
ಚಾಮರಾಜನಗರ (ಜ.23): ಚಾಮರಾಜನಗರದಲ್ಲಿ ಕರ್ತವ್ಯ ಮರೆತ ಸಂಚಾರಿ ಪೊಲೀಸರೊಬ್ಬರು ಲಂಚದ ಹಣ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಾರ್ವಜನಿಕರ ಸೇವೆಯಲ್ಲಿರಬೇಕಾದ ಟ್ರಾಫಿಕ್ ಪೊಲೀಸರೇ ಈ ರೀತಿ ಸುಲಿಗೆಗಿಳಿದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸುಗಮ ಸಂಚಾರಕ್ಕೆ ಹಾದಿ ಮಾಡಿಕೊಡಬೇಕಾದ ಟ್ರಾಫಿಕ್ ಪೊಲೀಸರೇ ವಾಹನ ಸವಾರರನ್ನು ಸುಲಿಗೆ ಮಾಡಲು ನಿಂತಿದ್ದಾರೆ. ಪ್ರತಿ ವಾಹನವೂ ಇವರಿಗೆ ನೋಟಿನ ಕಂತೆಗಳಂತೆ ಕಾಣುತ್ತಿವೆಯೋ ಏನೋ, ಭ್ರಷ್ಟಾಚಾರದ ಈ ಜಾಲ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ಚಾಮರಾಜನಗರದವರೆಗೂ ವ್ಯಾಪಿಸಿದೆ.
ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಮಲ್ಲು ಎಂಬುವವರು ಸಾರ್ವಜನಿಕರೊಬ್ಬರ ಬೈಕ್ ರಿಲೀಸ್ ಮಾಡಲು ಲಂಚದ ಬೇಡಿಕೆ ಇಟ್ಟಿದ್ದರು. ನಿಯಮಾನುಸಾರ ಕೆಲಸ ಮಾಡಿಕೊಡುವ ಬದಲು, ಬೈಕ್ ಬಿಟ್ಟುಕೊಡಲು ಮೂರು ಸಾವಿರ ರೂಪಾಯಿ ನೀಡುವಂತೆ ಒತ್ತಾಯಿಸಿದ್ದರು.
ಹಣ ಪಡೆಯುವಾಗಲೇ ಲೋಕಾಯುಕ್ತ ದಾಳಿ
ವಾಹನ ಸವಾರನಿಂದ ಮೂರು ಸಾವಿರ ರೂಪಾಯಿ ಲಂಚದ ಹಣವನ್ನು ಪಡೆಯುತ್ತಿದ್ದಾಗಲೇ ಚಾಮರಾಜನಗರ ಲೋಕಾಯುಕ್ತ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಲಂಚದ ಹಣದ ಸಮೇತ ಮಲ್ಲು ಅವರನ್ನು ವಶಕ್ಕೆ ಪಡೆಯಲಾಗಿದ್ದು, ಭ್ರಷ್ಟ ಪೊಲೀಸಪ್ಪನ ಲಂಚಾವತಾರ ಬಯಲಾಗಿದೆ.
ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಸಮರ
ಚಾಮರಾಜನಗರ ಲೋಕಾಯುಕ್ತ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿ ಮಲ್ಲು ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