ಭಟ್ಕಳದಲ್ಲಿ ಭುಗಿಲೆದ್ದ ದೇವಸ್ಥಾನ ಮಹಾದ್ವಾರ V/s ಟಿಪ್ಪು ಗೇಟ್ ನಿರ್ಮಾಣ ವಿವಾದ

By Govindaraj SFirst Published Sep 16, 2022, 11:02 PM IST
Highlights

ಇಷ್ಟು ದಿನಗಳ ಕಾಲ‌ ಸೈಲೆಂಟಾಗಿದ್ದ ರಾಜ್ಯದ ಕರಾವಳಿಯಲ್ಲಿ ಇದೀಗ ಮತ್ತೆ ಹಿಂದೂ- ಮುಸ್ಲಿಂ ಸಮುದಾಯದ ನಡುವೆ ವಿವಾದ ಕಾಣಿಸಿಕೊಂಡಿದೆ. ಭಟ್ಕಳದ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ದೇವಸ್ಥಾನವೊಂದಕ್ಕೆ ಮಹಾದ್ವಾರ ನಿರ್ಮಾಣ ಮಾಡಿಸುತ್ತಿದ್ದಂತೇ ಸೆಡ್ಡು ಹೊಡೆದಿರುವ ಮುಸ್ಲಿಂ ಸಮುದಾಯದ ಜನರು ಟಿಪ್ಪು ಗೇಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಭಟ್ಕಳ (ಸೆ.16): ಇಷ್ಟು ದಿನಗಳ ಕಾಲ‌ ಸೈಲೆಂಟಾಗಿದ್ದ ರಾಜ್ಯದ ಕರಾವಳಿಯಲ್ಲಿ ಇದೀಗ ಮತ್ತೆ ಹಿಂದೂ- ಮುಸ್ಲಿಂ ಸಮುದಾಯದ ನಡುವೆ ವಿವಾದ ಕಾಣಿಸಿಕೊಂಡಿದೆ. ಭಟ್ಕಳದ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ದೇವಸ್ಥಾನವೊಂದಕ್ಕೆ ಮಹಾದ್ವಾರ ನಿರ್ಮಾಣ ಮಾಡಿಸುತ್ತಿದ್ದಂತೇ ಸೆಡ್ಡು ಹೊಡೆದಿರುವ ಮುಸ್ಲಿಂ ಸಮುದಾಯದ ಜನರು ಟಿಪ್ಪು ಗೇಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದು ಎರಡು ಸಮುದಾಯ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದಲ್ಲದೇ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದೆ. ಇದರಿಂದಾಗಿ ಎರಡು ಸಮುದಾಯದ ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ. 

ಹೌದು! ಈ ಹಿಂದೆ ಭಯೋತ್ಪಾದಕರು, ಹಿಜಾಬ್, ಭಾಷಾ ವಿವಾದದಿಂದ ಗುರುತಿಸಿಕೊಂಡಿದ್ದ ಭಟ್ಕಳದಲ್ಲಿ ಇದೀಗ ದೇವಳದ ಮಹಾದ್ವಾರ ಹಾಗೂ ಟಿಪ್ಪು ಗೇಟ್ ವಿವಾದ ಕಾಣಿಸಿಕೊಂಡಿದೆ. ಭಟ್ಕಳ- ಹೊನ್ನಾವರ ಶಾಸಕ ಸುನೀಲ್ ಕುಮಾರ್ ಅವರು, ತಾನು ಈ ಹಿಂದೆ ಹೇಳಿಕೊಂಡಿದ್ದಂತೇ ಕಳೆದ ಹತ್ತು ದಿನಗಳಿಂದ ಭಟ್ಕಳ ನಗರದ ಸೋನಾರಕೇರಿಯ ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಮಹಾದ್ವಾರ ನಿರ್ಮಾಣ ಕಾರ್ಯ ಶಾಸಕರ ಸ್ವಂತ ಖರ್ಚಿನಿಂದ ನಡೆಯುತ್ತಿತ್ತು. ಕಾಮಗಾರಿಯ ಅನುಮತಿಗಾಗಿ ದೇವಸ್ಥಾನದ ಸಮಿತಿ ಸದಸ್ಯರು, ಈ ಹಿಂದೆ ಪುರಸಭೆಯ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. 

Uttara Kannada; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಗೆ ಬ್ರೇಕ್, ಜನರ ಕೆಂಗಣ್ಣಿಗೆ ಸರಕಾರ!

