
ಬೆಂಗಳೂರು: ಪ್ರಸಕ್ತ ಸಾಲಿನ ಸಿಇಟಿ ಫಲಿತಾಂಶದಲ್ಲಿ ಸರ್ಕಾರಿ ಪಿಯು ಕಾಲೇಜು ಹಾಗೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಸಾಧನೆ ಬಹಳ ಕಳಪೆಯಾಗಿರುವುದು ಕಂಡು ಬಂದಿದೆ.
ಈ ವರ್ಷ ಸರ್ಕಾರಿ ಕಾಲೇಜುಗಳಿಂದ ಒಟ್ಟು 7,620 ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರು. ಈ ಪೈಕಿ ಎಂಜಿನಿಯರಿಂಗ್ ವಿಭಾಗದಲ್ಲಿ ಟಾಪ್ 1000 ರ್‍ಯಾಂಕ್‌ನೊಳಗೆ ಕೇವಲ 12 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಅದರಲ್ಲಿ ಬೆಂಗಳೂರು ನಗರದ 5, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಿಂದ ತಲಾ 2 ಮತ್ತು ಚಿತ್ರದುರ್ಗ, ಕಲಬುರಗಿ ಮತ್ತು ಮೈಸೂರಿನಿಂದ ತಲಾ ಒಬ್ಬರು ಸೇರಿದ್ದಾರೆ. ಇನ್ನು, 5000 ರ್‍ಯಾಂಕ್‌ನೊಳಗೆ ಸರ್ಕಾರಿ ಕಾಲೇಜುಗಳ 53, ಅಗ್ರ 10 ಸಾವಿರ ರ‍್ಯಾಂಕ್‌ಗಳಲ್ಲಿ 108 ವಿದ್ಯಾರ್ಥಿಗಳು ಮಾತ್ರ ಇದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಂಕಿ-ಅಂಶಗಳನ್ನು ನೀಡಿದೆ.
ಅದೇ ರೀತಿ, ಕನ್ನಡ ಮಾಧ್ಯಮದ ಸಾಧನೆ ಇನ್ನೂ ಕಳಪೆಯಾಗಿದ್ದು, ಟಾಪ್ 1000 ರ‍್ಯಾಂಕ್‌ಗಳಲ್ಲಿ ಕೇವಲ ಒಂಬತ್ತು ವಿದ್ಯಾರ್ಥಿಗಳು, ಟಾಪ್ 5000ದಲ್ಲಿ 75 ವಿದ್ಯಾರ್ಥಿಗಳು ಮತ್ತು ಟಾಪ್ 10,000ರಲ್ಲಿ 226 ವಿದ್ಯಾರ್ಥಿಗಳು ಮಾತ್ರ ಸ್ಥಾನ ಪಡೆದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಯೂ ತೃಪ್ತಿಕರವಾಗಿಲ್ಲ. ಟಾಪ್ 1000 ರ‍್ಯಾಂಕ್‌ಗಳಲ್ಲಿ ಕೇವಲ 79 ವಿದ್ಯಾರ್ಥಿಗಳು, 5000 ರ್‍ಯಾಂಕ್‌ನಲ್ಲಿ 499 ವಿದ್ಯಾರ್ಥಿಗಳು ಮತ್ತು 10000 ರ್‍ಯಾಂಕ್‌ನಲ್ಲಿ 1292 ವಿದ್ಯಾರ್ಥಿಗಳು ಮಾತ್ರ ಇದ್ದಾರೆ ಎಂದು ಪ್ರಾಧಿಕಾರ ತಿಳಿಸಿದೆ.
ಜನಿವಾರ ಮತ್ತು ಹಿಜಾಬ್ ತೆಗೆಯುವಂತೆ ಒತ್ತಾಯಿಸಿದ ಪ್ರಕರಣಗಳಲ್ಲಿ ಕೆಲ ವಿಷಯಗಳ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಉಳಿದ ವಿಷಯಗಳಲ್ಲಿ ಪಡೆದ ಅಂಕಗಳ ಸರಾಸರಿ ಅಂಕ ಲೆಕ್ಕ ಹಾಕಿ ನೀಡಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಎರಡು ಪ್ರಕರಣಗಳಲ್ಲಿ ಸಮಸ್ಯೆಯಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಮತ್ತು ಸರಾಸರಿ ಅಂಕ ಯಾವುದಾದರೂ ಒಂದು ಆಯ್ಕೆಗೆ ಅವಕಾಶ ನೀಡಲಾಗಿತ್ತು. ಅವರು ಸರಾಸರಿ ಅಂಕ ನೀಡುವ ಆಯ್ಕೆಗೆ ಲಿಖಿತ ಒಪ್ಪಿಗೆ ನೀಡಿದ್ದರು. ಅದರಂತೆ ಹಿಜಾಬ್ ತೆಗೆಯುವಂತೆ ಒತ್ತಾಯಿಸಿದ ಕಾರಣಕ್ಕೆ ಓರ್ವ ವಿದ್ಯಾರ್ಥಿನಿ ಮಾತ್ರ ಮೊದಲ ದಿನದ ಪರೀಕ್ಷೆಗೆ ಹಾಜರಾಗಿರಲಿಲ್ಲ. ಅವರು ಎರಡನೇ ದಿನದ ಪರೀಕ್ಷೆಗೆ ಹಾಜರಾಗಿದ್ದರು. ಹಾಗಾಗಿ ಹಾಜರಾದ ವಿಷಯಗಳಲ್ಲಿ ಪಡೆದ ಅಂಕಗಳ ಸರಾಸರಿ ಲೆಕ್ಕ ಹಾಕಿ ಹಾಜರಾಗದ ವಿಷಯಗಳಿಗೆ ಅಂಕ ನೀಡಲಾಗಿದೆ.
ಅದೇ ರೀತಿ ಜನಿವಾರ ತೆಗೆಯುವಂತೆ ಒತ್ತಾಯಿಸಿದ ಪ್ರಕರಣದಲ್ಲಿ ನಾಲ್ವರು ವಿದ್ಯಾರ್ಥಿಗಳು ಎಲ್ಲ ವಿಷಯಗಳಿಗೂ ಹಾಜರಾಗಿದ್ದರು. ಆದರೂ ಸರ್ಕಾರದ ನಿರ್ದೇಶನದಂತೆ ಅವರಿಗೆ ಸಮಸ್ಯೆಯಾದ ದಿನದ ವಿಷಯದಲ್ಲಿ ಮರು ಪರೀಕ್ಷೆಗೆ ಅವಕಾಶ ನೀಡುವುದಾಗಿ ತಿಳಿಸಲಾಗಿತ್ತು. ಆದರೆ, ಅವರು ಎಲ್ಲ ವಿಷಯಗಳಿಗೂ ಮರು ಪರೀಕ್ಷೆ ಕೋರಿದ್ದರು. ಇದಕ್ಕೆ ಸರ್ಕಾರ ಒಪ್ಪಲಿಲ್ಲ. ಅವರು ಎಲ್ಲ ಪರೀಕ್ಷೆಗಳಿಗೂ ಹಾಜರಾಗಿದ್ದರಿಂದ ಅದರ ಮೌಲ್ಯಮಾನದಲ್ಲಿ ಬಂದ ಅಂಕಗಳನ್ನೇ ಪರಿಗಣಿಸಲಾಗಿದೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