ಮಾರ್ಗದಲ್ಲಿ ಬರುವ ಐತಿಹಾಸಿಕ ಸ್ಥಳಗಳಿಗೂ ವೀರಜ್ಯೋತಿ ಸಂಚರಿಸಲಿದೆ. ಮಾರ್ಗದುದ್ದಕ್ಕೂ ಎಲ್ಲಾ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಯೋಧರನ್ನು ಸನ್ಮಾನಿಸುವ ಕಾರ್ಯಕ್ರಮ ಇದೆ: ಸಚಿವ ಗೋವಿಂದ ಕಾರಜೋಳ
ಬೆಂಗಳೂರು(ಅ.02): ಬೆಳಗಾವಿಗೆ ಸೀಮಿತವಾಗಿದ್ದ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ರಾಜ್ಯಮಟ್ಟದ ಮನ್ನಣೆ ಸಿಕ್ಕಿದ್ದು, ಭಾನುವಾರದಿಂದ ರಾಜಧಾನಿಯಿಂದ ಆರಂಭವಾಗುವ ವೀರಜ್ಯೋತಿ ಯಾತ್ರೆಯು ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಸಂಚರಿಸಲಿದೆ. ತದನಂತರ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಅ.23ರಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ಅದ್ಧೂರಿಯಾಗಿ ನಡೆಯಲಿದೆ.
ಶನಿವಾರ ವಿಧಾನಸೌಧದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಈ ಕುರಿತು ಮಾಹಿತಿ ನೀಡಿದರು. ವೀರರಾಣಿ ಕಿತ್ತೂರು ಚನ್ನಮ್ಮ ಅವರು ಬ್ರಿಟಿಷರ ವಿರುದ್ಧ ಸಾಧಿಸಿದ ವಿಜಯೋತ್ಸವದ ನೆನಪಿಗಾಗಿ ಪ್ರತಿವರ್ಷ ಕಿತ್ತೂರು ಉತ್ಸವ ನಡೆಸಲಾಗುತ್ತದೆ. ಇದರ ಪ್ರಯುಕ್ತ ಪ್ರತಿವರ್ಷ ವೀರಜ್ಯೋತಿ ಯಾತ್ರೆಯು ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಂಚರಿಸುತ್ತಿತ್ತು. ಈ ವರ್ಷ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಸ್ಥಾನಗಳಿಗೆ ತಲುಪಲಿದೆ. ಭಾನುವಾರ (ಅ.2) ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುರಭವನದ ಮುಂದೆ ವೀರಜ್ಯೋತಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದರು.
ವಿಪಕ್ಷಗಳ ನಾಯಕರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ: ಸಚಿವ ಗೋವಿಂದ ಕಾರಜೋಳ
ಮಾರ್ಗದಲ್ಲಿ ಬರುವ ಐತಿಹಾಸಿಕ ಸ್ಥಳಗಳಿಗೂ ವೀರಜ್ಯೋತಿ ಸಂಚರಿಸಲಿದೆ. ಮಾರ್ಗದುದ್ದಕ್ಕೂ ಎಲ್ಲಾ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಯೋಧರನ್ನು ಸನ್ಮಾನಿಸುವ ಕಾರ್ಯಕ್ರಮ ಇದೆ. ಕಿತ್ತೂರು ಉತ್ಸವಕ್ಕೆ ಈಗಾಗಲೇ ಎರಡು ಕೋಟಿ ರು. ಬಿಡುಗಡೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬೆಳಗಾವಿ ಜಿಲ್ಲಾಡಳಿತದ ಸಹಯೋಗದಲ್ಲಿ ಅ.23, 24 ಮತ್ತು 25ರಂದು ಕಿತ್ತೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಬೆಂಗಳೂರಿನ ಪುರಭವನದ ಮುಂದಿರುವ ವೀರರಾಣಿ ಚನ್ನಮ್ಮ ಅವರ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ವೀರಜ್ಯೋತಿ ಯಾತ್ರೆಯನ್ನು ಬೀಳ್ಕೊಡಲಾಗುವುದು. ಈ ಯಾತ್ರೆಯು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ತಲುಪಿದ್ದು, ಅಲ್ಲಿ ಆಯಾ ಜಿಲ್ಲಾಧಿಕಾರಿಗಳಿಂದ ಪೂಜೆ ಸಲ್ಲಿಸಿ ಕಿತ್ತೂರು ಉತ್ಸವ ದಿನ ಅ.23ರಂದು ಮುಂಜಾನೆ 10 ಗಂಟೆಗೆ ಕಿತ್ತೂರಿನ ಚನ್ನಮ್ಮ ವೃತ್ತಕ್ಕೆ ಅಗಮಿಸಲಿದೆ. ವೀರಜ್ಯೋತಿಯನ್ನು ಬರಮಾಡಿಕೊಂಡು ಚನ್ನಮ್ಮ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಿತ್ತೂರು ಸಂಸ್ಥಾನದ ನಂದಿ ಧ್ವಜಾರೋಹಣ ನೆರವೇರಿಸಲಾಗುವುದು. ಬಳಿಕ ವೀರಜ್ಯೋತಿಯ ಮೆರವಣಿಗೆ ನಡೆಯಲಿದೆ. ಅಲ್ಲದೇ, ನಾಡಿನ ಪ್ರಸಿದ್ಧ ಕಲೆಗಳಾದ ಡೊಳ್ಳು ಕುಣಿತ, ಗೊಂಬೆ ಕುಣಿತ, ವೀರಗಾಸೆ, ಹಲಿಗೆ ವಾದನ, ಪೂಜಾ ಕುಣಿತ, ಚಂಡೆ ವಾದ್ಯ, ಕಹಳೆ ಹೀಗೆ ರಾಜ್ಯ ಮತ್ತು ಹೊರರಾಜ್ಯದಿಂದ 75ಕ್ಕೂ ಹೆಚ್ಚು ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ ಎಂದು ವಿವರಿಸಿದರು.
ಅ.23ರಂದು ಚನ್ನಮ್ಮನ ಹುಟ್ಟೂರು ಕಾಕತಿಯಲ್ಲಿ ಮುಂಜಾನೆ 8.30ಕ್ಕೆ ಚನ್ನಮ್ಮ ಪೂರ್ತಿ ಪೂಜೆ ಜರುಗಲಿದೆ. ರಾಜ್ಯದ ಸಚಿವರು, ಆ ಭಾಗದ ಸ್ಥಳೀಯ ಸಂಸದರು ಮತ್ತು ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಸಂಜೆ 7 ಗಂಟೆಗೆ ಕಿತ್ತೂರು ಕೋಟೆಯ ಆವರಣದಲ್ಲಿ ಕಿತ್ತೂರು ಉತ್ಸವ-2022ರ ಉದ್ಘಾಟನೆ ಸಮಾರಂಭ ನಡೆಯಲಿದೆ. ಮೂರು ದಿನಗಳ ಕಾಲ ರಾಜ್ಯಮಟ್ಟದ ಸಾಂಸ್ಕೃತಿಕ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ನಾಡಿನ ಕಲೆ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ದಿಶೆಯಲ್ಲಿ ಹಲವಾರು ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಾಗುವುದು ಎಂದರು.