ಕಾರವಾರ ಜಿಲ್ಲಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಹಣಕಾಸು ಇಲಾಖೆಯ ಹೊಣೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು (ಸೆ.17): ಕಾರವಾರ ಜಿಲ್ಲಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಹಣಕಾಸು ಇಲಾಖೆಯ ಹೊಣೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಶುಕ್ರವಾರ ಈ ಸಂಬಂಧ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ್ ಅವರು ಮುಖ್ಯಮಂತ್ರಿಗಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ ವೇಳೆ ಈ ಭರವಸೆ ಸಿಕ್ಕಿದೆ. ಕಾಗೇರಿ ಮತ್ತು ರೂಪಾಲಿ ಅವರಿಬ್ಬರೂ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆ ಬಗ್ಗೆ ಮಾಡಿದ ಮನವರಿಕೆಗೆ ಸ್ಪಂದಿಸಿದ ಬೊಮ್ಮಾಯಿ, ‘ಶೀಘ್ರದಲ್ಲೇ ಈ ಬಗ್ಗೆ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ನೀಡುವ ಕುರಿತು ಕ್ರಮ ಕೈಗೊಳ್ಳುತ್ತೇನೆ’ ಎಂಬ ಮಾತನ್ನು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಪ್ಪಿಗೆ ಸಿಕ್ಕಿಲ್ಲ ಎಂದಿದ್ದ ಸುಧಾಕರ್: ಗುರುವಾರ ವಿಧಾನಸಭೆಯ ಕಲಾಪದಲ್ಲಿ ಕಾರವಾರ ಜಿಲ್ಲಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟಿಲ್ಲ. ಹೀಗಾಗಿ ಮತ್ತೊಮ್ಮೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲ್ಲಿದ್ದು, ಅನುಮತಿ ದೊರೆತರೆ ಅನುದಾನ ಲಭ್ಯತೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಶಾಸಕಿ ರೂಪಾಲಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದರು. ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ, ಸಿಬ್ಬಂದಿ, ಉಪಕರಣ ಹಾಗೂ ಹಣಕಾಸು ವೆಚ್ಚದ ಆರ್ಥಿಕ ಹೊರೆ ಬಗ್ಗೆ ವರದಿ ಪಡೆದು ಆರ್ಥಿಕ ಇಲಾಖೆ ಒಪ್ಪಿಗೆಗೆ ಕಳುಹಿಸಲಾಗಿತ್ತು.
undefined
ಉ.ಕನ್ನಡಕ್ಕಿಲ್ಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಶಾಸಕಿ ರೂಪಾಲಿ ನಾಯ್ಕ್ ಆಕ್ರೋಶ
ಆದರೆ, ಆಸ್ಪತ್ರೆಗೆ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ ಮತ್ತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಈ ಭಾಗದ ಜನರಿಗೆ ಸೂಪರ್ ಸ್ಪೆಷಾಲಿಟಿ ಸೇವೆ ದೊರೆಯುವಂತೆ ಮಾಡಲು ಜಿಲ್ಲಾ ಆಸ್ಪತ್ರೆಗೆ ಕಾರ್ಡಿಯಾಲಜಿ, ನ್ಯೂರೋ ಸರ್ಜರಿ, ಪಿಡಿಯಾಟ್ರಿಕ್ ಸರ್ಜರಿ, ಪ್ಲಾಸ್ಟಿಕ್ ಸರ್ಜರಿ, ಯುರಾಲಜಿ, ನೆಫ್ರೇಲಾಜಿ, ನ್ಯೂರಾಲಜಿ ತಜ್ಞರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ನೆಫ್ರೇಲಾಜಿ ವಿಭಾಗದ ಹುದ್ದೆಗೆ ಅಭ್ಯರ್ಥಿ ಸಂದರ್ಶನಕ್ಕೆ ಬಂದಿದ್ದು ನೇಮಕ ಮಾಡಲಾಗಿದೆ. ಉಳಿದ ಹುದ್ದೆಗಳಿಗೆ ಯಾರೂ ಬಂದಿಲ್ಲ. ಹೀಗಾಗಿ ಹೀಗಾಗಿ ನ್ಯೂರಾಲಜಿ (ನರರೋಗ) ಹಾಗೂ ಕಾರ್ಡಿಯಾಲಜಿಗೆ (ಹೃದ್ರೋಗ) ತಜ್ಞರನ್ನು ತಾತ್ಕಾಲಿಕವಾಗಿ ಒದಗಿಸುವಂತೆ ನಿಮ್ಹಾನ್ಸ್ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯವರನ್ನು ಕೋರಲಾಗಿದೆ’ ಎಂದು ಸಚಿವರು ತಮ್ಮ ಉತ್ತರದಲ್ಲಿ ವಿವರಿಸಿದ್ದರು.
