ನ್ಯಾಯ ಕೋರಿ ಪಿಎಂ, ಸಿಎಂಗೆ ಮುರುಘಾಶ್ರೀ ಸಂತ್ರಸ್ತೆ ಪತ್ರ

By Govindaraj SFirst Published Nov 13, 2022, 8:06 AM IST
Highlights

ಮುರುಘಾ ಶ್ರೀ ವಿರುದ್ಧದ 2ನೇ ಪೋಕ್ಸೋ ಪ್ರಕರಣದ ಸಂತ್ರಸ್ತ ಬಾಲಕಿ, ತಮಗೆ ನ್ಯಾಯ ಕೊಡಿಸುವಂತೆ ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. 

ಮೈಸೂರು (ನ.13): ಮುರುಘಾ ಶ್ರೀ ವಿರುದ್ಧದ 2ನೇ ಪೋಕ್ಸೋ ಪ್ರಕರಣದ ಸಂತ್ರಸ್ತ ಬಾಲಕಿ, ತಮಗೆ ನ್ಯಾಯ ಕೊಡಿಸುವಂತೆ ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. ‘ಈ ಹಿಂದೆ ನಾನು ಮತ್ತು ಅಕ್ಕ ಮುರುಘಾ ಮಠದಲ್ಲಿ ಓದುತ್ತಿದ್ದೆವು. ನಮ್ಮ ತಾಯಿ ಮಠದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಅಲ್ಲಿ ವಾರ್ಡನ್‌ ಆಗಿದ್ದ ರಶ್ಮಿಯವರು ನಮ್ಮನ್ನು ಮುರುಘಾ ಶ್ರೀ ಬಳಿಗೆ ಕರೆದುಕೊಂಡು ಹೋಗುತ್ತಿದ್ದರು. ಸ್ವಾಮೀಜಿಯವರು ನಮಗೆ ತಿನ್ನಲು ಚಾಕೋಲೇಟ್‌ ಕೊಡುತ್ತಿದ್ದರು. 

ಅದನ್ನು ತಿಂದ ಬಳಿಕ ನನಗೆ ನಿದ್ದೆ ಬರುತ್ತಿತ್ತು. ಈ ರೀತಿ 4- 5 ಬಾರಿ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ನಂತರ, ನಮ್ಮ ತಾಯಿ ಧೈರ್ಯ ಮಾಡಿ ಒಡನಾಡಿ ಸೇವಾಸಂಸ್ಥೆಗೆ ನಮ್ಮನ್ನು ಕರೆದುಕೊಂಡು ಬಂದರು. ಈಗ ನಮ್ಮ ತಾಯಿಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ, ನನಗೆ ಮತ್ತು ಅಕ್ಕನಿಗೆ ಭಯ ಆಗುತ್ತಿದೆ. ನಮಗೆ ನ್ಯಾಯ ಕೊಡಿಸಿ’ ಎಂದು ಸಂತ್ರಸ್ತ ಬಾಲಕಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಅತ್ಯಾಚಾರ ಆರೋಪಿ ಮುರುಘಾಶ್ರೀಗೆ ಮಾಸ್ಟರ್​​ ಸ್ಟ್ರೋಕ್: ಮಠಕ್ಕೆ ಕಾಲಿಡೋದೂ ಅಸಾಧ್ಯ!?

ಸಂತ್ರಸ್ತೆ ತಾಯಿ ಪೊಲೀಸ್‌ ವಶಕ್ಕೆ: ಮುರುಘಾ ಶ್ರೀ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಸಂತ್ರಸ್ತೆಯ ತಾಯಿ, ಮಠದ ಅಡುಗೆ ಸಹಾಯಕಿಯನ್ನು ವಶಕ್ಕೆ ಪಡೆದಿರುವ ಗ್ರಾಮಾಂತರ ಠಾಣೆ ಪೊಲೀಸರು, ಪ್ರಕರಣ ಸಂಬಂಧ ಈಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮುರುಘಾ ಶ್ರೀ ವಿರುದ್ಧ ದೂರು ನೀಡುವಂತೆ ಸಂತ್ರಸ್ತ ಬಾಲಕಿಗೆ ಪ್ರಚೋದನೆ ನೀಡಿದ ಆಡಿಯೋವೊಂದು ಎರಡು ದಿನಗಳ ಹಿಂದೆ ವೈರಲ್‌ ಆಗಿತ್ತು. ಈ ಸಂಬಂಧ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿಯವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿ, ಮುರುಘಾ ಶ್ರೀ ವಿರುದ್ಧ ಸುಳ್ಳು ದೂರು ನೀಡಲು ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿದ್ದರು. 

