
ಬೆಂಗಳೂರು(ಮಾ.14): ಇಡೀ ವಿಶ್ವದ ನಾಗರಿಕತೆ ಬೆಳವಣಿಗೆಯಲ್ಲಿ ಪತ್ರಿಕೋದ್ಯಮ ಅಥವಾ ಮಾಧ್ಯಮ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ. ಅದರಲ್ಲೂ ಎರಡು ವಿಶ್ವಯುದ್ಧಗಳ ಬಳಿಕ ಪತ್ರಿಕೋದ್ಯಮದ ಬೆಳವಣಿಯ ಜೊತೆ ಜೊತೆಗೇ ಮನುಷ್ಯನ ಜೀವನವೂ ಬಹಳಷ್ಟು ಬದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ನ 9 ಮಂದಿ ಸೇರಿದಂತೆ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಟ್ಟು 153 ಜನರಿಗೆ 2019ರಿಂದ 2022ರ ವರೆಗಿನ ನಾಲ್ಕು ವರ್ಷಗಳ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮತ್ತು 2016ರಿಂದ 2018ರ ವರೆಗಿನ ಟಿಯೆಸ್ಸಾರ್ ಸ್ಮಾರಕ, ಮೊಹರೆ ಹಣಮಂತರಾಯ, ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಮಾಧ್ಯಮಗಳನ್ನು ಜನರೂ ವಿಶ್ಲೇಷಿಸ್ತಾರೆ: ಸಿಎಂ ಬೊಮ್ಮಾಯಿ
ತಂತ್ರಜ್ಞಾನ ಅಭಿವೃದ್ಧಿಯಾದಂತೆ ಪತ್ರಿಕೋದ್ಯಮದಲ್ಲಿ ದೊಡ್ಡ ಬದಲಾವಣೆಯಾಗಿದೆ. ಅದರಲ್ಲೂ ಮೊದಲ ಮತ್ತು ಎರಡನೇ ವಿಶ್ವಯುದ್ಧಗಳ ಬಳಿಕ ಬಹಳಷ್ಟು ಆಯಾಮದಲ್ಲಿ ವಿಕಸನ ಆಗಿದೆ. ಇಡೀ ವಿಶ್ವದಲ್ಲಿ ನಾಗರಿಕ ಸಮಾಜದ ಬೆಳವಣಿಗೆಗೆ ಪತ್ರಿಕೋದ್ಯಮ ಪ್ರಮುಖ ಕೊಡುಗೆ ನೀಡಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿರುವುದೇ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕೋದ್ಯಮಗಳಿಂದ. ಕಾನೂನಿನ ಅಡಿ ಮೂರು ಅಂಗಗಳು ಕೆಲಸ ಮಾಡಿದರೆ, ಪತ್ರಿಕೋದ್ಯಮ ಕಾನೂನಿನ ಹೊರತಾಗಿ ಸ್ವತಂತ್ರವಾಗಿಯೂ ಕೆಲಸ ಮಾಡಿದೆ. ಪತ್ರಿಕೋದ್ಯಮ ವಾಚ್‌ಡಾಗ್ ಮಾತ್ರವಲ್ಲ, ನೈಟ್ ವಾಚ್‌ಮನ್ ಕೂಡ ಹೌದು ಎಂದರು.
ಯಾವುದೇ ಕ್ಷೇತ್ರದಲ್ಲಾಗಲೀ ಪ್ರಶಸ್ತಿ ಸಿಗುವಂತಹದ್ದು ಇನ್ನಷ್ಟುಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಮಾಧ್ಯಮ ಅಕಾಡೆಮಿಯು ಪ್ರಶಸ್ತಿ ಕೊಡುವ ಜತೆಗೆ ಸಂಶೋಧನೆ, ಹೊಸ ಪತ್ರಕರ್ತರಿಗೆ ತರಬೇತಿ, ಪ್ರೋತ್ಸಾಹ, ತಾಲ್ಲೂಕು, ಜಿಲ್ಲೆ, ಗ್ರಾಮೀಣ ಮಟ್ಟದ ಪತ್ರಕರ್ತರನ್ನೂ ಗಟ್ಟಿಗೊಳಿಸುವ ಕೆಲಸ ಮಾಡಬೇಕು ಎಂದರು.
