ಕಾಡಾನೆಯ ಭರ್ಜರಿ ಸೇಡು, ಮನೆಮುಂದೆ ನಿಲ್ಲಿಸಿದ ಕಾರು ಜಖಂಗೊಳಿಸಿ ಪರಾರಿ

By Sathish Kumar KH  |  First Published Jul 5, 2023, 10:29 PM IST

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೇರಿಕೆ ಗ್ರಾಮದಲ್ಲಿ ಮನೆಯ ಬಳಿಯಿರುವ ಕಾರ್ ಶೆಡ್‌ಗೆ ನುಗ್ಗಿ ಕಾರನ್ನು ಪುಡಿ, ಪುಡಿ ಮಾಡಿರುವ ಘಟನೆ ನಡೆದಿದೆ.


ಚಿಕ್ಕಮಗಳೂರು (ಜು.05): ಚಿಕ್ಕಮಗಳೂರು ಜಿಲ್ಲೆ ಮಲೆನಾಡಿನ ಭಾಗವಾದ ಮೂಡಿಗೆರೆ ತಾಲೂಕಿನ ಹೇರಿಕೆ ಗ್ರಾಮದಲ್ಲಿ ಮನೆಯ ಬಳಿಯಿರುವ ಕಾರ್ ಶೆಡ್‌ಗೆ ನುಗ್ಗಿ ಕಾರನ್ನು ಪುಡಿ, ಪುಡಿ ಮಾಡಿರುವ ಘಟನೆ ನಡೆದಿದೆ. ಹೇರಿಕೆ ಗ್ರಾಮದ ಮಹೇಶ್ ಎಂಬುವವರ ಕಾರು ಭಾಗಶಃ ಜಖಂ ಆಗಿದೆ.

ಮಲೆನಾಡಿನಲ್ಲಿ ಕಾಡಾನೆ ದಾಳಿ ಮುಂದುವರಿದೆ. ಕಾಡಾನೆ ದಾಳಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಇದೀಗ ಬೆಳೆ ನಾಶದ ಜೊತೆಗೆ ಪ್ರಾಣ ಭೀತಿಯೂ ಎದುರಾಗಿದೆ. ಇಷ್ಟು ದಿನ ತೋಟ, ಗೆದ್ದೆಗಳಿಗೆ ದಾಳಿ ಮಾಡುತ್ತಿದ್ದ ಕಾಡಾನೆ  ವಾಸದ ಮನೆಯ ಸಮೀಪವೇ ಬರುತ್ತಿದ್ದು ಮಲೆನಾಡಿನ ಜನರ ಆತಂಕಕ್ಕೆ ಕಾರಣವಾಗಿದೆ. ನಿನ್ನೆಯೂ ಕೂಡ ಚಿಕ್ಕಮಗಳೂರು ಜಿಲ್ಲೆ ಮಲೆನಾಡಿನ ಭಾಗವಾದ ಮೂಡಿಗೆರೆ ತಾಲೂಕಿನ ಹೇರಿಕೆ ಗ್ರಾಮದಲ್ಲಿ ಮನೆಯ ಕಾರ್ ಶೆಡ್ ಗೆ ನುಗ್ಗಿ ಕಾರು ಪುಡಿ ಮಾಡಿರುವ ಘಟನೆ ನಡೆದಿದೆ.ಹೇರಿಕೆ ಗ್ರಾಮದ ಮಹೇಶ್ ಎಂಬುವವರ ಕಾರು ಜಖಂ ಗೊಳಿಸಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. 

