ಪಡಿತರ ಕಳ್ಳಸಾಗಣೆ ತಪ್ಪಿಸಲು ಪ್ರತಿ ಚೀಲಕ್ಕೂ ಚಿಪ್‌..!

By Kannadaprabha News  |  First Published Jun 5, 2022, 4:18 AM IST

*  ಆಹಾರ ಧಾನ್ಯ ಕಾಳಸಂತೆಯಲ್ಲಿ ಅಕ್ರಮ ಮಾರಾಟ ತಡೆಗೆ ತಂತ್ರಜ್ಞಾನ ಬಳಕೆ
*  ಆಹಾರ ಇಲಾಖೆ ಚಿಂತನೆ
*  ಆರ್‌ಎಫ್‌ಐಸಿ ಬಳಸಿ ಧಾನ್ಯ ಚೀಲಗಳ ಟ್ರ್ಯಾಕಿಂಗ್‌
 


ಸಂಪತ್‌ ತರೀಕೆರೆ

ಬೆಂಗಳೂರು(ಜೂ.05): ಪಡಿತರ ಆಹಾರ ಧಾನ್ಯಗಳ ಅಕ್ರಮ ಸಾಗಾಣಿಕೆ ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಆಹಾರ ಧಾನ್ಯಗಳ ಮೂಟೆಗಳಿಗೆ ಆಟೋಮೆಟಿಕ್‌ ಟ್ರೇಸಿಂಗ್‌ ತಂತ್ರಜ್ಞಾನ ಆಧಾರಿತ ‘ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್‌ ಚಿಪ್‌’ (ಆರ್‌ಎಫ್‌ಐಸಿ) ಅಳವಡಿಸುವ ಕುರಿತು ಚಿಂತನೆ ನಡೆಸಿದೆ.

Tap to resize

Latest Videos

ಈ ತಂತ್ರಜ್ಞಾನ ಅಳವಡಿಕೆಯಿಂದ ಗೋದಾಮುಗಳಿಂದ ಅಕ್ಕಿ, ರಾಗಿ, ಜೋಳ, ಬೇಳೆ ಸೇರಿದಂತೆ ಪಡಿತರ ಆಹಾರ ಧಾನ್ಯಗಳನ್ನು ಹೊರತರುವಾಗಲೇ ಮೂಟೆಗಳಲ್ಲಿ ಚಿಪ್‌ಗಳು ಸ್ಕಾ್ಯನ್‌ ಆಗಲಿದ್ದು, ಪ್ರತಿಯೊಂದರ ಲೆಕ್ಕ ಸಿಗಲಿದೆ. ಅಕ್ರಮವಾಗಿ ಒಂದೇ ಒಂದು ಮೂಟೆಯನ್ನೂ ಹೊರಗೆ ಸಾಗಿಸಲು ಸಾಧ್ಯವಾಗದಂತೆ ಈ ತಂತ್ರಜ್ಞಾನದಿಂದ ಪತ್ತೆ ಮಾಡಬಹುದಾಗಿದೆ.

