ಸ್ವಕ್ಷೇತ್ರದ 20 ಗ್ರಾಪಂಗೆ ಇಂದು ಡಿಕೆ - ಸಿಎಂ ಕನಸು ನನಸು ಮಾಡಿದ ತವರಿಗೆ ಜನರಿಗೆ ಕೃತಜ್ಞತೆ ಸಲ್ಲಿಕೆ

Published : Jun 07, 2026, 07:00 AM IST
DK Shivakumar

ಸಾರಾಂಶ

ಮುಖ್ಯಮಂತ್ರಿಯಾದ ಬಳಿಕ ಡಿ.ಕೆ.ಶಿವಕುಮಾರ್ ಅವರು ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿ, 20 ಗ್ರಾಮ ಪಂಚಾಯತ್‌ಗಳ ಜನರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಸಾರ್ವಜನಿಕರಿಗೆ ಆಗುವ ಅನಾನುಕೂಲ ತಪ್ಪಿಸಲು, ಅವರು ತಮ್ಮ ಪ್ರವಾಸದ ಭಾಗವಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದಾರೆ.

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10ಗಂಟೆಗೆ ಕನಕಪುರಕ್ಕೆ ಆಗಮಿಸುವ ಸಿಎಂ ಬಳಿಕ, ಕ್ಷೇತ್ರವ್ಯಾಪ್ತಿಯ 20 ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ, ಸಿಎಂ ಆಗುವ ತಮ್ಮ ಕನಸನ್ನು ನನಸಾಗಿಸಲು ಹರಸಿದ ತವರೂರಿನ ಜನತೆಗೆ ಕೃತಜ್ಞತೆ ಅರ್ಪಿಸಲಿದ್ದಾರೆ.

ಬೆಳಗ್ಗೆ 10ರಿಂದ ರಾತ್ರಿ10ರವರೆಗೆ ಭಾನುವಾರ ಇಡೀ ದಿನ ಕನಕಪುರ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಳ್ಳಲಿದ್ದು, ಪ್ರತಿ ಗ್ರಾ.ಪಂ.ಗೂ 30 ನಿಮಿಷಗಳ ಭೇಟಿಗೆ ಸಮಯ ನಿಗದಿಪಡಿಸಿದ್ದಾರೆ.

ಸಿಎಂ ಆದ ಬಳಿಕ ಮೊದಲ ಸಲ ತವರಿಗೆ ಆಗಮಿಸುತ್ತಿರುವ ನಾಯಕನ ಅದ್ದೂರಿಯಾಗಿ ಸ್ವಾಗತಿಸಲು ಪಕ್ಷದ ಕಾರ್ಯಕರ್ತರು, ಮುಖಂಡರು ಭರದ ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲೆಡೆ ಸಿಎಂಗೆ ಶುಭಾಶಯ ಕೋರುವ ಬ್ಯಾನರ್‌ ರಾರಾಜಿಸುತ್ತಿವೆ. ಭೇಟಿ ವೇಳೆ ಎಲ್ಲೆಡೆ ಸಾರ್ವಜನಿಕರಿಗೆ ಸಿಹಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ತುಂಗಣಿ ಗ್ರಾಮದಿಂದ ಸಿಎಂ ಪ್ರವಾಸ

ಬೆಳಗ್ಗೆ 10 ಗಂಟೆಗೆ ಕಸಬಾ ಹೋಬಳಿಯ ತುಂಗಣಿ ಗ್ರಾಮದಿಂದ ಸಿಎಂ ತಮ್ಮ ಪ್ರವಾಸ ಆರಂಭಿಸಲಿದ್ದಾರೆ. 0.30ಕ್ಕೆ ತಮ್ಮ ಮನೆ ದೇವತೆ ಕೆಂಕೇರಮ್ಮ ತಾಯಿಗೆ ಪೂಜೆ ಸಲ್ಲಿಸಿ, ನಂತರ, ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ, ಹುಟ್ಟೂರು ದೊಡ್ಡಾಲಹಳ್ಳಿ ಗ್ರಾಮಕ್ಕೆ ಆಗಮಿಸಿ, ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.

