ಮಹಾರಾಷ್ಟ್ರದ ಗಡಿ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ: ಸಿಎಂ ಬೊಮ್ಮಾಯಿ

By Kannadaprabha News  |  First Published Dec 2, 2022, 9:30 AM IST

ಸುಪ್ರೀಂ ಕೋರ್ಟ್‌ನಲ್ಲಿ ಗಡಿ ವಿವಾದದ ಪ್ರಕರಣ ವಿಚಾರಣೆಗೆ ಬರಲಿದ್ದು, ಕರ್ನಾಟಕದ ನಿಲುವು ಸ್ಪಷ್ಟವಾಗಿದೆ. ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸರ್ಕಾರದ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂಬುದು ನಮ್ಮ ನಿಲುವು: ಸಿಎಂ ಬೊಮ್ಮಾಯಿ 


ಬೆಂಗಳೂರು(ಡಿ.02):  ‘ಗಡಿ ವಿವಾದದಲ್ಲಿ ನಮ್ಮ ರಾಜ್ಯದ ನಿಲವು ಬಹಳ ಸ್ಪಷ್ಟವಾಗಿದ್ದು, ಕಾನೂನು ಹಾಗೂ ಸಂವಿಧಾನ ಬದ್ಧವಾಗಿದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ. ಇದನ್ನೇ ರಾಜ್ಯದ ಪರ ವಕೀಲರು ವಾದಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್‌ನಲ್ಲಿ ಗಡಿ ವಿವಾದದ ಪ್ರಕರಣ ವಿಚಾರಣೆಗೆ ಬರಲಿದ್ದು, ಕರ್ನಾಟಕದ ನಿಲುವು ಸ್ಪಷ್ಟವಾಗಿದೆ. ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸರ್ಕಾರದ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂಬುದು ನಮ್ಮ ನಿಲುವು. ಅದನ್ನೇ ನಮ್ಮ ವಕೀಲರು ವಾದ ಮಾಡಲಿದ್ದಾರೆ. ನಮ್ಮ ನಿಲುವು ಸಂವಿಧಾನ ಬದ್ಧ ಹಾಗೂ ಕಾನೂನಾತ್ಮಕವಾಗಿದೆ. ಎಲ್ಲಾ ಅಂಶಗಳ ಬಗ್ಗೆ ವಕೀಲರು ವಾದ ಮಾಡಲಿದ್ದಾರೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

Tap to resize

Latest Videos

Belagavi: ಕನ್ನಡ ಧ್ವಜ ಹಿಡಿದು ಡ್ಯಾನ್ಸ್ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್

ಈಗ ಸೊಲ್ಲಾಪುರದ 28 ಹಳ್ಳಿಗಳಿಂದ ಕರ್ನಾಟಕ ಸೇರ್ಪಡೆ ಘೋಷಣೆ

ಕಲಬುರಗಿ: ಮಹಾರಾಷ್ಟ್ರದ ಗಡಿ ಭಾಗದ ಕನ್ನಡಿಗರ ಸಮಸ್ಯೆ ಆಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಸಕ್ತಿ ತೋರಿರುವ ಬೆನ್ನಲ್ಲೇ ಆ ರಾಜ್ಯದ ಮತ್ತಷ್ಟುಗ್ರಾಮಗಳು ಕರ್ನಾಟಕಕ್ಕೆ ಸೇರಲು ಉತ್ಸುಕತೆ ತೋರುತ್ತಿವೆ.
ಕಳೆದ ವಾರವಷ್ಟೇ ಅಕ್ಕಲಕೋಟೆ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ತಡವಳದಲ್ಲಿ ಸಭೆ ಸೇರಿ, ಕರ್ನಾಟಕಕ್ಕೆ ಸೇರುವ ನಿರ್ಣಯ ಕೈಗೊಂಡಿದ್ದರು. ಇದೀಗ ಸೊಲ್ಲಾಪುರ ಜಿಲ್ಲೆಯ ದಕ್ಷಿಣ ಸೊಲ್ಲಾಪುರ ತಾಲೂಕಿನ 28 ಹಳ್ಳಿಗಳ ಜನ ಸೊಲ್ಲಾಪುರದಲ್ಲಿ ಸಭೆ ಸೇರಿ, ಕರ್ನಾಟಕಕ್ಕೆ ಸೇರುವ ಒಲವು ತೋರಿದ್ದಾರೆ. ನೀರು, ರಸ್ತೆ, ವಿದ್ಯುತ್‌, ಬಸ್‌ ಸೇವೆಗಳು ಈಗಲೂ ಇಲ್ಲಿ ಮರೀಚಿಕೆ. ಸೌಲಭ್ಯಕ್ಕಾಗಿ ದುಂಬಾಲು ಬಿದ್ದರೂ ಮಹಾರಾಷ್ಟ್ರ ಸರ್ಕಾರ ಕ್ಯಾರೆ ಎಂದಿಲ್ಲ. ಕರುನಾಡಿನ ನಗರ, ಪಟ್ಟಣಗಳನ್ನು ಮರಳಿ ಕೇಳುತ್ತಿರುವ ಮಹಾರಾಷ್ಟ್ರ, ಮೊದಲು ತನ್ನಲ್ಲಿರುವ ಕನ್ನಡಿಗರೇ ಹೆಚ್ಚಾಗಿರುವ ಪ್ರದೇಶಗಳಿಗೆ ಸವಲತ್ತು ಒದಗಿಸಲಿ ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ತಾವು ಕರ್ನಾಟಕ ಸೇರಲು ಸಿದ್ಧ. ಕರ್ನಾಟಕ ಸಿಎಂ ಭೇಟಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.

ಈ ಮಧ್ಯೆ, ಅಕ್ಕಲಕೋಟ ತಾಲೂಕಿನ ಆಳಗಿ, ತಡವಳ, ಕರಜಗಿ, ಹಿಳ್ಳಿ, ಬೊರೋಟಿ, ಮಂಗರೂಳ, ಅಂದೇವಾಡಿ, ಹಂದ್ರಾಳ್‌, ನಾಗಣಸೂರು ಗ್ರಾಮಗಳ ಕನ್ನಡ ಭಾಷಿಕರು ಕಳೆದ ಮೂರು ದಿನಗಳಿಂದ ತಮ್ಮ ಮನೆ, ಮಳಿಗೆ, ಹೊಲಗದ್ದೆಗಳಲ್ಲಿ ಬಾನೆತ್ತರಕ್ಕೆ ಕನ್ನಡ ಬಾವುಟ ಹಾರಿಸುತ್ತಿದ್ದಾರೆ. ಅಲ್ಲದೆ, ಅಕ್ಕಲಕೋಟೆ, ಸೊಲ್ಲಾಪುರ ಗಡಿಯಲ್ಲಿರುವ ಕನ್ನಡಿಗರು ‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು...’ಎಂಬ ಹಾಡನ್ನೇ ತಮ್ಮ ಮೊಬೈಲ್‌ ರಿಂಗ್‌ ಟೋನ್‌ ಮಾಡಿಕೊಂಡಿದ್ದಾರೆ.
 

click me!