ಕಳೆದ 10 ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಆಗುತ್ತಿದೆ, ವ್ಯಾಪಕ ಮಳೆ ಹಾನಿ ಹಿನ್ನೆಲೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡರು.
ಉಡುಪಿ (ಜು.13): ಕಳೆದ 10 ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಆಗುತ್ತಿದೆ, ವ್ಯಾಪಕ ಮಳೆ ಹಾನಿ ಹಿನ್ನೆಲೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡರು. ಕರಾವಳಿ ಜಿಲ್ಲೆಗಳ ಮಳೆ ಹಾನಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಧಾರಾಕಾರ ಮಳೆಗೆ ಕರಾವಳಿಯಲ್ಲಿ ಎಂಟು ಜೀವ ಹಾನಿಯಾಗಿದೆ. ಸುಮಾರು 355 ಹೆಕ್ಟೇರ್ ತೋಟ, ಬೆಳೆ ನಾಶವಾಗಿದೆ. ರಾಜ್ಯದ ಒಟ್ಟು ಮಳೆಹಾನಿ ಪರಿಹಾರವಾಗಿ ತಕ್ಷಣಕ್ಕೆ 500 ಕೋಟಿ ರುಪಾಯಿ ಬಿಡುಗಡೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಮಣಿಪಾಲದ ರಜತಾದ್ರಿಯಲ್ಲಿ ಸಭೆ ನಡೆಸಿದ ಬಳಿಕ ಹೇಳಿದರು.
ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ನೆರೆಹಾನಿ ಕುರಿತಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಸಭೆ ನಡೆಸಿದರು. ಮೂರು ಜಿಲ್ಲೆಯಲ್ಲಿ 1062 ಮನೆಗಳಿಗೆ ಹಾನಿಯಾಗಿದೆ. ಕರಾವಳಿಯಲ್ಲೇ 2187 ಕಿಲೋ ಮೀಟರ್ ರಸ್ತೆ ಹಾನಿಯಾಗಿದೆ. 5000 ಕ್ಕೂ ಹೆಚ್ಚು ವಿದ್ಯುತ್ ಕಂಬ ಬಿದ್ದಿದೆ. ದ.ಕ ಉಡುಪಿ, ಉ.ಕ ದಲ್ಲಿ 168 ಸೇತುವೆಗಳಿಗೆ ಹಾನಿಯಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. ಬೆಳೆ ನಾಶಕ್ಕೆ ಸೂಕ್ತ ಪರಿಹಾರ ಕೊಡುತ್ತೇವೆ. ಕಾಳಜಿ ಕೇಂದ್ರದಲ್ಲಿ ಆಹಾರ ಜೊತೆ ಮೊಟ್ಟೆ ಕೊಡುತ್ತೇವೆ.
ಉಡುಪಿ ಇತಿಹಾಸ ಹೇಳುವ 16ನೇ ಶತಮಾನದ ಜೈನ ಶಾಸನ ಪತ್ತೆ
ಸಂತ್ರಸ್ಥರು ಉಳಿದುಕೊಂಡ ಮನೆಗೆ ರೇಷನ್ ತಲುಪಿಸ್ತೇವೆ ಎಂದರು. ಭೂಕಂಪನ, ಭೂಕುಸಿತ ಆದ ಬಗ್ಗೆ ಅಮೃತ ವಿವಿಯವರು ಅಧ್ಯಯನ ಮಾಡುತ್ತಾರೆ. ವರದಿ ಬಂದ ಕೂಡಲೇ ಪರಿಹಾರಕ್ಕೆ ಸರಕಾರ ಸಿದ್ಧವಿದೆ. ಕಡಲ್ಕೊರೆತಕ್ಕೆ ಎಡಿಬಿ ಮೂಲಕ 300 ಕೋಟಿ ಖರ್ಚಾಗಿದೆ. ಕೇರಳ ಮಾದರಿಯಲ್ಲಿ ಒಂದು ಕಿಲೋಮೀಟರ್ ಕಡಲಿಗೆ ತಡೆಗೋಡೆ ಮಾಡುವ ಚಿಂತನೆ ಇದೆ. ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುವುದು. ಸರಿಯಾದ ಅಧ್ಯಯನ ಮಾಡಿ ಅನುಷ್ಟಾನ ಮಾಡಲು ತೀರ್ಮಾನ ಮಾಡಲಾಗುವುದು. ಶಾಶ್ವತ ಪರಿಹಾರಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದೆಂದರು.
