Covid Crisis: ಕರ್ನಾಟಕದಲ್ಲಿ 222 ಮಂದಿಗೆ ಕೋವಿಡ್‌: ಪಾಸಿಟಿವಿಟಿ ಅರ್ಧ ಇಳಿಕೆ

By Govindaraj SFirst Published Jun 5, 2022, 3:00 AM IST
Highlights

ರಾಜ್ಯದಲ್ಲಿ ಸತತ ಎರಡನೇ ದಿನ ಕೊರೋನಾ ಸೋಂಕು ಹೊಸ ಪ್ರಕರಣಗಳು ಇಳಿಕೆಯಾಗಿವೆ. ಜತೆಗೆ ಕೊರೋನಾ ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.2ರಿಂದ ಶೇ.1ಕ್ಕೆ ಇಳಿದಿದೆ. ಶುಕ್ರವಾರ 259 ಇದ್ದ ಪ್ರಕರಣಗಳ ಸಂಖ್ಯೆ ಶನಿವಾರ 222ಕ್ಕೆ ಇಳಿದಿದೆ. 

ಬೆಂಗಳೂರು (ಜೂ.05): ರಾಜ್ಯದಲ್ಲಿ ಸತತ ಎರಡನೇ ದಿನ ಕೊರೋನಾ ಸೋಂಕು ಹೊಸ ಪ್ರಕರಣಗಳು ಇಳಿಕೆಯಾಗಿವೆ. ಜತೆಗೆ ಕೊರೋನಾ ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.2ರಿಂದ ಶೇ.1ಕ್ಕೆ ಇಳಿದಿದೆ. ಶುಕ್ರವಾರ 259 ಇದ್ದ ಪ್ರಕರಣಗಳ ಸಂಖ್ಯೆ ಶನಿವಾರ 222ಕ್ಕೆ ಇಳಿದಿದೆ. 191 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಆದರೆ ಗುಣಮುಖರ ಸಂಖ್ಯೆ ಕಡಿಮೆ ಇರುವ ಕಾರಣ ಸಕ್ರಿಯ ಕೇಸು 2260ಕ್ಕೆ ಏರಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಕೊರೋನಾ ಪರೀಕ್ಷೆಗಳನ್ನು ಐದು ಸಾವಿರದಷ್ಟು ಹೆಚ್ಚಿಸಿವೆ. 

ಒಟ್ಟು 23 ಸಾವಿರ ಪರೀಕ್ಷೆ ನಡೆದಿದ್ದು, ಪಾಸಿಟಿವಿಟಿ ದರ ಶೇ 0.9ರಷ್ಟುದಾಖಲಾಗಿದೆ. ಪರೀಕ್ಷೆ ಹೆಚ್ಚಿದರೂ ಹೊಸ ಪ್ರಕರಣಗಳು 37 ಕಡಿಮೆಯಾಗಿವೆ. (ಶುಕ್ರವಾರ 259 ಪ್ರಕರಣಗಳು, ಸಾವು ಶೂನ್ಯ). ಬೆಂಗಳೂರು 210, ಉಡುಪಿ 4, ಚಿತ್ರದುರ್ಗ ಇಬ್ಬರು, ಬಳ್ಳಾರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕಲಬುರಗಿ, ರಾಯಚೂರು ಹಾಗೂ ತುಮಕೂರಿನಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 21 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಒಟ್ಟಾರೆ ರಾಜ್ಯದಲ್ಲಿ ಈವರೆಗೆ 39.5 ಲಕ್ಷ ಮಂದಿಗೆ ಸೊಂಕು ತಗುಲಿದೆ. 39.1 ಲಕ್ಷ ಮಂದಿ ಗುಣಮುಖರಾಗಿದ್ದು, 40,065 ಮಂದಿ ಸಾವಿಗೀಡಾಗಿದ್ದಾರೆ.