ಈ ದೂರಿನಲ್ಲಿ ಸಂತ್ರಸ್ತೆಯ ತಾಯಿ, ಮಠದಲ್ಲಿ ಈ ಹಿಂದೆ ಅಡುಗೆ ಸಹಾಯಕಿಯಾಗಿದ್ದ ಗಾಯತ್ರಮ್ಮ ಅವರ ಹೆಸರನ್ನು ಉಲ್ಲೇಖಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಈ ಹಿಂದೆ ಎಸ್‌ಜೆಎಂ ವಿದ್ಯಾಪೀಠದಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದ ಅಥಣಿ ಮೂಲದ ಬಸವರಾಜೇಂದ್ರ ಹಾಗೂ ಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಅವರನ್ನು ಈಗಾಗಲೇ ಬಂಧಿಸಿದ್ದಾರೆ. ಪ್ರಕರಣದ 2ನೇ ಆರೋಪಿಯಾಗಿರುವ ಈಕೆಯನ್ನು ಎರಡು ದಿನಗಳ ಹಿಂದೆ ಮೈಸೂರಿನ ಒಡನಾಡಿ ಸಂಸ್ಥೆಯಿಂದ ಚಿತ್ರದುರ್ಗಕ್ಕೆ ಕರೆತರಲಾಗಿತ್ತು. ಈಗ ಪ್ರಾಥಮಿಕ ಹಂತದ ವಿಚಾರಣೆಗಾಗಿ ಈಕೆಯನ್ನು ವಶಕ್ಕೆ ಪಡೆಯಲಾಗಿದೆ.

ಮುರುಘಾ ಶ್ರೀ ವಿರುದ್ಧ ಯಡಿಯೂರಪ್ಪ ಗುಡುಗಿದ ಬೆನ್ನಲ್ಲೇ ಮಠದಲ್ಲಿ ತಳಮಳ, ಸಭೆ ಕರೆದ ಹಂಗಾಮಿ ಶ್ರೀ?

ಬಸವರಾಜನ್‌ ಸೆರೆ, ಪತ್ನಿಗೆ ಶೋಧ: ಮುರುಘಾಮಠದಲ್ಲಿನ ಫೋಟೋಗಳ ಕಳವು ಹಾಗೂ ಮುರುಘಾ ಶ್ರೀಗಳ ವಿರುದ್ಧ ಹೇಳಿಕೆ ನೀಡಲು ಸಂತ್ರಸ್ತೆಗೆ ಪ್ರಚೋದನೆ ನೀಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಜಿ ಶಾಸಕ ಹಾಗೂ ಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ನ್ಯಾಯಾಲಯ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದೆ. ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಶರಣರು ಈಗಾಗಲೇ ಬಂಧನದಲ್ಲಿದ್ದು, ಇದರಿಂದಾಗಿ ಮಠದ ಈ ಹಿಂದಿನ ಎರಡೂ ಮುಖ್ಯಸ್ಥರು (ಒಬ್ಬರು ಸ್ವಾಮೀಜಿ, ಇನ್ನೊಬ್ಬರು ಆಡಳಿತಾಧಿಕಾರಿ) ಈಗ ಜೈಲು ಸೇರಿದಂತಾಗಿದೆ. ಮುರುಘಾ ಶರಣರನ್ನು ಜೈಲಿಗೆ ಕಳಿಸಲು ಬಸವರಾಜನ್‌ ಸಂಚು ನಡೆಸಿದ್ದರು ಎಂದು ಈ ಹಿಂದೆ ಸ್ವಾಮೀಜಿಯವರ ಕೆಲ ಆಪ್ತರು ಆರೋಪಿಸಿದ್ದರು.

click me!