ಜಿಲ್ಲಾ ಮಟ್ಟದಲ್ಲೇ ತಕ್ಷಣ ಕಡಲ್ಕೊರೆತ ತಡೆಗೆ ಕ್ರಮಕ್ಕೆ ಸೂಚಿಸಲಾಗಿದೆ. ಬೆಳಗಾವಿ, ಉತ್ತರ ಕರ್ನಾಟಕ, ಉ.ಕ ಜಿಲ್ಲೆಗೆ ಮುಂದಿನ ವಾರ ಪ್ರವಾಸ ಮಾಡುತ್ತೇನೆ. ರಾಜ್ಯದ ನೆರೆ ಹಾನಿಗೆ ತುರ್ತಾಗಿ 500 ಕೋಟಿ ರುಪಾಯಿ ತಕ್ಷಣ ಮೊದಲ ಹಂತದಲ್ಲಿ ಬಿಡುಗಡೆ ಮಾಡುತ್ತೇನೆ. ಎಲ್ಲಾ ಜಿಲ್ಲೆಯಿಂದ ವರದಿ ತರಿಸಿಕೊಂಡ ನಂತರ ಬಾಕಿ ಉಳಿದ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ನೆರೆ ಎದುರಿಸಲು ಕೇಂದ್ರದ ಮೊರೆ ಹೋಗುತ್ತೇವೆ. ಎಲ್ಲಾ ಜಿಲ್ಲೆಯ ವರದಿ ಬಂದ ನಂತರ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಸಿಎಂ ಹೇಳಿದರು.
ನೀಲಾವರ ಗೋಶಾಲೆಯಲ್ಲಿ ಸಗಣಿಯಿಂದ ವಿದ್ಯುತ್ ಉತ್ಪಾದನೆಗೆ ಚಿಂತನೆ!
ಊಟ ಮಾಡದೆ ಕಡಲು ಕೊರೆತ ಹಸನಿ ವೀಕ್ಷಣೆಗೆ ತೆರಳಿದ ಸಿಎಂ: ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಸಭೆ ನಂತರ ಸಿಎಂ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಮಾಡಿದರು. ಅಲ್ಲಿಂದ ಆರೆಸ್ಸೆಸ್ ಕಚೇರಿಗೆ ತೆರಳಿ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾದರು. ನಿಗದಿಯಾದ ಕಾರ್ಯಕ್ರಮದಂತೆ ಸಿಎಂ ಮಣಿಪಾಲದಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸಿ ನಂತರ ಬೈಂದೂರು ತಾಲೂಕಿಗೆ ತೆರಳಬೇಕಿತ್ತು. ಅಲ್ಲಿಂದ ಬ್ರಹ್ಮಾವರ ಕುಂದಾಪುರ ಕಾಪು ತಾಲೂಕಿಗೆ ಬಂದು ನೆರೆ ಹಾನಿ ವೀಕ್ಷಣೆ ಮಾಡಬೇಕಾಗಿತ್ತು. ಊಟ ಬಿಟ್ಟು ಸಿಎಂ ನೇರವಾಗಿ ಬೈಂದೂರಿಗೆ ತೆರಳಿದ್ದಾರೆ. ಒಂದು ಗಂಟೆಗೆ ಮಧ್ಯಾಹ್ನದ ಊಟ ತೆಗೆದುಕೊಳ್ಳಬೇಕಾದ ಸಿಎಂ, ಸಂಜೆ 4 ಗಂಟೆಗೆ ಮಣಿಪಾಲದ ಕಂಟ್ರಿ ಇನ್ ಹೋಟೆಲ್‌ನಲ್ಲಿ ಊಟ ಮಾಡಿದ್ದಾರೆ. ಸಿಎಂ ತುಂಬಾ ಕಮೀಟೆಡ್ ಜನರನ್ನು ಕಾಯಿಸುವುದಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.