ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಈಗ ಕನ್ನಡಮಯ! ಹಳದಿ-ಕೆಂಪು ಬಣ್ಣ, ಕನ್ನಡ ಸೂಚನಾ ಫಲಕಗಳೊಂದಿಗೆ ಹೊಸ ರೂಪ

Kannadaprabha News   | Kannada Prabha
Published : Mar 15, 2026, 07:08 AM IST
Chinnaswamy Stadium Goes Kannada Yellow Red Theme and Kannada Signages Unveiled

ಸಾರಾಂಶ

ಬೆಂಗಳೂರಿನ ಪ್ರಸಿದ್ಧ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ಇದೀಗ ಕನ್ನಡಮಯವಾಗುತ್ತಿದೆ. ಈ ಹಿಂದೆ ಕನ್ನಡ ಕಡೆಗಣನೆಗೆ ಟೀಕೆಗೊಳಗಾಗಿದ್ದ ಕೆಎಸ್‌ಸಿಎ, ಇದೀಗ ಹೊಸ ಗೇಟ್‌ಗಳು, ಸೂಚನಾ ಫಲಕಗಳಲ್ಲಿ ಕನ್ನಡಕ್ಕೆ ಮತ್ತು ಕರ್ನಾಟಕದ ಬಾವುಟದ ಹಳದಿ-ಕೆಂಪು ಬಣ್ಣಗಳಿಗೆ ಆದ್ಯತೆ ನೀಡಿದೆ. 

ಬೆಂಗಳೂರು (ಮಾ.15): ಒಂದು ಕಾಲದಲ್ಲಿ ಕನ್ನಡ ಬಳಸಲು ಹಿಂದೇಟು ಹಾಕುತ್ತಿದ್ದ, ಕನ್ನಡ ಎಲ್ಲಿ ಎಂದು ಹುಡುಕಬೇಕಾಗಿದ್ದ ನಗರದ ಪ್ರಸಿದ್ಧ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಈಗ ಕನ್ನಡಮಯವಾಗುತ್ತಿದೆ. ಕರ್ನಾಟಕದ ಬಾವುಟದ ಹಳದಿ-ಕೆಂಪು ಬಣ್ಣಗಳು, ಕನ್ನಡ ಭಾಷೆಯ ಕಂಪು ಕ್ರೀಡಾಂಗಣ ಸುತ್ತಲೂ ಹರಡಿದ್ದು, ರಾಜ್ಯದ ಕ್ರಿಕೆಟ್ ಅಭಿಮಾನಿಗಳ ಗಮನಸೆಳೆಯುತ್ತಿದೆ.

ಕಳೆದ ವರ್ಷ ಜೂನ್‌ನಲ್ಲಿ ಕಾಲ್ತುಳಿತ ಸಂಭವಿಸಿದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಮಹತ್ವದ ಪಂದ್ಯಗಳು ನಡೆದಿಲ್ಲ. ಈ ಬಾರಿ ಐಪಿಎಲ್‌ಗೆ ಆತಿಥ್ಯ ವಹಿಸಬೇಕಿರುವ ಈ ಕ್ರೀಡಾಂಗಣದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಹಲವು ಬೃಹತ್‌ ಗೇಟ್‌ಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಅಳವಡಿಸಿದ್ದು, ಇನ್ನಷ್ಟು ಕಾಮಗಾರಿಗಳು ಕೆಲವೇ ದಿನಗಳಲ್ಲಿ ಮುಗಿಯಬೇಕಿದೆ.

ಈ ನಡುವೆ ಕ್ರೀಡಾಂಗಣದಲ್ಲಿ ಕೆಎಸ್‌ಸಿಎ ಕನ್ನಡಕ್ಕೆ ಒತ್ತು ಕೊಡುವ ಕೆಲಸ ಮಾಡುತ್ತಿದೆ. ಹೊಸದಾಗಿ ಅಳವಡಿಸಿರುವ ಗೇಟ್‌ಗಳ ಹೆಸರನ್ನು ಕನ್ನಡದಲ್ಲೇ ಮುದ್ರಿಸಲಾಗಿದೆ. ಸೂಚನಾ ಫಲಕ, ನಿಯಮಾವಳಿಗಳಲ್ಲಿ ಕೂಡಾ ಕನ್ನಡಕ್ಕೆ ಒತ್ತು ನೀಡಲಾಗಿದೆ. ವಿಶೇಷ ಏನೆಂದರೆ, ಗೇಟ್‌ಗಳ ಅಂಕಿ-ಸಂಖ್ಯೆಗಳನ್ನು ಕೂಡಾ ಕನ್ನಡದಲ್ಲೇ ಬರೆಯಲಾಗಿದೆ. ಇದರ ಜೊತೆಗೆ ಇಂಗ್ಲಿಷ್ ಕೂಡಾ ಬಳಸಲಾಗಿದೆ.

