
ಎನ್.ಲಕ್ಷ್ಮಣ್
ಬೆಂಗಳೂರು(ಸೆ.13): ಕಳೆದ ತಿಂಗಳು ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ಅಂಡ್ ಗ್ಯಾಂಗ್ ಸಮವಸ್ತ್ರದಲ್ಲೇ ನಡೆಸಿದ್ದ ದರೋಡೆ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಕೂಡ ಭಾಗಿಯಾಗಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಆ.19ರಂದು ನಗರದ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದಿದ್ದ ದರೋಡೆಯಲ್ಲಿ ಎಸ್.ಜೆ.ಪಾರ್ಕ್ ಇನ್ಸ್‌ಪೆಕ್ಟರ್ ಯೋಗೇಶ್ ಕೂಡ ಪಾಲಿನ ಹಣ ಪಡೆದಿರುವುದು ಕಂಡು ಬಂದಿದೆ. ಇತ್ತ ತನ್ನ ಕೃತ್ಯ ಬಯಲಾಗುತ್ತಿದ್ದಂತೆ ಯೋಗೇಶ್ ತಲೆಮರೆಸಿಕೊಂಡಿದ್ದು, ಆರೋಪಿ ಬಂಧನಕ್ಕೆ ಪಶ್ಚಿಮ ವಿಭಾಗದ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್, ಇನ್ಸ್‌ಪೆಕ್ಟರ್ ಕೃತ್ಯದಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಹವಾಲಾ ಹಣ ಎಂದಿದ್ದ ಪಿಎಸ್‌ಐ!
ದರೋಡೆ ಕೃತ್ಯಕ್ಕೆ ಹೋಗುವ ಮುನ್ನ ಪಿಎಸ್‌ಐ ಜೀವನ್ ಕುಮಾರ್, ಇನ್ಸ್‌ಪೆಕ್ಟರ್‌ಗೆ ಹವಾಲಾ ಹಣದ ಗ್ಯಾಂಗ್ ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಬಳಿ ಇದೆ. ಅಲ್ಲಿಗೆ ಹೋಗಿ ದಾಳಿ ನಡೆಸಿ ಹಣ ಕಸಿದುಕೊಂಡು ಬರುತ್ತೇನೆ. ಹವಾಲಾ ಹಣವಾಗಿರುವ ಕಾರಣ, ಯಾರು ದೂರು ನೀಡುವುದಿಲ್ಲ ಎಂದಿದ್ದ. ಆದರೆ, ಅಡಕೆ ಮಾರಾಟಗಾರನ ಹಣ ಎಂದು ಪಿಎಸ್‌ಐ ಹೇಳಿರಲಿಲ್ಲ. ಅಲ್ಲದೆ, ಎರಡು ಕೋಟಿ ಹಣ ಹವಾಲಾ ಹಣ ಎಂದು ಪಿಎಸ್‌ಐ ಹೇಳಿದ್ದ. ಹೀಗಾಗಿ ಇನ್ಸ್‌ಪೆಕ್ಟರ್ ದರೋಡೆ ‘ದಾಳಿ’ಗೆ ಅಸ್ತು ಎಂದಿದ್ದರು. ಬಳಿಕ ಪಿಎಸ್‌ಐ ಜೀವನ್ ಕಾನ್ಸ್‌ಟೇಬಲ್ ಹಾಗೂ ಇತರ ಮೂವರು ಆರೋಪಿಗಳ ಜತೆ ತೆರಳಿ ದಾಳಿ ನಡೆಸಿ ಹಣ ಕದ್ದೊಯ್ದಿದ್ದರು.
ರಾಗಿಣಿ ಸೇರಿ ಮೂರು ಮಂದಿ ಸಿಕ್ಕಿಬಿದ್ದಿದ್ದು ಹೇಗೆ? ಡ್ರಗ್ಸ್ ಮಾಫಿಯಾ ಬಹಿರಂಗವಾಗಿದ್ದು ಹೀಗೆ!
ಎಸ್ಕಾರ್ಟ್ ಆಗಿದ್ದ ಪಿಎಸ್‌ಐ!