ಅವಿನಾಭಾವ ಸಂಬಂಧ:
ಪತ್ರಕರ್ತರು ಮತ್ತು ರಾಜಕಾರಣಿಗಳದ್ದು ಅವಿನಾಭಾವ ಸಂಬಂಧ. ಪ್ರಜಾಪ್ರಭುತ್ವದಲ್ಲಿ ಟೀಕೆಗಳನ್ನು ಸಹಿಸುವ ಗುಣ ರಾಜಕಾರಣಿಗಳಿಗೆ ಇರಬೇಕು. ಪತ್ರಿಕೆಗಳು ಕೂಡ ಒಳ್ಳೆಯ ಕೆಲಸ ಮಾಡಿದವರ ಬೆನ್ನು ತಟ್ಟುವಂತಹ ಸಕಾರಾತ್ಮಕ ಸುದ್ದಿಗಳಿಗೂ ಆದ್ಯತೆ ನೀಡಬೇಕು. ಜನರ ಹಿತದೃಷ್ಟಿಯಿಂದ ಎಲ್ಲರೂ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್, ವಾರ್ತಾ ಇಲಾಖೆ ಮತ್ತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ, ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಇದ್ದರು.
TNIT Media Award: ರವಿ ಹೆಗಡೆ, ಮಂಜುಳಾ ಗುರುರಾಜ್‌ಗೆ ಜೀವಮಾನ ಸಾಧನೆ ಪ್ರಶಸ್ತಿ
ಕನ್ನಡಪ್ರಭ, ಏಷ್ಯಾನೆಟ್ ಸುವರ್ಣನ್ಯೂಸ್‌ನ 9 ಸಾಧಕರಿಗೆ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ನ 9 ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ ಮಾಡಿದರು. ‘ಕನ್ನಡಪ್ರಭ’ ಪುರವಣಿಗಳ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಅವರಿಗೆ 2019ನೇ ಸಾಲಿನ ‘ಅರಗಿಣಿ ಪ್ರಶಸ್ತಿ’, ಮುಖ್ಯ ಕಲಾವಿದ ಸುಧಾಕರ್ ದರ್ಬೆ ಅವರಿಗೆ ಅಕಾಡೆಮಿಯ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ, ಫೋಟೋ ಎಡಿಟರ್ ಎ.ವೀರಮಣಿ ಅವರಿಗೆ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ, ಯಾದಗಿರಿ ಜಿಲ್ಲಾ ವರದಿಗಾರ ಆನಂದ ಸೌದಿ ಅವರಿಗೆ 2022ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ತುಮಕೂರು ಜಿಲ್ಲಾ ಮುಖ್ಯ ವರದಿಗಾರ ಉಗಮ ಶ್ರೀನಿವಾಸ್ ಅವರಿಗೆ 2016ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅದೇ ರೀತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಸಂಪಾದಕ ಅಜಿತ್ ಹನಮಕ್ಕನವರ್ ಅವರಿಗೆ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ, ರಾಜಕೀಯ ವಿಶ್ಲೇಷಕ ಪ್ರಶಾಂತ್ ನಾತು ಅವರಿಗೆ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ, ಕವರ್‌ಸ್ಟೋರಿ ಮುಖ್ಯಸ್ಥ ಪಿ.ಎಸ್.ರವಿಕುಮಾರ್ 2022ನೇ ಸಾಲಿನ ವಾರ್ಷಿಕ ಪ್ರಶಸ್ತಿ, ಕಲಬುರಗಿ ಜಿಲ್ಲಾ ವರದಿಗಾರ ಶರಣಯ್ಯ ಹಿರೇಮಠ್ ಅವರಿಗೆ 2022ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಒಟ್ಟು 153 ಜನರಿಗೆ ಪ್ರಶಸ್ತಿ: ಒಟ್ಟಾರೆಯಾಗಿ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಟ್ಟು 145 ಮಂದಿಗೆ ಮಾಧ್ಯಮ ಅಕಾಡೆಮಿಯ ನಾಲ್ಕು ವರ್ಷಗಳ ಜೀವಮಾನ ಸಾಧನೆ, ವಿಶೇಷ, ವಾರ್ಷಿಕ ಹಾಗೂ ದತ್ತಿ ಪ್ರಶಸ್ತಿಗಳನ್ನು ನೀಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