ಹಳದಿ-ಕೆಂಪು ರಂಗು:

ಕೇವಲ ಕನ್ನಡಕ್ಕೆ ಒತ್ತು ಕೊಟ್ಟಿದ್ದು ಮಾತ್ರವಲ್ಲದೇ ಕರ್ನಾಟಕ ಬಾವುಟದ ಬಣ್ಣವಾಗಿರುವ ಹಳದಿ-ಕೆಂಪು ಕೂಡಾ ಕ್ರೀಡಾಂಗಣದ ಸುತ್ತಲೂ ಕಂಗೊಳಿಸುತ್ತಿದೆ. ಪ್ರವೇಶ ದ್ವಾರದ ಮೇಲ್ಭಾಗದ ಫಲಕ ಕೆಂಪು ಬಣ್ಣದಲ್ಲಿದ್ದರೆ, ಅದರಲ್ಲಿ ಬರೆದಿರುವ ಅಕ್ಷರಗಳು ಹಳದಿ ಬಣ್ಣದಲ್ಲಿವೆ. ಕ್ರೀಡಾಂಗಣದ ಒಳ ಭಾಗದಲ್ಲಿ ಹಾಕಿರುವ ಸೂಚನಾ ಫಲಕ, ನಿಯಮಾವಳಿ ಕೂಡಾ ಹಳದಿ-ಕೆಂಪು ಬಣ್ಣಗಳಲ್ಲಿವೆ.

ಕನ್ನಡ ಬಳಸದೆ ಕೆಂಗಣ್ಣಿಗೆ ಗುರಿಯಾಗಿದ್ದ ಕೆಎಸ್‌ಸಿಎ!

ಕೆಎಸ್‌ಸಿಎಯಲ್ಲಿ ಈ ಹಿಂದಿನಿಂದಲೂ ಕನ್ನಡಕ್ಕೆ ಅಷ್ಟೇನೂ ಪ್ರಾಮುಖ್ಯತೆ ಇರಲಿಲ್ಲ. ಅದರಲ್ಲೂ 2023ರ ಮಹಾರಾಜ ಟ್ರೋಫಿ ವೇಳೆ ಕೆಎಸ್‌ಸಿಎ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿ, ಕೇವಲ ಇಂಗ್ಲಿಷ್‌ಗೆ ಒತ್ತುಕೊಟ್ಟಿತ್ತು. ಈ ಬಗ್ಗೆ ‘ಕನ್ನಡಪ್ರಭ’ ಮಾಡಿದ್ದ ವರದಿಯನ್ನು ಉಲ್ಲೇಖಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೆಎಸ್‌ಸಿಎಗೆ ನೋಟಿಸ್‌ ಜಾರಿ ಮಾಡಿತ್ತು. ಆ ಬಳಿಕ ಕೆಎಸ್‌ಸಿಎ ಕನ್ನಡ ಬಳಸದ್ದಕ್ಕೆ ವಿಷಾಧ ವ್ಯಕ್ತಪಡಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಏರ್‌ಪೋರ್ಟ್‌ಗೆ ತಡವಾಗಿ ಬಂದ, ಮಾತಿನ ಭರದಲ್ಲಿ 'ಬಾಂಬ್ ಇದ್ರೆ..' ಅಂದ, ಖ್ಯಾತ ಗಾಯಕ ಅರೆಸ್ಟ್!
ಕರಾವಳೀಲಿ ಬಾರ್ ಅಲ್ಲ, ಹಾರ್ಬರ್ ಅಭಿವೃದ್ಧಿ ಅಗತ್ಯ | ಅಜಿತ್ ಶೆಟ್ಟಿ ಹೆರಂಜೆ ಅಂಕಣ