ಅಲ್ಲಿಂದ ಪ್ರವಾಸ ನಗರದ ಎಂ.ಜಿ.ರಸ್ತೆ, ಟಿ.ಬೇಕುಪ್ಪೆ ವೃತ್ತ, ನಾರಾಯಣಪುರ ಗ್ರಾಮದ ಮೂಲಕ ಕೋಡಿಹಳ್ಳಿಗೆ ಭೇಟಿ ನೀಡಲಿದ್ದಾರೆ. ಡಿಕೆಶಿಯವರಿಗೆ ಪ್ರತಿ ಚುನಾವಣೆಯಲ್ಲಿ ಶಕ್ತಿ ತುಂಬುವ ಹಾಗೂ ಅವರ ಅಚ್ಚುಮೆಚ್ಚಿನ ಗ್ರಾಮವಾದ ಕೋಡಿಹಳ್ಳಿ ಗ್ರಾಮದ ವೃತ್ತದಲ್ಲಿ ಈಗಾಗಲೇ ಹತ್ತಾರು ಅಡಿ ಎತ್ತರದ ಕಟೌಟ್‌ಗಳನ್ನು ನಿಲ್ಲಿಸಿ, ಊರಿನ ತುಂಬಾ ಸ್ವಾಗತದ ಬ್ಯಾನರ್ ಹಾಕಲಾಗಿದೆ. ಡಿಕೆಶಿ, ಇಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿಯೇ ಪಕ್ಷದ ಮುಖಂಡರೊಬ್ಬರ ಮನೆಯಲ್ಲಿ ಭೋಜನ ಸೇವಿಸಿ, ಸ್ವಲ್ಪ ಕಾಲ ವಿಶ್ರಾಂತಿ ಪಡೆದು, ನಂತರ, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರ ತವರೂರು ಹೂಕುಂದ ಗ್ರಾಮಕ್ಕೆ ತೆರಳಲಿದ್ದಾರೆ. ಬಳಿಕ, ರಾತ್ರಿ 9ರ ವೇಳೆಗೆ ಕನಕಪುರದ ಮೇಗಳಬೀದಿಗೆ ಆಗಮಿಸಿ, ಚನ್ನಬಸಪ್ಪ ವೃತ್ತದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.

ಮೆಟ್ರೋ ಪ್ರಯಾಣ

ಝೀರೋ ಟ್ರಾಫಿಕ್‌ನಿಂದ ಸಾರ್ವಜನಿಕರಿಗೆ ಆಗುವ ಕಿರಿಕಿರಿ ತಪ್ಪಿಸುವ ಸಲುವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಭಾನುವಾರ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಲಿದ್ದಾರೆ. ಭಾನುವಾರ ಬೆಳಗ್ಗೆ 9 ಗಂಟೆಗೆ ವಿಧಾನಸೌಧದ ಎದುರಿನ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಲಿರುವ ಸಿಎಂ, ಅಲ್ಲಿಂದ ಕನಕಪುರ ರಸ್ತೆಯ ಕೊನೆಯ ಸ್ಟೇಷನ್‌ವರೆಗೂ ಪ್ರಯಾಣ ಕೈಗೊಳ್ಳಲಿದ್ದಾರೆ. ಅಲ್ಲಿಂದ ಮುಂದೆ ಕಾರಿನಲ್ಲಿ ಅವರಯ ಕೃತಜ್ಞತೆ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸ್ವಕ್ಷೇತ್ರ ಕನಕಪುರಕ್ಕೆ ಕಾರಿನಲ್ಲಿ ತೆರಳಲಿದ್ದಾರೆ.

ಸದಾಶಿವನಗರ ನಿವಾಸದಿಂದ ಕನಕಪುರ ರಸ್ತೆಯವರೆಗೂ ಝೀರೋ ಟ್ರಾಫಿಕ್‌ನಲ್ಲಿ ಕಾರಿನಲ್ಲಿ ತೆರಳುವುದರಿಂದ ಸಾರ್ವಜನಿಕರಿಗೆ ಆಗುವ ಅನಾನುಕೂಲ ತಪ್ಪಿಸುವ ಸಲುವಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Monsoon: ರಾಜ್ಯದ 11 ಜಿಲ್ಲೆಯಲ್ಲಿ ಮುಂಗಾರು ಅಬ್ಬರದ ಮಳೆ; ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಪ್ರಧಾನಿ ಮೋದಿ ಭೇಟಿ ವೇಳೆ ಜಿಲೆಟಿನ್ ಕಡ್ಡಿಪತ್ತೆ: ಆರೋಪಿ ಲೋಹಿತ್‌ಗೆ ಮಂಪರು ಪರೀಕ್ಷೆ