
ಬೆಂಗಳೂರು(ಆ.10): ಕೊರೋನಾ ಸೋಂಕಿತರಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವ ಪ್ರಮಾಣ ರಾಜ್ಯದಲ್ಲಿ ಕಳೆದ 15 ದಿನಗಳಿಂದ ಗಣನೀಯವಾಗಿ ಕಡಿಮೆಯಾಗಿದೆ. ಶೇ.15.6 ರಷ್ಟು ಸೋಂಕಿತರಲ್ಲಿ ಮಾತ್ರ ಜ್ವರ, ನೆಗಡಿ, ಗಂಟಲು ನೋವಿನಂತಹ ಲಕ್ಷಣ ಕಾಣಿಸಿಕೊಳ್ಳುತ್ತಿದೆ. ಉಳಿದ ಶೇ.84.4 ರಷ್ಟು ಸೋಂಕಿತರಲ್ಲಿ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ.
ಜುಲೈ 25ರಂದು ಒಟ್ಟು ಸೋಂಕಿತರಲ್ಲಿ ಶೇ.25 ರಷ್ಟುಮಂದಿಗೆ ಸೋಂಕು ಲಕ್ಷಣಗಳಿದ್ದವು. ಜುಲೈ 17ಕ್ಕೆ ಶೇ.38 ಮಂದಿವರೆಗೆ ಸೋಂಕು ಲಕ್ಷಣ ಉಂಟಾಗಿ ಆತಂಕ ಉಂಟಾಗಿತ್ತು. ಇದೀಗ ಈ ಪ್ರಮಾಣ ಶೇ.15.6ಕ್ಕೆ ಕುಸಿದಿದೆ. ಬೆಂಗಳೂರಿನಲ್ಲಿ ಜು.25 ರಂದು ಶೇ.20.7 ರಷ್ಟಿದ್ದ ಲಕ್ಷಣವುಳ್ಳ ಸೋಂಕಿತರ ಪ್ರಮಾಣ ಶೇ.14ಕ್ಕೆ ಕಡಿಮೆಯಾಗಿದೆ. ಇನ್ನೂ ವಿಶೇಷವೆಂದರೆ ಏಳು ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಕಡಿಮೆ ಮಂದಿಯಲ್ಲಿ ಮಾತ್ರ ಸೋಂಕು ಲಕ್ಷಣ ಕಾಣಿಸಿಕೊಳ್ಳುತ್ತಿದೆ.
ಪ್ರಸ್ತುತ ಶೇ.84.4 ರಷ್ಟು ಮಂದಿಗೆ ರೋಗದ ಲಕ್ಷಣಗಳೇ ಇಲ್ಲದಿರುವುದರಿಂದ ಇಂತಹವರಿಗೆ ಕೊರೋನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಗತ್ಯವಿಲ್ಲ. ಮನೆ ಅಥವಾ ಕೊರೋನಾ ಆರೈಕೆ ಕೇಂದ್ರದಲ್ಲಿ ನಿಗಾ ವಹಿಸಿದರೆ ಸಾಕು. ಹೀಗಾಗಿ ಬಹುತೇಕ ಕೊರೋನಾ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಲಭ್ಯವಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಹಾಮಾರಿ ಕೊರೋನಾ ಸಾವಿನ ಪ್ರಮಾಣ ಇಳಿಮುಖ!
ಶೇ.10ಕ್ಕಿಂತ ಕಡಿಮೆ ಮಂದಿಗೆ ಲಕ್ಷಣ:
ರಾಜ್ಯದ ಏಳು ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಕಡಿಮೆ ಮಂದಿಗೆ ಮಾತ್ರ ಸೋಂಕು ಲಕ್ಷಣ (ಸಿಮ್ಟಮ್ಯಾಟಿಕ್) ಕಾಣಿಸಿಕೊಂಡಿದೆ. ಉಳಿದವರಲ್ಲಿ ಒಂದೂ ಲಕ್ಷಣ ಕಾಣಿಸಿಕೊಂಡಿಲ್ಲ. ಈ ಪೈಕಿ ಚಿಕ್ಕಬಳ್ಳಾಪುರದಲ್ಲಿ ಶೇ.5.4, ಬೀದರ್ ಜಿಲ್ಲೆಯಲ್ಲಿ ಶೇ.5.6, ವಿಜಯಪುರ ಶೇ.5.7, ಗದಗ ಶೇ.8.1, ಕೊಡಗು ಶೇ. 8.5, ಮಂಡ್ಯ ಶೇ.8.7, ಯಾದಗಿರಿ ಶೇ.9.1 ರಷ್ಟುಮಂದಿಗೆ ಮಾತ್ರ ಸೋಂಕು ಲಕ್ಷಣಗಳು ಗೋಚರಿಸಿವೆ. ಈ ಮೂಲಕ ಚಿಕ್ಕಬಳ್ಳಾಪುರದಲ್ಲಿ ಸೋಂಕಿತರ ಪೈಕಿ ಶೇ.94.6 ರಷ್ಟುಮಂದಿಗೆ ಯಾವುದೇ ಲಕ್ಷಣಗಳೇ ಕಾಣಸಿಕೊಂಡಿಲ್ಲ ಎಂದು ತಿಳಿದುಬಂದಿದೆ.
ಚಿತ್ರದುರ್ಗದಲ್ಲಿ ಸೋಂಕು ಲಕ್ಷಣ ಹೆಚ್ಚು:
ಹೆಚ್ಚು ಲಕ್ಷಣಗಳು ಕಾಣಿಸಿಕೊಂಡಿರುವ ಜಿಲ್ಲೆಗಳ ಪೈಕಿ ಚಿತ್ರದುರ್ಗ ಮೊದಲ ಸ್ಥಾನದಲ್ಲಿದ್ದು ಶೇ.32.2ರಷ್ಟುಮಂದಿಗೆ ಸೋಂಕು ಲಕ್ಷಣ ಕಾಣಿಸಿಕೊಂಡಿದ್ದು, ಉಳಿದ ಶೇ.67.8 ರಷ್ಟುಮಂದಿಗೆ ಲಕ್ಷಣಗಳಿಲ್ಲ. ಉಳಿದಂತೆ ಧಾರವಾಡ ಶೇ.30.9, ಹಾಸನ ಶೇ.29.5, ಕೊಪ್ಪಳ ಶೇ.28.7, ಶಿವಮೊಗ್ಗ ಶೇ.27.66, ರಾಯಚೂರು ಶೇ.26.2, ಬೆಂಗಳೂರು ನಗರದಲ್ಲಿ ಶೇ.14 ರಷ್ಟು ಮಂದಿಗೆ ಸೋಂಕು ಲಕ್ಷಣ ಕಾಣಿಸಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