Government Benefits : ರೇಷನ್ ಕಾರ್ಡ್ ಪಡೆಯೋ ಮೊದಲು ಅದರ ವಿಧ ತಿಳ್ಕೊಳ್ಳಿ

ಭಾರತೀಯ ಆಹಾರ ನಿಗಮ (ಎಫ್‌ಸಿಐ) ಗೋದಾಮು ಹಾಗೂ ಅಕ್ಕಿ ಗಿರಣಿಗಳಲ್ಲಿ ಅಕ್ಕಿ ತುಂಬಿಸುವಾಗಲೇ ಮೂಟೆಗಳಲ್ಲಿ ಚಿಪ್‌ಗಳನ್ನು ಅಳವಡಿಸಲಿದೆ. ನಂತರ, ಸ್ಕಾ್ಯನ್‌ ಆಗದೆ ಆಹಾರ ಧಾನ್ಯಗಳ ಮೂಟೆಗಳನ್ನು ಹೊರಗೆ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣ ನಿರ್ಬಂಧಿಸಲಾಗುತ್ತದೆ. ಗೋದಾಮುಗಳಿಂದ ಹೊರಗೆ ಹೋದ ಮೂಟೆಯು ಎಲ್ಲಿಗೆ ಹೋಗಿದೆ, ಎಲ್ಲಿಗೆ ಹೋಗುತ್ತಿದೆ ಎಂಬುದರ ಮಾಹಿತಿಯನ್ನು ಈ ಚಿಪ್‌ನಿಂದಲೇ ಪತ್ತೆ ಮಾಡಲು ಜಿಪಿಎಸ್‌ ಬಳಕೆ ಮಾಡಲು ಚಿಂತನೆ ನಡೆಸಲಾಗಿದೆ. ಈ ಎಲ್ಲ ವ್ಯವಸ್ಥೆಗಳನ್ನು ಸರ್ವೇಕ್ಷಣೆ ಮಾಡಲು ಆಹಾರ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಯಂತ್ರೋಪಕರಣಗಳ ವ್ಯವಸ್ಥೆ ಅವಳಡಿಸಲಾಗುವುದು. ಇದರಿಂದಾಗಿ ಆಹಾರ ಧಾನ್ಯಗಳ ಮೂಟೆಗಳು ನಿಗದಿತ ಅವಧಿಯಲ್ಲಿ ತಲುಪಬೇಕಾದ ಸ್ಥಳಕ್ಕೆ ಸುಲಭವಾಗಿ ತಲುಪುವಂತೆ ಮಾಡಲು ಅನುಕೂಲವಾಗಲಿದೆ. ಆಹಾರ ಇಲಾಖೆಯ ಕಣ್ತಪ್ಪಿಸಿ ಕಾಳಸಂತೆಯಲ್ಲೂ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಹಿರಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

470 ಪ್ರಕರಣ ದಾಖಲು:

2021-22ನೇ ಸಾಲಿನಲ್ಲಿ 470 ಪ್ರಕರಣಗಳನ್ನು ದಾಖಲಿಸಿ, ಅಗತ್ಯ ವಸ್ತುಗಳ ಕಾಳಸಂತೆ ಮಾಡುತ್ತಿದ್ದ ಅಕ್ಕಿಗಿರಣಿಗಳ ಮಾಲಿಕರನ್ನು ಮತ್ತು ಇತರೆ ಅಕ್ರಮ ವ್ಯಾಪಾರಿಗಳನ್ನು ಬಂಧಿಸಲಾಗಿದೆ. ಅವರಿಂದ ಕೋಟ್ಯಂತರ ರು. ಮೌಲ್ಯದ ಅಕ್ಕಿ, ಗೋಧಿ, ರಾಗಿ ಮತ್ತು ವಾಹನ ಹಾಗೂ ಕಟ್ಟಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಹಲವು ಪ್ರಕರಣಗಳಲ್ಲಿ ಪಡಿತರ ಆಹಾರ ಧಾನ್ಯದ ಅಕ್ರಮ ಸಾಗಾಣಿಕೆ ಮತ್ತು ಮಾರಾಟವನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ. ಆರ್‌ಎಫ್‌ಐಸಿ ತಂತ್ರಜ್ಞಾನ ಅಳವಡಿಕೆಯಿಂದ ಕಳ್ಳಕಾಕರಿಗೆ ಕಡಿವಾಣ ಬೀಳಲಿದೆ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.

