25 ತಾಲೂಕಿನಲ್ಲಿ ಮಿನಿ ಜವಳಿ ಪಾರ್ಕ್: ಸಿಎಂ ಬೊಮ್ಮಾಯಿ

By Govindaraj SFirst Published Jan 12, 2023, 2:20 AM IST
Highlights

ಮುಂದಿನ ದಿನಗಳಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ 25 ತಾಲೂಕುಗಳಲ್ಲಿ ಮಿನಿ ಜವಳಿ ಪಾರ್ಕ್ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. 

ಬೆಂಗಳೂರು (ಜ.12): ಮುಂದಿನ ದಿನಗಳಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ 25 ತಾಲೂಕುಗಳಲ್ಲಿ ಮಿನಿ ಜವಳಿ ಪಾರ್ಕ್ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಬುಧವಾರ ಗೃಹಕಚೇರಿ ಕೃಷ್ಣಾದಲ್ಲಿ ವಿದ್ಯುತ್‌ ಮಗ್ಗ ನೇಕಾರರು ಮತ್ತು ಕಾರ್ಮಿಕರಿಗೆ ಡಿಬಿಟಿ ಮೂಲಕ ನೇಕಾರರ ಸಮ್ಮಾನ್‌ ಯೋಜನೆಯ ಸಹಾಯಧನ ವರ್ಗಾವಣೆಗೆ ಚಾಲನೆ ನೀಡಿದ ಮಾತನಾಡಿದರು. 

ಹತ್ತಿಯ ಸಂಸ್ಕರಣೆಯಿಂದ ವಸ್ತ್ರ ತಯಾರಿಕೆ, ಸಿದ್ಧ ಉಡುಪು ತಯಾರಿಕೆವರೆಗಿನ ಎಲ್ಲಾ ಹಂತಗಳ ಸೌಲಭ್ಯಗಳನ್ನು ಒಳಗೊಂಡ ಮಿನಿ ಟೈಕ್ಸ್‌ಟೈಲ್‌ ಪಾರ್ಕ್ ಸ್ಥಾಪಿಸುವ ಮೂಲಕ ನೇಕಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು. ಇದೇ ವೇಳೆ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ಮತ್ತಿತರ ಆನ್‌ಲೈನ್‌ ವ್ಯಾಪಾರಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಸ್ಯಾಂಟ್ರೋ ರವಿ ಕೇಸ್‌ ಸಮಗ್ರ ತನಿಖೆ: ಸಿಎಂ ಬೊಮ್ಮಾಯಿ

‘ನೇಕಾರರೊಂದಿಗೆ ವೈಯಕ್ತಿಕವಾಗಿ ಹೆಚ್ಚಿನ ಒಡನಾಟವನ್ನು ತಾವು ಹೊಂದಿದ್ದು, ಅವರ ಸಂಕಷ್ಟಗಳನ್ನು ಸಹ ಹತ್ತಿರದಿಂದ ಕಂಡಿದ್ದೇನೆ. ನೇಕಾರರು ತಮ್ಮ ಉತ್ಪನ್ನಗಳ ಗುಣಮಟ್ಟವೃದ್ಧಿಸುವ ಮೂಲಕ ರಫ್ತು ಮಾಡಲು ಸಹ ಮುಂದಾಗಬೇಕು. ಡಿಜಿಟಲ್‌ ವೇದಿಕೆಯ ಮೂಲಕ ಮಾರುಕಟ್ಟೆವಿಸ್ತರಣೆ ಮಾಡಬೇಕು. ಇದಕ್ಕೆ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಕಾರ ನೀಡಲಿದೆ. ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್‌ ವ್ಯಾಪಾರಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ಈವರೆಗೆ ಕೈಮಗ್ಗ ನೇಕಾರರಿಗೆ ಮಾತ್ರ ನೆರವು ನೀಡುವ ಯೋಜನೆ ಜಾರಿಯಲ್ಲಿತ್ತು. ಆದರೆ, ವಿದ್ಯುತ್‌ ಮಗ್ಗದ ನೇಕಾರರು ಮತ್ತು ಕಾರ್ಮಿಕರು ಸಹ ಸಂಕಷ್ಟದಲ್ಲಿರುವುದನ್ನು ಅರಿತು ಸರ್ಕಾರವು ಸಂಕ್ರಾಂತಿಯ ಕೊಡುಗೆಯಾಗಿ ಮಗ್ಗಪೂರ್ವ ಚಟುವಟಿಕೆಗಳಲ್ಲಿ ತೊಡಗುವ ಕಾರ್ಮಿಕರು ಮತ್ತು ವಿದ್ಯುತ್‌ ಮಗ್ಗ ನೇಕಾರರಿಗೆ ಈ ಸೌಲಭ್ಯ ವಿಸ್ತರಿಸಿದೆ’ ಎಂದರು.

ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ಸ್ಮರಣೆ: ಸ್ವಾತಂತ್ರ್ಯ ಹೋರಾಟದಲ್ಲಿ ಅದರಲ್ಲಿಯೂ ಸ್ವದೇಶಿ ಆಂದೋಲನದಲ್ಲಿ ನೇಕಾರರ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ. ವಿದೇಶಿ ಉಡುಪುಗಳನ್ನು ತೊರೆದು, ಸ್ವದೇಶಿ ಬಳಕೆ ಮಾಡುವಂತೆ ಗಾಂಧೀಜಿಯವರು ನೀಡಿದ ಕರೆಗೆ ಸ್ಪಂದಿಸಿದ ನೇಕಾರರು ಹಗಲು-ರಾತ್ರಿ ಶ್ರಮಿಸಿ, ಇಡೀ ದೇಶದ ಜನರಿಗೆ ಬಟ್ಟೆಒದಗಿಸಿದರು. ಆ ಮೂಲಕ ಸ್ವದೇಶಿ ಆಂದೋಲನ ಯಶಸ್ವಿಗೊಳಿಸಿದ್ದಲ್ಲದೇ, ದೇಶ ಸ್ವಾತಂತ್ರ್ಯ ಕಂಡುಕೊಳ್ಳಲು ನೆರವಾದರು. ನಂತರದ ದಿನದಲ್ಲಿ ಸಂಕಷ್ಟದಲ್ಲಿದ್ದ ನೇಕಾರರ ನೆರವಿಗೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸರ್ಕಾರವು ಧಾವಿಸಿತು. 

ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಬಡವರಿಗೆ ಸೀರೆ, ಧೋತರ ಹಂಚುವ ಮೂಲಕ ಬಡವರಿಗೆ ವಸ್ತ್ರ ನೀಡುವ ಮತ್ತು ನೇಕಾರರಿಗೆ ಅನುಕೂಲ ಕಲ್ಪಿಸಲು ಈ ಯೋಜನೆಗಳು ಸಹಕಾರಿಯಾದವು ಎಂದು ಅಭಿಪ್ರಾಯಪಟ್ಟರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಡಳಿತದಲ್ಲಿ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಲಾಯಿತು. ಕೋವಿಡ್‌ ವೇಳೆ ನೇಕಾರ ಸಮ್ಮಾನ್‌ ಯೋಜನೆ, ನೇಕಾರರ ಸಾಲ ಮನ್ನಾ ಮೊದಲ ಕ್ರಮಗಳನ್ನು ಕೈಗೊಳ್ಳಲಾಯಿತು. ನಮ್ಮ ಸರ್ಕಾರವು ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಹಲವಾರು ಪೂರಕ ಕ್ರಮಗಳನ್ನು ಕೈಗೊಂಡಿದೆ. ನೇಕಾರರ ಸಂಖ್ಯೆ ಹೆಚ್ಚಿರುವ ಕ್ಷೇತ್ರಗಳ ಶಾಸಕರು ಸಲ್ಲಿಸಿದ ಬೇಡಿಕೆಗಳನ್ನು ಈಡೇರಿಸುವ ಮೂಲಕ ನೇಕಾರರಿಗೆ ಹೆಚ್ಚಿನ ಬೆಂಬಲ ನೀಡಲಾಗಿದೆ. 

ಶೀಘ್ರ ಸಂಪುಟ ವಿಸ್ತರಣೆ, ನಿರ್ದಿಷ್ಟ ದಿನ ಹೇಳಲಾಗದು: ಸಿಎಂ ಬೊಮ್ಮಾಯಿ

ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ನೀಡಲಾಗಿದೆ. ತಮ್ಮ ಘಟಕ ವಿಸ್ತರಣೆಗೆ ನೀಡಲಾಗುತ್ತಿದ್ದ ಶೇ.30ರಷ್ಟು ಸಹಾಯಧನವನ್ನು ಶೇ.50ಕ್ಕೆ ಹೆಚ್ಚಿಸಲಾಗಿದೆ ಎಂದು ನೇಕಾರ ಸಮುದಾಯಕ್ಕೆ ನೀಡಿರುವ ಯೋಜನೆಗಳ ಕುರಿತು ಮಾಹಿತಿ ಒದಗಿಸಿದರು. ಇದೇ ವೇಳೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ನೇಕಾರರ ಜತೆ ಸಂವಾದ ನಡೆಸಿದರು. ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

click me!