ಆಕ್ರೋಶ ವ್ಯಕ್ತವಾಗಿತ್ತು: ಸಚಿವರ ಉತ್ತರದಿಂದ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ಕೇಳಿಬಂದಿತ್ತು. ಹೀಗಾಗಿ, ಸ್ಪೀಕರ್ ಕಾಗೇರಿ ಮತ್ತು ಶಾಸಕಿ ರೂಪಾಲಿ ಅವರು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆಯನ್ನು ವಿವರಿಸಿದರು.
ಹಲವು ವರ್ಷಗಳ ಕೂಗು: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡಬೇಕೆಂಬ ಕೂಗು ಹಲವು ವರ್ಷಗಳಿಂದಲೇ ಇತ್ತಾದರೂ ಕಳೆದೊಂದು ವರ್ಷದಿಂದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಭಾರೀ ಅಭಿಯಾನವೇ ನಡೆಯಿತು. ಬೆಂಗಳೂರಿನಲ್ಲೂ ಜಿಲ್ಲೆಯ ಜನತೆ ಧರಣಿ ನಡೆಸಿದರು. ರಕ್ತದಲ್ಲಿ ಪ್ರಧಾನಿಗೆ ಪತ್ರ ಚಳವಳಿ ನಡೆಸಿದ್ದರು. ಉತ್ತರ ಕನ್ನಡದಲ್ಲಿ ಒಂದೇ ಒಂದೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ.
ಉತ್ತರ ಕನ್ನಡದಲ್ಲಿ ಗಂಭೀರ ಪರಿಸ್ಥಿತಿಯಲ್ಲಿದ್ದವರನ್ನು ದೇವರೇ ಬದುಕಿಸಬೇಕು..!
12 ತಾಲೂಕುಗಳನ್ನು ಹೊಂದಿ ವಿಸ್ತಾರವಾಗಿರುವ ಜಿಲ್ಲೆಯ ಜನತೆ ತುರ್ತು ಸಂದರ್ಭದಲ್ಲಿ, ಅಪಘಾತ ಉಂಟಾದಾಗ, ಗಂಭೀರ ಕಾಯಿಲೆಗಳಿಗೆ ತುತ್ತಾದಾಗ ದೂರದ ಮಣಿಪಾಲ, ಮಂಗಳೂರು, ಉಡುಪಿ, ಬೆಳಗಾವಿ, ಪಣಜಿ, ಹುಬ್ಬಳ್ಳಿಗೆ ರೋಗಿಗಳನ್ನು ಕರೆದೊಯ್ಯಬೇಕು. ಈ ವೇಳೆ ಪ್ರಯಾಣದಲ್ಲೇ ಕೆಲವರು ಅಸುನೀಗಿದ ಉದಾಹರಣೆಯೂ ಇದೆ. ಅದರಲ್ಲೂ ಆ.20ರಂದು ಶಿರೂರು ಟೋಲ್‌ಗೇಟ್‌ನಲ್ಲಿ ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟಘಟನೆಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಮತ್ತಷ್ಟು ಹೆಚ್ಚಿತು. ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಅವರಂತೂ ಈ ಸೂಪರ್ ಸ್ಪೆಷಾಲಿಟಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಆಸ್ಪತ್ರೆಗಾಗಿ ನಿರಂತರ ಹೋರಾಟ ಪ್ರಯತ್ನ ನಡೆಸಿಕೊಂಡು ಬಂದಿದ್ದಾರೆ.