ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳಿಂದ ವಿಚಾರಣೆ, ರಾಜ್ಯ ಅಧಿಕಾರಿಗಳೂ ಸಾಥ್, ಮೊಬೈಲ್‌ನಿಂದ ಅಳಿಸಿದ ದಾಖಲೆ ಮರುಪಡೆಯಲು ಪ್ರಯತ್ನ
ಶಿವಮೊಗ್ಗ(ಸೆ.23): ಶಿವಮೊಗ್ಗದಲ್ಲಿ ಶಂಕಿತ ಉಗ್ರರಿಬ್ಬರ ಬಂಧನ ಪ್ರಕರಣದ ತನಿಖೆ ಮತ್ತಷ್ಟು ವೇಗ ಪಡೆದುಕೊಂಡಿದೆ. ಕೇಂದ್ರ ಮತ್ತು ರಾಜ್ಯದ ಗುಪ್ತಚರ ಇಲಾಖೆ ಅಧಿಕಾರಿಗಳು ಶಿವಮೊಗ್ಗಕ್ಕೆ ಆಗಮಿಸಿ ಆರೋಪಿಗಳ ವಿಚಾರಣೆಗೆ ಕೈಜೋಡಿಸಿದ್ದಾರೆ. ಬಂಧಿತರಿಂದ ಅಗತ್ಯ ಮಾಹಿತಿಗಳನ್ನು ಕಲೆಹಾಕುವ ಪ್ರಯತ್ನ ನಡೆಸುತ್ತಿದ್ದಾರೆ.
ಸದ್ಯ ಪೊಲೀಸರ ಬಂಧನದಲ್ಲಿರುವ ಶಿವಮೊಗ್ಗದ ಸಯ್ಯದ್ ಯಾಸೀನ್ ಮತ್ತು ಮಂಗಳೂರಿನ ಮಾಜ್ ಮುನೀರ್ ಅಹಮದ್‌ನ ವಿಚಾರಣೆ ವೇಳೆ ಪೊಲೀಸರಿಗೆ ಮಹತ್ವದ ಮಾಹಿತಿಗಳು ದೊರೆತಿವೆ ಎನ್ನಲಾಗಿದೆ. ಇದರ ಆಧಾರದ ಮೇಲೆ ಮತ್ತಷ್ಟು ಮಂದಿಯನ್ನು ಬಂಧಿಸುವ ನಿಟ್ಟಿನಲ್ಲಿ ತನಿಖಾಧಿಕಾರಿಗಳು ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ.
Suspected Terrorists: ಶಂಕಿತ ಉಗ್ರ ಶಾರೀಕ್‌ಗಾಗಿ ತೀವ್ರ ಶೋಧ
ಕೇಂದ್ರ ಮತ್ತು ರಾಜ್ಯದ ಗುಪ್ತಚರ ಇಲಾಖೆ ಅಧಿಕಾರಿಗಳು ಯಾಸೀನ್ ಮತ್ತು ಮಾಜ್‌ನನ್ನು ಸತತ ವಿಚಾರಣೆ ನಡೆಸುತ್ತಿದ್ದಾರೆ. ಸ್ಫೋಟಕಗಳು ಹೇಗೆ ಸಿಕ್ಕವು, ಹಣಕಾಸು ನೆರವು, ಯಾರೆಲ್ಲ ಭಾಗಿಯಾಗಿದ್ದರು, ಏನೇನು ಫ್ಲ್ಯಾನ್‌ಗಳಿದ್ದವು ಎಂಬ ವಿಚಾರವಾಗಿ ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ.
ಮೊಬೈಲ್ ಡಾಟಾ ಸಂಗ್ರಹಿಸಲು ಯತ್ನ:
ಶಂಕಿತ ಉಗ್ರರ ಬಂಧನ ಬಳಿಕ ಪೊಲೀಸರು ವಿವಿಧೆಡೆ ಕಾರ್ಯಾಚರಣೆ ನಡೆಸಿ ಕೃತ್ಯಕ್ಕೆ ಬಳಸುತ್ತಿದ್ದ ಸಾಮಗ್ರಿಗಳು, ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಫೋಟಕದ ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಸ್ಥಳವಾದ ತುಂಗಾ ತೀರದಲ್ಲಿ ಮಂಗಳವಾರ ಸ್ಥಳ ಮಹಜರು ವೇಳೆ ಮೊಬೈಲ್‌ವೊಂದು ಸಿಕ್ಕಿದ್ದು, ಇದರಲ್ಲಿ ಅನೇಕ ದಾಖಲೆಗಳನ್ನು ಡಿಲೀಟ್ ಮಾಡಲಾಗಿದೆ. ಡಿಲೀಟ್ ಆದ ದಾಖಲೆಗಳನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಮಂಗಳೂರಿನಿಂದ ಸೈಬರ್ ತಜ್ಞರ ತಂಡ ಆಗಮಿಸಿದೆ.
ಶಂಕಿತ ಉಗ್ರರ ವಿಚಾರಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆಯೊಳಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ದೂರು ನೀಡಲು ಬರುವವರು, ವಿವಿಧ ಪ್ರಕರಣಗಳ ಕುರಿತು ಮಾಹಿತಿ ಕೇಳಿಕೊಂಡು ಬರುವವರನ್ನು ಠಾಣೆ ಹೊರಗೆ ನಿಲ್ಲಿಸಿ, ಪೊಲೀಸರು ಮಾಹಿತಿ ಪಡೆದು, ದೂರು ಸ್ವೀಕರಿಸಿ ಕಳುಹಿಸುತ್ತಿದ್ದಾರೆ. ಒಬ್ಬ ಪಿಎಸ್‌ಐ ಮತ್ತು ಸಿಬ್ಬಂದಿ ಠಾಣೆಯಿಂದ ಹೊರಗೆ ನಿಂತು ಜನರನ್ನು ಮಾತನಾಡಿಸಿ ಕಳುಹಿಸುತ್ತಿದ್ದಾರೆ.