ಲಂಚ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುತ್ತಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ ಈಗೀಗ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಾರಂಭಿಸಿದ್ದಾರೆ. ಆದರೆ, ಸಂಪೂರ್ಣ ಸಹಕಾರ ನೀಡದಿರುವ ಹಿನ್ನೆಲೆಯಲ್ಲಿ ಮಂಗಳವಾರ ಮತ್ತೊಮ್ಮೆ ವಿಚಾರಣೆ ಬರುವಂತೆ ಕರೆಯಲಾಗಿದೆ.
ಬೆಂಗಳೂರು (ಮಾ.14) : ಲಂಚ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುತ್ತಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ ಈಗೀಗ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಾರಂಭಿಸಿದ್ದಾರೆ. ಆದರೆ, ಸಂಪೂರ್ಣ ಸಹಕಾರ ನೀಡದಿರುವ ಹಿನ್ನೆಲೆಯಲ್ಲಿ ಮಂಗಳವಾರ ಮತ್ತೊಮ್ಮೆ ವಿಚಾರಣೆ ಬರುವಂತೆ ಕರೆಯಲಾಗಿದೆ.
ಸೋಮವಾರ ಸತತ ಮೂರನೇ ಬಾರಿ ವಿಚಾರಣೆಗೆ ಮಾಡಾಳು ವಿರೂಪಾಕ್ಷಪ್ಪ(Madalu virupakshappa) ಹಾಜರಾದರು. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಲೋಕಾಯುಕ್ತ ಪೊಲೀಸರ(Lokayukta Police) ಮುಂದೆ ಹಾಜರಾದ ಅವರು, ರಾತ್ರಿ 8 ಗಂಟೆಯವರೆಗೆ ವಿಚಾರಣೆ ಎದುರಿಸಿದರು. ಈ ವೇಳೆ ಲಂಚ ಪ್ರಕರಣದಲ್ಲಿ ಶಾಸಕರ ಪಾತ್ರದ ಕುರಿತು ಪ್ರಶ್ನಿಸಲಾಗಿದೆ. ಲಂಚ ಪ್ರಕರಣ ಸಂಬಂಧ ಕೆಎಸ್‌ಡಿಎಲ್ ಕಚೇರಿಯಲ್ಲಿ ನಡೆದ ಅವ್ಯವಹಾರ, ರಾಸಾಯನಿಕ ಕಚ್ಚಾವಸ್ತುಗಳ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು 81 ಲಕ್ಷ ರು. ಬೇಡಿಕೆ ಮತ್ತು ತಮ್ಮ ಸೂಚನೆಯ ಮೇರೆಗೆ ಪುತ್ರ ಪ್ರಶಾಂತ್ ಮಾಡಾಳು 40 ಲಕ್ಷ ರು. ಲಂಚ ಸ್ವೀಕಾರ ಮಾಡಿರುವ ಬಗ್ಗೆ, ಪುತ್ರನ ಕಚೇರಿಯಲ್ಲಿ ಪತ್ತೆಯಾದ ಎರಡು ಕೋಟಿ ರು. ಮತ್ತು ನಿವಾಸದಲ್ಲಿ ಆರು ಕೋಟಿ ರು. ಪತ್ತೆಯ ಕುರಿತು ಸಹ ಪ್ರಶ್ನಿಸಲಾಗಿದೆ. ಹಣದ ವಿಚಾರದಲ್ಲಿ ಸೂಕ್ತ ಉತ್ತರ ನೀಡುತ್ತಿಲ್ಲ ಎನ್ನಲಾಗಿದೆ. ಅಲ್ಲದೇ, ಈ ಹಿಂದೆ ಸಿದ್ಧಪಡಿಸಿರುವ ಉತ್ತರಗಳನ್ನೇ ಪುನರುಚ್ಚರಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಲೋಕಾ ಬಳಿಕ ಮಾಡಾಳು, ಪುತ್ರಗೆ ಈಗ ಇ.ಡಿ. ಕಂಟಕ
ಕಳೆದ ಎರಡು ಬಾರಿ ಲೋಕಾಯುಕ್ತ ಪೊಲೀಸರಿಗೆ ಸಂಪೂರ್ಣವಾಗಿ ಅಸಹಕಾರ ನೀಡಿದ್ದ ಮಾಡಾಳು ವಿರೂಪಾಕ್ಷಪ್ಪ ಅವರು ಈಗ ಸ್ವಲ್ಪಮಟ್ಟಿಗೆ ಉತ್ತರ ನೀಡಲು ಆರಂಭಿಸಿದ್ದಾರೆ. ಆದರೂ ಕೆಲವು ಪ್ರಶ್ನೆಗಳಿಗೆ ಸಮಂಜಸವಾದ ಉತ್ತರಗಳನ್ನು ನೀಡುತ್ತಿಲ್ಲ. ಈ ಹಿಂದೆ ನೀಡಿರುವ ಉತ್ತರಗಳನ್ನೇ ಪದೇ ಪದೇ ಪುನರುಚ್ಚರಿಸಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿ ಕಳುಹಿಸಲಾಗಿದೆ ಎನ್ನಲಾಗಿದೆ.
ಪ್ರಶಾಂತ್ ಮಾಡಾಳು ಲೋಕಾಯುಕ್ತ ಪೊಲೀಸರ ವಶಕ್ಕೆ
ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳು ಸೇರಿದಂತೆ ಇಬ್ಬರನ್ನು ಮೂರು ದಿನಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ಒಪ್ಪಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಸೋಮವಾರ ನ್ಯಾಯಾಲಯವು ಪೊಲೀಸರ ಮನವಿಯನ್ನು ಪುರಸ್ಕರಿಸಿ ಮೂರು ದಿನಗಳ ಕಾಲ (ಮಾ.16) ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿದೆ.
ಪ್ರಶಾಂತ್ ಮಾಡಾಳು ಮತ್ತು ಸುರೇಂದ್ರ ಅವರನ್ನು ಲೋಕಾಯುಕ್ತ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಬಾಡಿ ವಾರೆಂಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನದಿಂದ ಪೊಲೀಸ್ ವಶಕ್ಕೆ ನೀಡಿದೆ.
ಲೋಕಾಯುಕ್ತ ವಿಚಾರಣೆಗೆ ಮಾಡಾಳು ಅಸಹಕಾರ: ಸಮರ್ಪಕ ಉತ್ತರ ನೀಡದ ಶಾಸಕ
ದಾಖಲೆ ಇಲ್ಲದ ಹಣ ಪತ್ತೆಯಾಗಿರುವ ಕುರಿತು ಮತ್ತು ಲಂಚ ಪಡೆದ ಹಣದ ಬಗ್ಗೆಯೂ ಲೋಕಾಯುಕ್ತ ಪೊಲೀಸರು ಮಾಹಿತಿ ಕಲೆಹಾಕಬೇಕಾದ ಅಗತ್ಯ ಇದೆ. ಮಾ.2ರಂದು ಆರೋಪಿಗಳನ್ನು ಬಂಧಿಸಿದ ಬಳಿಕ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಈಗ ಇಬ್ಬರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.