ಚಿಕ್ಕಪೇಟೆ ಮೆಟ್ರೋ ಸ್ಟೇಷನ್‌ನಿಂದ ಯುನಿಟಿ ಬಿಲ್ಡಿಂಗ್‌ವರೆಗೆ ಹಿಂದೆ ಬರುತ್ತಿದ್ದ ವಾಹನಕ್ಕೆ ಸಬ್‌ಇನ್ಸ್‌ಪೆಕ್ಟರ್ ತನ್ನ ಬೈಕ್ ಮೂಲಕವೇ ಎಸ್ಕಾರ್ಟ್ ನೀಡಿದ್ದರು. ಸಮವಸ್ತ್ರ ತೊಟ್ಟಿದ್ದ ಸಬ್‌ಇನ್ಸ್‌ಪೆಕ್ಟರ್ ದ್ವಿಚಕ್ರ ವಾಹನದಲ್ಲಿ ಮುಂದೆ ಹೋಗುತ್ತಾ ಯುಟಿಲಿಟಿ ಕಟ್ಟಡಕ್ಕೆ ದಾರಿ ತೋರಿಸುತ್ತಾ ಹೋಗುತ್ತಿದ್ದ. ಮುಂದೆ ಸಬ್‌ಇನ್ಸ್‌ಪೆಕ್ಟರ್ ಹೋಗುತ್ತಿದ್ದ ಕಾರಣಕ್ಕೆ ಹಣ ಕಳೆದುಕೊಂಡುವರು ಸುಮ್ಮನಿದ್ದರು. ಎಸ್ಕಾರ್ಟ್ ನೀಡಿ ಕರೆ ತಂದಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
6 ಲಕ್ಷದಿಂದ 8 ಲಕ್ಷ ಶೇರ್
ದರೋಡೆ ಮಾಡಿದ ಹಣದ ಜತೆ ಪಿಎಸ್‌ಐ ಜೀವನ್ ತನ್ನ ಸಂಬಂಧಿ ಜತೆ ಜ್ಞಾನಪ್ರಕಾಶ್‌ನೊಂದಿಗೆ ಇನ್ಸ್‌ಪೆಕ್ಟರ್ ಯೋಗೇಶ್‌ನನ್ನು ಭೇಟಿಯಾಗಿದ್ದ. ಈ ಪೈಕಿ ಇನ್ಸ್‌ಪೆಕ್ಟರ್ ತನಗೆ ಆರರಿಂದ ಎಂಟು ಲಕ್ಷ, ಸಬ್ ಇನ್ಸ್‌ಪೆಕ್ಟರ್‌ಗೆ ಐದು ಲಕ್ಷ ಹಾಗೂ ಜ್ಞಾನ ಪ್ರಕಾಶ್ ಹಾಗೂ ಆತನ ಸಹಚಚರಿಗೆ ಉಳಿದ ಹಣ ಎಂದು ಹಂಚಿಕೆ ಮಾಡಿದ್ದರು. ಇದೇನೂ ಸಮಸ್ಯೆ ಆಗುವುದಿಲ್ಲವೇ? ಎಂದು ಪಿಎಸ್‌ಐನನ್ನು ಪ್ರಶ್ನೆ ಮಾಡಿದ್ದರು. ಅದಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಪಿಎಸ್‌ಐ ನಂಬಿಸಿದ್ದ. ದೂರು ದಾಖಲಾಗಿ 24 ತಾಸಿನಲ್ಲಿ ಇತ್ತ ಪಿಎಸ್‌ಐ ಬಂಧನವಾಗುತ್ತಿದ್ದಂತೆ ಇನ್ಸ್‌ಪೆಕ್ಟರ್ ತಲೆಮರೆಸಿಕೊಂಡಿದ್ದಾರೆ. ಪ್ರಕರಣದಲ್ಲಿ ಎಸ್.ಜೆ.ಪಾರ್ಕ್‌ನ ಕಾನ್ಸ್‌ಟೇಬಲ್‌ಗೆ ದರೋಡೆಗೆ ಕರೆದೊಯ್ಯುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಹಣ ಹಂಚಿಕೆ ಸಮಯದಲ್ಲಿಯೂ ಕಾನ್ಸ್‌ಟೇಬಲ್ ಇರಲಿಲ್ಲ ಎಂದು ಅಧಿಕಾರಿ ವಿವರಿಸಿದರು.
