ಸರ್ಕಾರಿ ನೌಕರರಿಗೆ ಬಂಪರ್‌ ಕೊಡುಗೆ ನೀಡಿದ ಸಿಎಂ ಬೊಮ್ಮಾಯಿ

By Kannadaprabha News  |  First Published Nov 9, 2022, 11:30 PM IST

ರಾಜ್ಯ ಸರ್ಕಾರ ನೌಕರರಿಗೆ ವೇತನ ಆಯೋಗ ರಚನೆ ಮಾಡಿರುವುದರಿಂದ ಬರೋಬ್ಬರಿ 6 ಲಕ್ಷ ನೌಕರರಿಗೆ ಅನುಕೂಲವಾಗಲಿದೆ. ಜೊತೆಗೆ 4 ಲಕ್ಷ ನಿವೃತ್ತ ನೌಕರರಿಗೂ ಸಹ ಸಕಾರಾತ್ಮಕ ಬೆಂಬಲ ಸಿಗಲಿದೆ.


ದಾವಣಗೆರೆ(ನ.09): ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‌ರಾವ್‌ ನೇತೃತ್ವದಲ್ಲಿ 7ನೇ ವೇತನ ಆಯೋಗ ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಘೋಷಿಸಿದ್ದಾರೆ. ಇಂದು(ಬುಧವಾರ) ದಾವಣಗೆರೆಯಲ್ಲಿ ಅವರು ಈ ಕುರಿತ ಘೋಷಣೆ ಮಾಡುವ ಮೂಲಕ ಲಕ್ಷಾಂತರ ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ನೂತನ ವೇತನ ಆಯೋಗದ ಶಿಫಾರಸಿನಿಂದ ನಿವೃತ್ತ ಸರ್ಕಾರಿ ನೌಕರರು ಸೇರಿದಂತೆ ಸುಮಾರು 13.5 ಲಕ್ಷ ಸರ್ಕಾರಿ ಉದ್ಯೋಗಿಗಳು, ನಿವೃತ್ತರಿಗೆ ಅನುಕೂಲವಾಗಲಿದೆ. ಈ ಪೈಕಿ 6 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ 3 ಲಕ್ಷ ನೌಕರರು ಮತ್ತು ಪಿಂಚಣಿ ಪಡೆಯುತ್ತಿರುವ 4.5 ಲಕ್ಷ ನಿವೃತ್ತ ನೌಕರರಿಗೆ ವೇತನ, ತುಟ್ಟಿಭತ್ಯೆಗಳು ಹೆಚ್ಚಾಗುವ ನಿರೀಕ್ಷೆ ಇದೆ.

Tap to resize

Latest Videos

ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್

ಅಕ್ಟೋಬರ್‌ ತಿಂಗಳಲ್ಲಿ 7ನೇ ವೇತನ ಆಯೋಗ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಭರವಸೆ ನೀಡಿದ್ದರೂ, ಅಧಿಕೃತವಾಗಿ ಘೋಷಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವೇತನ ಆಯೋಗ ರಚನೆಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಬುಧವಾರ ಮುಖ್ಯಮಂತ್ರಿಗಳು ಅಧಿಕೃತವಾಗಿ ವೇತನ ಆಯೋಗ ರಚಿಸುವುದಾಗಿ ಘೋಷಿಸಿದ್ದಾರೆ.

ಬಜೆಟ್‌ನಲ್ಲಿ ಮೀಸಲು:

ಆಯೋಗಕ್ಕೆ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸುವ ಸಾಧ್ಯತೆ ಇದ್ದು, ಮುಂಬರುವ ಬಜೆಟ್‌ನಲ್ಲಿ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಸರ್ಕಾರಿ ನೌಕರರ ಸಂಘ ಶೇ.40 ರಷ್ಟುವೇತನ ಹೆಚ್ಚಳ ಮಾಡಬೇಕು, 1-7-2022 ರಿಂದ ಅನ್ವಯವಾಗುವಂತೆ ಕಾಲ್ಪನಿಕ ಸೌಲಭ್ಯ, 1-1-2023 ರಿಂದ ಆರ್ಥಿಕವಾಗಿ ಸೌಲಭ್ಯ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಇಟ್ಟಿದೆ. ಒಂದು ವೇಳೆ ಬೇಡಿಕೆಗೆ ಅನುಗುಣವಾಗಿ ವೇತನ ಹೆಚ್ಚಳವಾದರೆ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿಯಾಗಿ ವರ್ಷಕ್ಕೆ ಸುಮಾರು 12,500 ಕೋಟಿ ರು. ಹೊರೆ ಬೀಳಲಿದೆ.

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ಕೈ ಸೇರಲಿದೆ ಬಾಕಿ ತುಟ್ಟಿ ಭತ್ಯೆ

5 ವರ್ಷಕ್ಕೂ ಮುನ್ನ ಆಯೋಗ:

ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ವೇತನ ಆಯೋಗ ರಚನೆ ಮಾಡಲಾಗುತ್ತದೆ. ಆದರೆ ಮೊದಲ ಬಾರಿಗೆ ರಾಜ್ಯ ಸರ್ಕಾರ ಐದು ವರ್ಷದೊಳಗೆ ಹೊಸ ವೇತನ ಆಯೋಗ ರಚನೆ ಘೋಷಿಸಿದೆ.

ಮುಂದೇನು?

- 3 ತಿಂಗಳಲ್ಲಿ ವರದಿ ಸಲ್ಲಿಸಲು ಆಯೋಗಕ್ಕೆ ಸೂಚಿಸುವ ಸಾಧ್ಯತೆ
- ಆಯೋಗದ ಶಿಫಾರಸು ಜಾರಿ ಕುರಿತು ಬಜೆಟ್‌ನಲ್ಲಿ ಘೋಷಣೆ ಸಂಭವ
- ಶಿಫಾರಸು ಯಥಾವತ್ತು ಅಥವಾ ಪರಿಷ್ಕರಿಸಿ ಜಾರಿಗೊಳಿಸುವ ನಿರೀಕ್ಷೆ

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!

7ನೇ ವೇತನ ಆಯೋಗ ರಚನೆ ಸನ್ನಿಹಿತವಾಗಿರುವ ಕುರಿತು ನ.7ರಂದೇ ‘ಕನ್ನಡಪ್ರಭ’ ವರದಿ ಮಾಡಿತ್ತು

click me!