Latest Videos

undefined

ಕಾಫಿನಾಡಲ್ಲಿ ಭರ್ಜರಿ ಮಳೆ, ತುಂಗಾ-ಭದ್ರಾ- ಹೇಮಾವತಿ ನದಿಗಳಿಗೆ ಜೀವಕಳೆ

ಆನೆ ಕಾರ್ಯಪಡೆ ಸಿಬ್ಬಂದಿಗಳಿಂದ ಭೇಟಿ: ನಿನ್ನೆ ರಾತ್ರಿ ಸಮಯ ಧೋ ಎಂದು ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಆನೆ ಮನೆ ಬಳಿ ಬಂದು ಶೆಡ್ ಅನ್ನು ಪೂರ್ಣ ಬೀಳಿಸಿದೆ ಹಾಗೆಯೇ ಶೆಡ್ ನಲ್ಲಿ ನಿಲ್ಲಿಸಿದ್ದ ಮಾರುತಿ ಇಗ್ನಿಷ್ ಕಾರನ್ನು ಜಖಂಗೊಳಿಸಿದೆ. ಕಾರಿನ ಹಿಂಭಾಗದ ಗ್ಲಾಸ್ ಸಂಪೂರ್ಣ ಪುಡಿಯಾಗಿದೆ. ಮನೆಯ ಕಿಟಕಿಯಿಂದ ಆನೆಯನ್ನು ಕಂಡ ಮಹೇಶ್ ಗಾಬರಿಯಿಂದ ಹೊರಗಡೆ ಬಂದಿಲ್ಲ. ಅರಣ್ಯ ಪ್ರದೇಶದಿಂದ ಮನೆಯ ಪಕ್ಕದಲ್ಲಿ ಬಂದ ಕಾಡಾನೆ ಕಾರಿನ ಮೇಲೆ ದಾಳಿ ಮಾಡಿ ವಾಪಸ್ಸಾಗಿದೆ. ಇದೀಗ, ಕಾಡಾನೆ ಮಹೇಶ್ ಮನೆಯ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಇದೀಗ, ಸ್ಥಳೀಯರು ಹಾಗೂ ಆನೆ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಕಾಡಾನೆಯನ್ನ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಸ್ಥಳಕ್ಕೆ  ಮೂಡಿಗೆರೆಯ ಅರಣ್ಯ ಇಲಾಖೆ ಆನೆ ಕಾರ್ಯಪಡೆ ಸಿಬ್ಬಂದಿಗಳಿಂದ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು: ಊರುಬಗೆ ಭಾಗದಲ್ಲಿ ಕಳೆದ ಅನೇಕ ದಿನಗಳಿಂದ ಮೂರ್ನಾಲ್ಕು ಕಾಡಾನೆಗಳು ಸತತವಾಗಿ ಗ್ರಾಮದೊಳಗೆ ದಾಳಿಯಿಡುತ್ತಿವೆ. ಹಗಲು ರಾತ್ರಿಯೆನ್ನದೇ ರಸ್ತೆಯಲ್ಲಿ, ಕಾಫಿ ತೋಟದಲ್ಲಿ ಓಡಾಡುತ್ತಿವೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಗಳನ್ನು ನಿಯಂತ್ರಿಸುವಂತೆ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೆಡ್ ಮತ್ತು ಕಾರು ಜಖಂ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

ಮಧ್ಯರಾತ್ರಿ ಮೆಸ್ಕಾಂ ಸೈನಿಕರಿಂದ ವಿದ್ಯುತ್‌ ಲೈನ್‌ ರಿಪೇರಿ: ರಾತ್ರಿ ಹನ್ನೊಂದು ಗಂಟೆಗೆ ಸುರಿಯೋ ಮಳೆ ಮಧ್ಯೆಯೂ ಟಾರ್ಚ್ ಬೆಳಕಿನಲ್ಲಿ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬವನ್ನೇರಿ ಲೈನ್ ದುರಸ್ಥಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮುಂಡಗೋಡು ಗ್ರಾಮದ ಬಳಿ ನಡೆದಿದೆ. ಮೆಸ್ಕಾಂ ಸಿಬ್ಬಂದಿಗಳ ಈ ಕೆಲಸಕ್ಕೆ ಶೃಂಗೇರಿ ತಾಲೂಕು ಹಾಗೂ ಜಯಪುರ ಗ್ರಾಮದ ನಿವಾಸಿಗಳು ಮೆಸ್ಕಾಂ ಸಿಬ್ಬಂದಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಭಾರೀ ಗಾಳಿಗೆ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಮೇಲ್ಜಾತಿಯವರಿಗೆ ಬುದ್ಧಿ ಹೇಳಿದ ದಲಿತ ಯುವಕ, ಮರುದಿನವೇ ಶವವಾಗಿ ಪತ್ತೆ

ಕೊಪ್ಪ ತಾಲೂಕಿನ ಜಯಪುರ ಹಾಗೂ ಶೃಂಗೇರಿ ತಾಲೂಕಿನ ಜನ ಕತ್ತಲಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಎಲ್ಲಿ ವಿದ್ಯುತ್ ಸಮಸ್ಯೆಯಾಗಿದೆ ಎಂದು ನಾಲ್ಕು ಗಂಟೆಗಳ ಕಾಲ ಮೆಸ್ಕಾಂ ಸಿಬ್ಬಂದಿಗಳು ಹುಡುಕಾಡಿದ್ದಾರೆ. ರಾತ್ರಿ ಹನ್ನೊಂದು ಗಂಟೆ ವೇಳೆಗೆ ಸಮಸ್ಯೆಯ ಜಾಗ ಹಿಡಿದ ಸಿಬ್ಬಂದಿಗಳು ರಾತ್ರಿ ಹನ್ನೊಂದು ಗಂಟೆಗೆ ಕಂಬ ಹತ್ತಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿದ್ದಾರೆ. ಇಬ್ಬರು ಸಿಬ್ಬಂದಿಗಳು ಕಂಬ ಏರಿ ಲೈನ್ ದುರಸ್ತಿ ಮಾಡುತ್ತಿದ್ದರೆ ಮತ್ತೋರ್ವ ಸಿಬ್ಬಂದಿ ಕೆಳಗೆ ನಿಂತು ಟಾರ್ಚ್ನಲ್ಲಿ ಲೈಟ್ ಹಾಕಿದ್ದಾರೆ. ಮೆಸ್ಕಾಂ ಸಿಬ್ಬಂದಿಗಳ ಈ ಕಾರ್ಯಕ್ಕೆ ಜಯಪುರ ಹಾಗೂ ಶೃಂಗೇರಿ ಜನ ಮೆಚ್ಚುಗೆ ಸೂಚಿಸಿದ್ದಾರೆ.

click me!