ್ದು, 10ನೇ ದಿನವಾದ ಮಂಗಳವಾರ ಮತ್ತೊಮ್ಮೆ ಪರೀಕ್ಷೆ ನಡೆಯಲಿದೆ. ಫಲಿತಾಂಶ ನೆಗೆಟಿವ್ ಬಂದರೆ ಬಳಿಕ ಮತ್ತೊಂದು ಸುತ್ತಿನ ಆರೋಗ್ಯ ಪರೀಕ್ಷೆ ನಡೆಸಿ ಬಿಡುಗಡೆ ಮಾಡಬಹುದು.
ಇನ್ನು ಆ.3ರ ರಾತ್ರಿ ಆಸ್ಪತ್ರೆಗೆ ದಾಖಲಾಗಿರುವ ಸಿದ್ದರಾಮಯ್ಯ ಅವರಿಗೆ ಆ.4 ರಂದು ಸೋಂಕು ದೃಢಪಟ್ಟಿತ್ತು. ಬಳಿಕ ಜ್ವರ ಹಾಗೂ ಮೂತ್ರದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಸೋಂಕು ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಬಳಿಕ ಬಿಡುಗಡೆ ಮಾಡುವ ದಿನಾಂಕ ತಿಳಿಸಬಹುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
'ಆಸ್ಪತ್ರೆಯಲ್ಲಿದ್ದೇನೆ, ಬರಲಾಗ್ತಿಲ್ಲ ನೆರೆ ಬಗ್ಗೆ ಎಚ್ಚರಿಕೆ ವಹಿಸಿ'
ಆಸ್ಪತ್ರೆಯಿಂದಲೇ ಕರ್ತವ್ಯ:
ಆಡಳಿತ ಪಕ್ಷದ ನಾಯಕ ಹಾಗೂ ವಿರೋಧಪಕ್ಷದ ನಾಯಕರು ಒಂದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಇಬ್ಬರೂ ಆಸ್ಪತ್ರೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಡಿಯೂರಪ್ಪ ಅವರು ಆಸ್ಪತ್ರೆಯಿಂದಲೇ ಕೊರೋನಾ, ನೆರೆ ನಿರ್ವಹಣೆ ಬಗ್ಗೆ ಸೂಚನೆಗಳನ್ನು ನೀಡುತ್ತಿದ್ದಾರೆ. ಇನ್ನು ಸರ್ಕಾರದ ವೈಫಲ್ಯಗಳ ಬಗ್ಗೆ ಸಿದ್ದರಾಮಯ್ಯ ಆಸ್ಪತ್ರೆಯಿಂದಲೇ ಚಾಟಿ ಬೀಸುತ್ತಿದ್ದಾರೆ. ಅಲ್ಲದೆ ಭಾನುವಾರ ಬಾಗಲಕೋಟೆ ಜಿಲ್ಲಾಧಿಕಾರಿಗಳೊಂದಿಗೆ ನೆರೆ ನಿರ್ವಹಣೆ ಕುರಿತು ಚರ್ಚೆ ನಡೆಸಿದರು.
ಸಿದ್ದು ಆರೋಗ್ಯ ವಿಚಾರಿಸಿದ ರಾಹುಲ್ ಗಾಂಧಿ
ಕೊರೋನಾ ಸೋಂಕಿನಿಂದ ಶೀಘ್ರ ಗುಣಮುಖರಾಗುವಂತೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಭ ಹಾರೈಸಿದ್ದಾರೆ. ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ರಾಹುಲ್ ಗಾಂಧಿ ಅವರು ಆರೋಗ್ಯ ವಿಚಾರಿಸಿದರು. ಇದೇ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸಹ ದೂರವಾಣಿ ಕರೆ ಮಾಡಿ ಶೀಘ್ರ ಗುಣಮುಖವಾಗುವಂತೆ ಹಾರೈಸಿದರು ಎಂದು ತಿಳಿದುಬಂದಿದೆ.