ತಿಂಗಳಿಗೆ 44 ಲಕ್ಷ ಮೂಟೆಗೆ ಚಿಪ್‌ ಬಳಕೆ

ರಾಜ್ಯದಲ್ಲಿ ಪ್ರತಿ ತಿಂಗಳು 2.17 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ವಿತರಣೆಯಾಗುತ್ತದೆ. ಅದಕ್ಕಾಗಿ ತಲಾ 50 ಕೆ.ಜಿ.ಯ 44 ಲಕ್ಷಕ್ಕೂ ಅಧಿಕ ಮೂಟೆಗಳಲ್ಲಿ ಅಕ್ಕಿ ರವಾನೆಯಾಗುತ್ತದೆ. ಆದ್ದರಿಂದ ಪ್ರತಿ ತಿಂಗಳು 44 ಲಕ್ಷಕ್ಕೂ ಅಧಿಕ ಚೀಲಗಳಿಗೆ ಚಿಪ್‌ಗಳನ್ನು ಅಳವಡಿಸಬೇಕಿದೆ.

ಜೂನ್‌ ಒಳಗೆ 8 ಲಕ್ಷ ಬಿಪಿಎಲ್‌ ಕಾರ್ಡ್‌: ಸಚಿವ ಉಮೇಶ್‌ ಕತ್ತಿ

ಏನಿದು ಆರ್‌ಎಫ್‌ಐಸಿ ತಂತ್ರಜ್ಞಾನ?

ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ ಚಿಪ್‌ಗಳು ನಿರಂತರವಾಗಿ ರೇಡಿಯೋ ತರಂಗಗಳನ್ನು ಹೊರಸೂಸುತ್ತವೆ. ಭಾರತೀಯ ಆಹಾರ ನಿಗಮದಿಂದ ರಾಡಾರ್‌ಗಳ ಮೂಲಕ ಈ ತರಂಗಗಳನ್ನು ಗುರುತಿಸಬಹುದು. ಪ್ರತಿ ಚೀಲಕ್ಕೂ ಕೇವಲ 25 ಪೈಸೆ ವೆಚ್ಚದಲ್ಲಿ ಇಂತಹ ಚಿಪ್‌ ಅಳವಡಿಸಬಹುದು. ಆಹಾರ ನಿಗಮದಿಂದ ಈ ಚಿಪ್‌ ಸ್ಕಾ್ಯನ್‌ ಆದಮೇಲೇ ಚೀಲ ಹೊರಹೋಗುತ್ತದೆ. ನಂತರ ಅದನ್ನು ಬಳಕೆದಾರರಿಗೆ ವಿತರಣೆಯವರೆಗೂ ಟ್ರ್ಯಾಕಿಂಗ್‌ ಮಾಡಬಹುದು.

ತಜ್ಞರೊಂದಿಗೆ ಸಚಿವ ಕತ್ತಿ ಚರ್ಚೆ

ಪಡಿತರ ಆಹಾರ ಧಾನ್ಯಗಳ ಮೂಟೆಗಳಿಗೆ ಚಿಪ್‌ ಅಳವಡಿಸುವ ಕುರಿತು ಸಚಿವ ಉಮೇಶ್‌ ಕತ್ತಿ ಅವರು ತಂತ್ರಜ್ಞರೊಂದಿಗೆ ಚರ್ಚೆ ನಡೆಸಿದ್ದಾರೆ. ಶೀಘ್ರ ಈ ಕುರಿತು ಕ್ರಮ ಕೈಗೊಳ್ಳಲಾಗುವುದು. ಪ್ರತಿ ಮೂಟೆಗೆ ಚಿಪ್‌ ಅಳವಡಿಸಲು 25 ಪೈಸೆಯಂತೆ ಖರ್ಚಾಗಲಿದೆ. ಇದರಿಂದ ಇಲಾಖೆಗೆ 11ರಿಂದ 12 ಲಕ್ಷ ರು. ಹೊರೆಯಾಗಲಿದೆ. ಆದರೂ ಕಾಳಸಂತೆಯಲ್ಲಿ ಪಡಿತರ ಆಹಾರ ಧಾನ್ಯಗಳ ಅಕ್ರಮ ಮಾರಾಟ ತಡೆಯಲು ತಂತ್ರಜ್ಞಾನ ಬಳಕೆ ಮಾಡುವುದಾಗಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
 

click me!