ಕೊರೋನಾ ಭಾರೀ ಏರಿಕೆ: 84 ದಿನ ಬಳಿಕ ದೇಶದಲ್ಲಿ 4000ಕ್ಕೂ ಅಧಿಕ ಕೇಸ್‌

ಟೆಸ್ಟಿಂಗ್‌ ಹೆಚ್ಚಿಸಿ-ಕರ್ನಾಟಕ ಸೇರಿ 5 ರಾಜ್ಯಕ್ಕೆ ಕೇಂದ್ರ ಪತ್ರ: 4ನೇ ಅಲೆ ಭೀತಿ ನಡುವೆಯೇ ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಹೊಸ ಕೋವಿಡ್‌ ಕ್ಲಸ್ಟರ್‌ಗಳು ಉಗಮವಾಗಿ ಕೊರೋನಾ ಪ್ರಕರಣ ಮತ್ತು ಪಾಸಿಟಿವಿಟಿ ದರ ಹೆಚ್ಚುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಈ ರಾಜ್ಯಗಳಲ್ಲಿ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದೆ. ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಗೆ ಈ ಸಂಬಂಧ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಶುಕ್ರವಾರ ಪತ್ರ ಬರೆದಿದ್ದಾರೆ. 

ಈ 5 ರಾಜ್ಯಗಳು ದೇಶದ ಒಟ್ಟಾರೆ ಕೋವಿಡ್‌ ಪ್ರಕರಣಗಳಲ್ಲಿ ಹೆಚ್ಚು ಪಾಲು ಹೊಂದಿವೆ. ಹೀಗಾಗಿ ಭೂಷಣ್‌ ಈ ರಾಜ್ಯಗಳಿಗೆ ಪತ್ರ ರವಾನಿಸಿದ್ದಾರೆ. ‘ನಿಮ್ಮ ರಾಜ್ಯಗಳಲ್ಲಿ ಕೋವಿಡ್‌ ನಿಗಾ ಕಾರ್ಯ ಚುರುಕುಗೊಳಿಸಬೇಕು. ಟೆಸ್ಟಿಂಗ್‌ ಹೆಚ್ಚಿಸಬೇಕು. ನಿಗದಿಪಡಿಸಿದ ಸ್ಯಾಂಪಲ್‌ಗಳ ಜೀನೋಮ್‌ ಸೀಕ್ವೆನ್ಸಿಂಗ್‌ ನಡೆಸಬೇಕು’ ಎಂದು ಭೂಷಣ್‌ ಸೂಚಿಸಿದ್ದಾರೆ.ಇದಲ್ಲದೆ, ‘ವಿಷಮಶೀತ ಜ್ವರ (ಐಎಲ್‌ಐ) ಹಾಗೂ ಉಸಿರಾಟದ ಸಮಸ್ಯೆ (ಸಾರಿ) ಪ್ರಕರಣಗಳ ಮೇಲೆ ನಿಗಾ ಇಡಬೇಕು. ಇದರಿಂದ ಆರಂಭದಲ್ಲೇ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತದೆ’ ಎಂದು ಅವರು ಸಲಹೆ ನೀಡಿದ್ದಾರೆ.

Covid Crisis: ಕರ್ನಾಟಕದಲ್ಲಿ 259 ಕೇಸು: ಪಾಸಿಟಿವಿಟಿ ಶೇ.2.06ಕ್ಕೆ ಏರಿಕೆ!

ಕರ್ನಾಟಕದಲ್ಲಿ ಬೆಂಗಳೂರು ಕ್ಲಸ್ಟರ್‌: ಕೇಂದ್ರ ಸರ್ಕಾರಕ್ಕೆ ರಾಜ್ಯಗಳು ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳ ಮಾಹಿತಿ ನೀಡಿವೆ. ಇದರಲ್ಲಿ ಕೇರಳದ 11 ಜಿಲ್ಲೆಗಳು, ತಮಿಳುನಾಡಿನ 2 ಜಿಲ್ಲೆಗಳು, ಮಹಾರಾಷ್ಟ್ರದ 6 ಜಿಲ್ಲೆಗಳು, ತೆಲಂಗಾಣದ 1 ಜಿಲ್ಲೆ ಹಾಗೂ ಕರ್ನಾಟಕದ 1 ಜಿಲ್ಲೆ (ಬೆಂಗಳೂರು ನಗರ ಜಿಲ್ಲೆ) ಸೇರಿವೆ. ಈ ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣ ಹಾಗೂ ಪಾಸಿಟಿವಿಟಿ ದರ ಹೆಚ್ಚುತ್ತಿದ್ದು, ಹೊಸ ಕೋವಿಡ್‌ ಕ್ಲಸ್ಟರ್‌ಗಳಾಗಿ ಮಾರ್ಪಟ್ಟಿವೆ.

click me!