ಆದರೆ, 45 ದಿನಗಳಾದ್ರೂ ಯಾವುದೇ ಪ್ರತಿಕ್ರಿಯೆ ದೊರಕದ ಕಾರಣ ಅನುಮತಿಯೆಂದು ಪರಿಗಣಿಸಿ ಮಹಾದ್ವಾರದ ಪಿಲ್ಲರ್ ನಿರ್ಮಾಣ ಕಾರ್ಯ ನಡೆಸಲಾಗುತ್ತಿತ್ತು. ಈ ಕಾಮಗಾರಿಯನ್ನು ವಿರೋಧಿಸಿ ಮುಸ್ಲಿಂ ಸಮುದಾಯದ ಜನರು ಪುರಸಭೆ ಮೆಟ್ಟಿಲೇರಿ ವಿರೋಧ ವ್ಯಕ್ತಪಡಿಸಿದ್ರೂ, ಕಾಮಗಾರಿ ಮಾತ್ರ ಮುಂದುವರಿದಿತ್ತು. ಇದಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಭಟ್ಕಳ ನಗರದ ಹಳೆ ಬಸ್ ನಿಲ್ದಾಣದ ರಸ್ತೆ ಮತ್ತು ಸುಲ್ತಾನ್ ಸ್ಟ್ರೀಟ್ ಮದ್ಯದಲ್ಲಿ ಆಸರಕೇರಿ ರಸ್ತೆ ಮೇಲೆ ಪುರಸಭೆ ನಿರ್ಮಿಸಿದ್ದ ಇಂಟರ್‌ಲಾಕ್ ಒಡೆದು ಟಿಪ್ಪು ಸುಲ್ತಾನ್ ಗೇಟ್ ನಿರ್ಮಾಣ ಮಾಡಲು ಅಡಿಗಲ್ಲು ಕೂಡಾ ಹಾಕಿದ್ದಾರೆ. 

ಈ ಹಿನ್ನೆಲೆ ಸ್ಥಳದಲ್ಲಿ ಟಿಪ್ಪು ಗೇಟ್ ನಿರ್ಮಾಣದ‌ ಪೋಸ್ಟರದ ಕೂಡಾ ಹಾಕಿದ್ದರು. ಇದನ್ನು ಹಿಂದೂಪರ ಸಂಘಟನೆಗಳು ಖಂಡಿಸಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದವು. ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರು ಸ್ಥಳಕ್ಕೆ ವಿಚಾರಣೆಗೆ ತೆರಳಿದ್ದಾಗ ಮುಸ್ಲಿ ಸಮುದಾಯದ ಜನರು ಅಧಿಕಾರಿಗಳ ಮೈಮೇಲೇರಿ ಬಂದಿದ್ದಲ್ಲದೇ, ನೂರಾರು ಜನರನ್ನು ಸೇರಿಸಿ ಶಾಂತಿಭಂಗಕ್ಕೆ ಯತ್ನಿಸಿದ್ದರು. ಪೊಲೀಸರ ಸಹಾಯದಿಂದ ಸ್ಥಿತಿಯನ್ನು ನಿಯಂತ್ರಿಸಿ ಪೋಸ್ಟರನ್ನು ಕೊಂಡೊಯ್ದಿದ್ದಾರೆ. ಇತ್ತ ದೇವಳದ ಮಹಾದ್ವಾರ ನಿರ್ಮಾಣದ ಸ್ಥಳವನ್ನೂ ಸೀಝ್ ಮಾಡಿರುವ ಅಧಿಕಾರಿಗಳು, ಸಲಕರಣೆಗಳನ್ನು ಕೊಂಡೊಯ್ದಿದ್ದಾರೆ. 

ಇದರಿಂದ ಅಸಮಾಧಾನಗೊಂಡಿರುವ ಹಿಂದೂ ಸಮುದಾಯದ ಜನರು, ಮುಸ್ಲಿಮರೇ ಇದೀಗ ಕೋಮು ಸೌಹಾರ್ದತೆ ಮುರಿಯಲು ಕಾರಣರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೂ ಸಮುದಾಯದ ಮುಖಂಡರು ಹೇಳುವಂತೆ, ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಮಹಾದ್ವಾರ ನಿರ್ಮಾಣ ಮಾಡುತ್ತಿದ್ದೇವೆ. ಆದರೆ, ಪ್ರತೀ ಬಾರಿ ಕೋಮು ಸೌಹಾರ್ದ ಎಂದು ಹೇಳುವ ಮುಸ್ಲಿಂ ಸಮುದಾಯದವರೇ ಸೌಹಾರ್ದ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ತಂಜೀಂ ಸಂಘಟನೆಗೆ ಅವರ ಸದಸ್ಯರನ್ನೇ ನಿಯಂತ್ರಿಸಲಾಗುತ್ತಿಲ್ಲ. ಭಟ್ಕಳದಲ್ಲಿ ಕಾಣಿಸಿಕೊಂಡ ವಿವಾದಕ್ಕೆ ತಂಜೀಂ ಸದಸ್ಯರು ಹಾಗೂ ಪುರಸಭೆಯ ನಿರ್ಣಯವೇ ನೇರ ಕಾರಣವಾಗಿದೆ. 

