ಕೊರೋನಾ ತುರ್ತು ಸ್ಥಿತಿ : ಹೆಚ್ಚಿದ ನೆರವು

Kannadaprabha News   | Asianet News
Published : Apr 25, 2021, 09:22 AM ISTUpdated : Apr 25, 2021, 09:33 AM IST
ಕೊರೋನಾ ತುರ್ತು ಸ್ಥಿತಿ :   ಹೆಚ್ಚಿದ ನೆರವು

ಸಾರಾಂಶ

ಕೇಂದ್ರ ಸರ್ಕಾರ ರೆಮ್ಡೆಸಿವಿರ್ ಚುಚ್ಚುಮದ್ದಿನ ಮರುಹಂಚಿಕೆ ಮಾಡಿದ್ದು ಕರ್ನಾಟಕದ ಪಾಲು 50 ಸಾವಿರ ವೈಯಲ್ಸ್ ನಿಂದ 1.22 ಲಕ್ಷ ವೈಯಲ್ಸ್ ಗೆ ಏರಿಕೆಯಾಗಿದೆ. ಇದರಿಂದ ಕರ್ನಾಟಕಕ್ಕೆ ಹೆಚ್ಚಿನ ನೆರವು ಸಿಕ್ಕಂತಾಗಿದೆ. 

ನವದೆಹಲಿ (ಏ.24): ಕೇಂದ್ರ ಸರ್ಕಾರವು ಇಂದು ವಿವಿಧ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಕೊರೊನಾ ಚಿಕಿತ್ಸೆಯಲ್ಲಿ ಬಳಸಲಾಗುವ ರೆಮ್ಡೆಸಿವಿರ್ ಚುಚ್ಚುಮದ್ದಿನ ಮರುಹಂಚಿಕೆ ಮಾಡಿದ್ದು ಕರ್ನಾಟಕದ ಪಾಲು 50 ಸಾವಿರ ವೈಯಲ್ಸ್ ನಿಂದ 1.22 ಲಕ್ಷ ವೈಯಲ್ಸ್ ಗೆ ಏರಿಕೆಯಾಗಿದೆ.

ಇದು ಏಪ್ರಿಲ್ 30ರವರೆಗಿನ ಬಳಕೆಗಾಗಿ ರಾಜ್ಯಕ್ಕೆ ಹಂಚಿಕೆಯಾಗಿರುವ ರೆಮ್ಡೆಸಿವಿರ್ ಪ್ರಮಾಣ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರ ಖಾತೆಯಡಿಯೇ ಔಷಧ (ಫಾರ್ಮಾಸ್ಯುಟಿಕಲ್) ಇಲಾಖೆಯೂ ಕಾರ್ಯನಿರ್ವಹಿಸುತ್ತದೆ. ಇಂದು ಔಷಧ ಇಲಾಖೆಯ ಜಂಟಿ ಕಾರ್ಯದರ್ಶಿ ನವ್ದೀಪ್ ರಿನ್ವಾ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ರಾಜೀವ್ ವಾಧವಾನ್ ಅವರು ವಿವಿಧ ರಾಜ್ಯಗಳಿಗೆ ರೆಮ್ಡೆಸಿವಿರ್ ಮರುಹಂಚಿಕೆ ಮಾಡಿ  ಆದೇಶವೊಂದನ್ನು ಹೊರಡಿಸಿದರು.

ಈ ಬಗ್ಗೆ ಟ್ವೀಟೊಂದನ್ನು ಮಾಡಿರುವ ಸದಾನಂದ ಗೌಡರು “ವಿವಿಧ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಇಂದು ರೆಮ್ಡೆಸಿವಿರ್ ಮರುಹಂಚಿಕೆ ಮಾಡಿದ್ದೇವೆ. ಕರ್ನಾಟಕದ ಪಾಲು 1.22 ಲಕ್ಷ ವೈಯಲ್ಸ್ ಗೆ ಏರಿಕೆಯಾಗಿದೆ. ನಾನು ನಿರ್ವಹಿಸುವ ಔಷಧ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಉನ್ನತಾಧಿಕಾರದ ಸಮಿತಿಯು ಈ ನಿರ್ಣಯ ಕೈಗೊಂಡಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ನಾವು ಸಂಪೂರ್ಣ ಸಹಕಾರ, ನೆರವು ನೀಡುತ್ತೇವೆ” ಎಂದಿದ್ದಾರೆ.

'ಕೋವಿಡ್‌ ಕೇರ್‌ ಸೆಂಟರ್‌ನಲ್ಲೂ ಆಕ್ಸಿಜನ್‌ ಬೆಡ್‌ ವ್ಯವಸ್ಥೆ’