2005ನೇ ಬ್ಯಾಚ್‌ನ ಇನ್ಸ್‌ಪೆಕ್ಟರ್ ಆಗಿರುವ ಯೋಗೇಶ್ ಈ ಹಿಂದೆ ಬೆಳ್ತಂಗಡಿ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಒಮ್ಮೆ ಅಮಾನತುಗೊಂಡಿದ್ದರು. ಭ್ರಷ್ಟಾಚಾರ ನಿಗ್ರಹದಳದಲ್ಲಿ (ಎಸಿಬಿ) ಇನ್ಸ್‌ಪೆಕ್ಟರ್ ಆಗಿದ್ದ ಎಸ್.ಜೆ.ಪಾರ್ಕ್ ಇನ್ಸ್‌ಪೆಕ್ಟರ್ ಆಗಿ ಒಂದು ವಾರವಷ್ಟೇ ಆಗಿತ್ತು. ಇದೀಗ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಏನಿದು ಪ್ರಕರಣ?
ತೆಂಗು, ಅಡಕೆ ವ್ಯಾಪಾರಿಯೂ ಆದ ತುಮಕೂರಿನ ಗುಬ್ಬಿ ನಿವಾಸಿ ಮೋಹನ್ ಅವರು ಚಿಕ್ಕಪೇಟೆಯಲ್ಲಿರುವ ಅಂಗಡಿಯವರಿಂದ ಬಾಕಿ ಹಣ ತೆಗೆದುಕೊಂಡು ಬರುವಂತೆ ಕೆಲಸಗಾರರಾದ ದರ್ಶನ್ ಮತ್ತು ಶಿವಸ್ವಾಮಿಗೆ ಸೂಚಿಸಿದ್ದರು.
ಮಾಲಿಕರ ಅಣತಿಯಂತೆ ಕೆಲಸಗಾರ ದರ್ಶನ್ ಮತ್ತು ಶಿವಸ್ವಾಮಿ ಚಿಕ್ಕಪೇಟೆಯಲ್ಲಿ ಅಂಗಡಿಯೊಂದರ ಮಾಲಿಕನಿಂದ ಆ.19ರಂದು .26.50 ಲಕ್ಷ ಹಣ ಪಡೆದು ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಬಳಿ ನಿಂತಿದ್ದರು. ಈ ವೇಳೆ ವೇಳೆ ಸ್ವಿಫ್ಟ್ ಕಾರಿನಲ್ಲಿ ಬಂದ ಆರೋಪಿಗಳಾದ ಜ್ಞಾನಪ್ರಕಾಶ್, ಪಿಎಸ್‌ಐ ಜೀವನ್ ಕುಮಾರ್ ಹಾಗೂ ಇನ್ನಿತರರು ಶಿವಕುಮಾರ ಸ್ವಾಮಿ, ದರ್ಶನ್‌ನನ್ನು ಕಾರಿಗೆ ಕೂರಿಸಿಕೊಂಡಿದ್ದರು. ಬಳಿಕ ನಾವು ಪೊಲೀಸರು, ನಾವು ಹೇಳುವ ಜಾಗಕ್ಕೆ ಕಾರು ಚಲಾಯಿಸಿಕೊಂಡು ಹೋಗುವಂತೆ ಸೂಚಿಸಿದ್ದರು. ಯುನಿಟಿ ಬಿಲ್ಡಿಂಗ್ ಬಳಿ ಕರೆದುಕೊಂಡು ಹೋಗಿ .26.50 ಲಕ್ಷ ಇದ್ದ ಬ್ಯಾಗ್‌ನ್ನು ಕಸಿದುಕೊಂಡಿದ್ದರು. ನಂತರ ಇಬ್ಬರನ್ನೂ ಲಾಲ್‌ಬಾಗ್ ರಸ್ತೆಯ ಹೋಟೆಲ್‌ವೊಂದರ ಬಳಿ ಬಿಟ್ಟು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಈ ಸಂಬಂಧ ಶಿವಕುಮಾರಸ್ವಾಮಿ ಸಿಟಿ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದರೋಡೆ ಕೃತ್ಯದಲ್ಲಿ ಸಬ್‌ಇನ್ಸ್‌ಪೆಕ್ಟರ್ ಜತೆ ಇನ್ಸ್‌ಪೆಕ್ಟರ್ ಕೂಡ ಭಾಗಿಯಾಗಿರುವುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿ ಇನ್ಸ್‌ಪೆಕ್ಟರ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