ಸರ್ಕಾರದ ಪ್ರಮುಖ ಇಲಾಖೆಗಳ ವರ್ಗಾವಣೆಗೆ ಸಿಎಂ ಬೊಮ್ಮಾಯಿ ಬ್ರೇಕ್‌..!

By Kannadaprabha NewsFirst Published Dec 3, 2022, 8:00 AM IST
Highlights

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಆರೋಗ್ಯ, ಲೋಕೋಪಯೋಗಿ, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳಿಂದ ಮುಂದಿನ ಆದೇಶದವರೆಗೆ ವರ್ಗಾವಣೆ ಸಂಬಂಧ ಯಾವುದೇ ಪ್ರಸ್ತಾವನೆಗಳನ್ನು ತರದಂತೆ ಆಯಾ ಇಲಾಖಾ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚಿಸಿದ ಸಿಎಂ ಬೊಮ್ಮಾಯಿ 

ಬೆಂಗಳೂರು(ಡಿ.03): ಸರ್ಕಾರದ ಕೆಲ ಪ್ರಮುಖ ಇಲಾಖೆಗಳಿಂದ ವರ್ಗಾವಣೆಗೆ ಸಂಬಂಧಿಸಿದಂತೆ ಬರುತ್ತಿರುವ ಪ್ರಸ್ತಾವನೆಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಬ್ರೇಕ್‌ ಹಾಕಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಆರೋಗ್ಯ, ಲೋಕೋಪಯೋಗಿ, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳಿಂದ ಮುಂದಿನ ಆದೇಶದವರೆಗೆ ವರ್ಗಾವಣೆ ಸಂಬಂಧ ಯಾವುದೇ ಪ್ರಸ್ತಾವನೆಗಳನ್ನು ತರದಂತೆ ಆಯಾ ಇಲಾಖಾ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಪೈಕಿ ಶಿಕ್ಷಣ ಇಲಾಖೆಗೆ ಮುಖ್ಯಮಂತ್ರಿ ಅವರು ಅಧಿಕೃತ ಟಿಪ್ಪಣಿ ಹೊರಡಿಸಿದ್ದಾರೆ. ಆರೋಗ್ಯ ಇಲಾಖೆಗೂ ಟಿಪ್ಪಣಿ ಹೊರಡಿಸಲಾಗಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ. ಇನ್ನೆರಡು ಇಲಾಖೆಗಳಿಗೂ ಈ ಸಂಬಂಧ ಸೂಚನಾ ಟಿಪ್ಪಣಿ ನೀಡಲಾಗಿದೆ ಎಂದು ಇಲಾಖಾ ಮೂಲಗಳು ಖಚಿತಪಡಿಸಿವೆ.

Kolar : 24 ತಿಂಗಳಲ್ಲಿ 7 ಪೌರಾಯುಕ್ತರ ವರ್ಗಾವಣೆ!

ಸಿಎಂ ನಿರ್ಧಾರಕ್ಕೆ ಕಾರಣ ಏನು?:

ಸಾಮಾನ್ಯ ವರ್ಗಾವಣೆಯ ಅವಧಿ ಮುಗಿದ್ದರೂ ಇಲಾಖೆಗಳಿಂದ ವರ್ಗಾವಣೆ ಕೋರಿ ಪ್ರಸ್ತಾವನೆಗಳು ನಿರಂತರವಾಗಿ ಬರುತ್ತಲೇ ಇವೆ. ಚುನಾವಣೆ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಈ ರೀತಿ ಬರುವ ಪ್ರಸ್ತಾವನೆಗಳಿಗೆಲ್ಲಾ ಒಪ್ಪಿಗೆ ನೀಡುವುದು ಸರಿಯಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಏಕೆ ಈ ಆದೇಶ?

- ಸಾಮಾನ್ಯ ವರ್ಗಾವಣೆ ಅವಧಿ ಈಗಾಗಲೇ ಮುಕ್ತಾಯ
- ಆದರೂ ಪ್ರಮುಖ ಇಲಾಖೆಗಳಿಂದ ವರ್ಗಾವಣೆ ಪ್ರಸ್ತಾವ
- ವರ್ಗಾವಣೆ ಕೋರಿಕೆ ಹೆಚ್ಚಳ ಗಮನಿಸಿದ ಬೊಮ್ಮಾಯಿ
- ಚುನಾವಣೆ ಸಮಯದಲ್ಲಿ ಹೆಚ್ಚು ವರ್ಗಾವಣೆ ಸರಿಯಲ್ಲ
- ಎಲ್ಲ ವರ್ಗಾವಣೆಗೆ ಒಪ್ಪಿಗೆ ನೀಡಬಾರದು: ಸಿಎಂ ಇಂಗಿತ
- ಆದ್ದರಿಂದ ಪ್ರಮುಖ ಇಲಾಖೆಗಳ ವರ್ಗಾವಣೆಗಳಿಗೆ ತಡೆ

ಯಾವ ಇಲಾಖೆ ವರ್ಗಾವಣೆ ತಡೆ?

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆರೋಗ್ಯ ಮತ್ತು ನೀರಾವರಿ ಇಲಾಖೆಗಳಿಗೆ ವರ್ಗಾವಣೆ ಪ್ರಸ್ತಾವ ತರದಂತೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಇಲಾಖೆಗಳಿಗೆ ಇದರ ಬಗ್ಗೆ ಟಿಪ್ಪಣಿ ಹೊರಡಿಸಲಾಗಿದೆ ಎಂದು ಸಿಎಂ ಕಚೇರಿ ಮೂಲಗಳು ಹೇಳಿವೆ.
 

click me!