ಏಪ್ರಿಲ್ 21ರಂದು ಕೇಂದ್ರವು ಕರ್ನಾಟಕಕ್ಕೆ ಏಪ್ರಿಲ್ 30ರವರೆಗಿನ ಬಳಕೆಗಾಗಿ 25 ಸಾವಿರ  ರೆಮ್ಡೆಸಿವಿರ್ ವೈಯಲ್ಸ್ ಹಂಚಿಕೆ ಮಾಡಿತ್ತು. ಆದರೆ ರಾಜ್ಯವು ಹೆಚ್ಚುವರಿ ರೆಮ್ಡೆಸಿವಿರ್ ಪೂರೈಸುವಂತೆ ಕೇಳಿದ್ದರಿಂದ ಇಲಾಖಾ ಸಚಿವರಾದ ಸದಾನಂದ ಗೌಡರು ಮಧ್ಯಪ್ರವೇಶಿಸಬೇಕಾಗಿ ಬಂತು. ಹೀಗಾಗಿ ರಾಜ್ಯಕ್ಕೆ ಗುರುವಾರ ಹೆಚ್ಚುವರಿಯಾಗಿ 25 ಸಾವಿರ ವೈಯಲ್ಸ್ ಹಂಚಿಕೆಯಾಯಿತು. ಇಂದು ರಾಜ್ಯಕ್ಕೆ ಮತ್ತೆ ಸುಮಾರು 72 ಸಾವಿರ ವೈಯಲ್ಸ್ ಹೆಚ್ಚುವರಿಯಾಗಿ ಹಂಚಿಕೆಯಾಗಿದೆ.

ಕೇಂದ್ರದಿಂದ ರೆಮ್ಡೆಸಿವಿರ್ ಮರು ಹಂಚಿಕೆ ಆದೇಶ ಹೊರೆಬಿದ್ದ ನಂತರ ಟ್ವೀಟೊಂದನ್ನು ಮಾಡಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯಕ್ಕೆ ಈ ಚುಚ್ಚುಮದ್ದು ಪ್ರಮಾಣವನ್ನು ಹೆಚ್ಚಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ ಹಾಗೂ ಡಿ ವಿ ಸದಾನಂದ ಗೌಡರಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ.

ಈ ಮಧ್ಯೆ ಸಚಿವ ಸದಾನಂದ ಗೌಡ ಅವರು ಭಾನುವಾರ ಬೆಳಿಗ್ಗೆ 10 ಗಂಟೆಗೆ ವಿಧಾನ ಸೌಧದಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳೊಂದಿಗೆ ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಸಲಿದ್ದಾರೆ. ಆರೋಗ್ಯ ಸಚಿವ ಡಾ ಕೆ ಸುಧಾಕರ, ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ. 

ರೆಮ್ಡೆಸಿವಿರ್ ಪೆಟೆಂಟ್ ಹೊಂದಿರುವ ಅಮೆರಿಕದ ಗಿಲೀಡ್ ಸೈಯನ್ಸಸ್ ಫಾರ್ಮಾ ಕಂಪನಿಯಿಂದ ಭಾರತದ ಏಳು ಫಾರ್ಮಾ ಕಂಪನಿಗಳು ಈ ಚುಚ್ಚುಮದ್ದಿನ ಉತ್ಪಾದನೆಯ ಲೈಸನ್ಸ್ ಪಡೆದಿವೆ. ಅವುಗಳ ಇದುವರೆಗಿನ ಸ್ಥಾಪಿತ ಉತ್ಪಾದನಾ ಸಾಮರ್ಥ್ಯ ತಿಂಗಳಿಗೆ 38.8 ಲಕ್ಷ ವೈಯಲ್ಸ್ ಆಗಿತ್ತು. ಆದರೆ ಏಕಾಏಕಿ ಬೇಡಿಕೆ ಹೆಚ್ಚಾಗಿರುವದರಿಂದ ಇನ್ನೂ ಹೆಚ್ಚುವರಿಯಾಗಿ ಸುಮಾರು 50 ಲಕ್ಷ ವೈಯಲ್ಸ್ ಉತ್ಪಾದನೆಗೆ (ತಿಂಗಳಿಗೆ) ಅಗತ್ಯ ಅನುಮತಿ ನೀಡಲಾಗಿದೆ. ದಿನೇ ದಿನೇ ರೆಮ್ಡೆಸಿವಿರ್  ಉತ್ಪಾದನೆ ಹೆಚ್ಚುತ್ತಿದೆ.

ಏಪ್ರಿಲ್ 11ರಿಂದ ರೆಮ್ಡೆಸಿವಿರ್ ರಫ್ತು ನಿಷೇಧಿಸಲಾಗಿದ್ದು ಇದರಿಂದ ಹೆಚ್ಚುವರಿಯಾಗಿ ಲಭ್ಯವಾಗಿರುವ ಸುಮಾರು 4 ಲಕ್ಷ ವೈಯಲ್ಸ್ ರೆಮ್ಡೆಸಿವಿರ್ ನ್ನು ಸ್ವದೇಶಿ ಬಳಕೆಗೆ ಪೂರೈಸಲಾಗಿದೆ.  ಕಳೆದ ವಾರದಿಂದ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಫಾರ್ಮಾ ಕಂಪನಿಗಳು ತಮ್ಮ ರೆಮ್ಡೆಸಿವಿರ್ ಉತ್ಪಾದನೆಯಲ್ಲಿ ಶೇಕಡಾ 70ರಷ್ಟು ಕೇಂದ್ರ ಸರ್ಕಾರವು ಸೂಚಿಸುವ ರಾಜ್ಯಗಳಿಗೆ ನಿಗದಿತ ಪ್ರಮಾಣದಲ್ಲಿ ಪೂರೈಕೆ ಮಾಡಬೇಕಾಗುತ್ತದೆ. ಇನ್ನುಳಿದ ಶೇಕಡಾ 30ರಷ್ಟು ಉತ್ಪಾದನೆಯ ವಿತರಣೆಯನ್ನು ಕಂಪನಿಗಳ ವಿವೇಚನೆಗೆ ಬಿಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