ಮುಸ್ಲಿಮರ ಜತೆ ಸೌಹಾರ್ದ ಮುರಿಯುವಂತಹ ಸ್ಥಿತಿ ಇಂದು ಎದುರಾಗಿದೆ ಎಂದು ಹಿಂದೂ ಮುಖಂಡರು ಅಸಮಾಧನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಶಾಸಕ ಸುನೀಲ್ ನಾಯ್ಕ್ ಕೂಡಾ, ಟಿಪ್ಪು ಗೇಟ್ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಘಟನೆ ಸಂಬಂಧಿಸಿ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಎಂ. ದೂರು ನೀಡಿದ್ದು, ಟಿಪ್ಪು ಗೇಟ್ ನಿರ್ಮಾಣಕ್ಕೆ ಮುಂದಾದ ಅಜಿಮುರ ರೆಹಮಾನ್, ಮೆಡಿಕಲ್ ಸಮಿ, ತಹಿಮುರ ಹಾಗೂ ಇತರರು ಮತ್ತು ನಿಚ್ಚಲಮಕ್ಕಿ ಶ್ರೀ ವೆಂಕಣರಮಣ ದೇವಸ್ಥಾನದ ಆಡಳಿತ ಕಮಿಟಿ ಸದಸ್ಯರು, ಗುತ್ತಿಗೆದಾರ ಲೋಕೇಶ್ ನಾಯ್ಕ ಹಾಗೂ ಇತರರ ಮೇಲೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಯಿಸಿರುವ ಮುಸ್ಲಿಂ ಮುಖಂಡರು, ನಮ್ಮದು ಯಾವುದೇ ವಿವಾದವಿಲ್ಲ. ಪೊಲಿಟಿಕಲ್ ಮೈಲೇಜ್‌ಗಾಗಿ ಪೊಲಿಟಿಕಲ್ ಪಾರ್ಟಿಯವರು ಇದನ್ನು ಸೃಷ್ಠಿಸುತ್ತಿದ್ದಾರೆ. 

ಉತ್ತರ ಕನ್ನಡದಲ್ಲಿ ಗಂಭೀರ ಪರಿಸ್ಥಿತಿಯಲ್ಲಿದ್ದವರನ್ನು ದೇವರೇ ಬದುಕಿಸಬೇಕು..!

ಅವರ ದ್ವಾರವನ್ನು ಅವರು ಕಟ್ಟುತ್ತಿದ್ದಾರೆ. ನಮಗೇನೂ ತೊಂದರೆಯಿಲ್ಲ‌. ನಾವು ನಮ್ಮ ಗೇಟ್ ನಿರ್ಮಾಣ ಮಾಡುತ್ತಿದ್ದೇವೆ. ಶಾಂತಿ ಭಂಗ ಪಡಿಸುವವರು ನಾವು ಕೆಲಸ ಮಾಡುತ್ತಿದ್ದಾಗ ಪುರಸಭೆ ಹಾಗೂ ಪೊಲೀಸರಿಗೆ ಕರೆ ಮಾಡಿ ಕೆಲಸ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಸಮಸ್ಯೆ ಅವರಿಗೂ ಹಾಗೂ ಪುರಸಭೆಯ ಮಧ್ಯ ಇರುವುದು. ಆದರೆ, ನಾವು ನಮ್ಮ ಕೆಲಸ ಮಾಡುವಾಗ ಅವರು ಅಡ್ಡಿ ಪಡಿಸಿದ್ದಾರೆಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಭಯೋತ್ಪಾದನೆ, ಹಿಜಾಬ್, ಹಲಾಲ್, ಭಾಷಾ ವಿವಾದದ ಬಳಿಕ ಸೈಲೆಂಟಾಗಿದ್ದ ಭಟ್ಕಳದಲ್ಲಿ ಇದೀಗ ದೇವಸ್ಥಾನದ ದ್ವಾರಬಾಗಿಲು ನಿರ್ಮಾಣ ಮತ್ತು ಟಿಪ್ಪು ಗೇಟ್ ನಿರ್ಮಾಣದ ವಿವಾದ ಕಾಣಿಸಿಕೊಂಡಿದೆ. ಎರಡು ಕೋಮಿನ ದ್ವೇಷ ಸದ್ಯಕ್ಕೆ ಬೂದಿ ಮುಚ್ವಿದ ಕೆಂಡದಂತಿದ್ದು, ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಇದನ್ನು ಎರಡು‌ ಸಮುದಾಯದ ಜತೆ ಕುಳಿತು ಬಗೆಹರಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಈ ಘಟನೆ ಯಾವ ರೂಪ ಪಡೆಯಲಿದೆ ಎಂದು ಕಾದು‌ ನೋಡಬೇಕಷ್ಟೇ.

click me!