
ಜಿ. ದೇವರಾಜು ನಾಯ್ಡು
ಚಾಮರಾಜನಗರ: ಆ.15ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಶೂಟೌಟ್ ಪ್ರಕರಣ ಹೊಸ ಸ್ವರೂಪ ಪಡೆದಿದೆ. ಗುಂಡಿನ ದಾಳಿ ತರುವಾಯ ಕಿಡಿಗೇಡಿಗಳು ಜಿಲೆಟಿನ್ ಕಡ್ಡಿ, ಡೈನಮೈಟ್ ಬಳಸಿ ಅರಣ್ಯ ಇಲಾಖೆ ಕಚೇರಿಗಳು, ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ದಾಳಿ ನಡೆಸಿದ್ದ ಘಟನೆಯನ್ನು ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಮತ್ತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸುವ ಸಾಧ್ಯತೆ ಹೆಚ್ಚಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸ್ಫೋಟಕ್ಕೆ ಜಿಲೆಟಿನ್ ಕಡ್ಡಿ ಹೇಗೆ ಬಂತು, ಯಾರು ಈ ಕೃತ್ಯದ ಹಿಂದಿದ್ದಾರೆಂಬ ಮಾಹಿತಿ ಕುರಿತು ಕೇಂದ್ರ ತನಿಖಾ ಪಡೆ ಈಗಾಗಲೇ ಹಲವು ಮಾಹಿತಿಯನ್ನು ಕಲೆ ಹಾಕಿದೆ ಎಂದು ಮೂಲಗಳು ತಿಳಿಸಿವೆ.
ಆ.15ರ ಗುಂಡಿನ ದಾಳಿ ಬಳಿಕ ಹನೂರು ತಾಲೂಕಿನ ಶಾಗ್ಯ ಅರಣ್ಯ ವ್ಯಾಪ್ತಿಯ ಹಲವು ಶಿಬಿರಗಳ ಮೇಲೆ ಕಿಡಿಗೇಡಿಗಳು ಜಿಲೆಟಿನ್ ಕಡ್ಡಿ, ಡೈನಮೈಟ್ ಇಟ್ಟು ಸ್ಫೋಟಗೊಳಿಸಿದ್ದರು. ಜೊತೆಗೆ ವನ್ಯಮೃಗಗಳು ಕಾಡು ತೊರೆದು, ನಾಡಿನತ್ತ ಬರುವುದನ್ನು ತಪ್ಪಿಸಲು ಅರಣ್ಯ ಇಲಾಖೆ ನಿರ್ಮಿಸಿದ್ದ ಸೋಲಾರ್ ಬೇಲಿ, ಕಂಬಗಳು, ಗೇಟ್‌ಗಳನ್ನು ಹಾಳುಗೆಡವಿದ್ದರು. ಈ ಮೂಲಕ ಅನಿವಾರ್ಯವಾಗಿ ಗ್ರಾಮಗಳಿಗೆ ಬರುವ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಶಂಕೆಯನ್ನು ಅರಣ್ಯ ಇಲಾಖೆ ಮೂಲಗಳು ಕಳವಳ ವ್ಯಕ್ತಪಡಿಸಿತ್ತು.
ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳು ನಿಷ್ಕ್ರಿಯಗೊಂಡ ಬಳಿಕ ರಾಜ್ಯ ಸರ್ಕಾರವು ನಕ್ಸಲ್ ನಿಗ್ರಹ ಪಡೆಯನ್ನು ನಿಷ್ಕ್ರಿಯಗೊಳಿಸಿತ್ತು. ಈಗ ಹನೂರು ಘಟನೆ ಹಿಂದೆ ನಕ್ಸಲ್ ಪರ ಒಲವುಳ್ಳ ಹಲವು ಸಂಘಟನೆಗಳ ಪಾತ್ರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಎನ್‌ಎಫ್ ಪಡೆಯನ್ನು ಮತ್ತೆ ಸಕ್ರಿಯಗೊಳಿಸಿ ತನಿಖೆ ಹೊಣೆ ಹೊರಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಸ್ಫೋಟಕ್ಕೆ ಜಿಲೆಟಿನ್ ಕಡ್ಡಿಗಳು ಹೇಗೆ ಸಿಕ್ಕವು, ಕ್ಯಾಂಪ್‌ಗೆ ತಂದು ಧ್ವಂಸಗೊಳಿಸಿದ್ದು ಯಾರು ಎಂಬುದರ ಕುರಿತು ಇಂಚಿಂಚೂ ಮಾಹಿತಿ ಕಲೆ ಹಾಕಲು ಸಿಐಡಿ ಬಳಿಕ ಎಎನ್‌ಎಫ್ ಕಾರ್ಯಪ್ರವೃತ್ತವಾಗಲಿದೆ. ಅರಣ್ಯ ಪ್ರದೇಶವು ಕೇಂದ್ರದ ಅಧೀನಕ್ಕೂ ಒಳಪಟ್ಟಿರುವ ಕಾರಣ ಸಿಐಡಿ ತನಿಖೆ ಬಳಿಕ ಎನ್‌ಐಎ ತನ್ನ ತೆಕ್ಕೆಗೆ ತೆಗೆದುಕೊಂಡು ರಾಷ್ಟ್ರ ವಿರೋಧಿ ಕೃತ್ಯಗಳು ಇದರಲ್ಲಿ ಅಡಗಿವೆಯೇ ಎಂಬುದನ್ನು ತನಿಖೆ ನಡೆಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಮಧ್ಯೆ ತನಿಖೆಯ ಹೊಣೆ ಹೊತ್ತಿರುವ ಸಿಐಡಿ, ವಿವಿಧ ಆಯಾಮಗಳಲ್ಲಿ ಪ್ರಕರಣದ ಮಾಹಿತಿ ಅರಸುತ್ತಿದೆ. ಒಟ್ಟು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿ ಸಿಐಡಿ ಅಧಿಕಾರಿಗಳು ಅಖಾಡದಲ್ಲಿದ್ದಾರೆ. ಮೃತರ ಮನೆಗಳಿಗೆ ತೆರಳಿ ವಿಚಾರಣೆ, ಆ.15ರಂದು ಗುಂಡಿನ ಚಕಮಕಿಯಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ಮಹಿಮಾದಾಸ್‌ನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವಾರದಲ್ಲಿ ಸಿಐಡಿ ತನಿಖೆ ಮುಕ್ತಾಯಗೊಳ್ಳಬಹುದು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