ಅಕ್ಟೋಬರ್‌ಗೆ ಬರಲಿದೆ ಮತ್ತೊಂದು ಅಲೆ: ಲಸಿಕೆ ಹಾಕಿಸದಿದ್ದರೆ 3ನೇ ಅಲೆ ಭೀಕರ!

By Kannadaprabha News  |  First Published Apr 25, 2021, 7:31 AM IST

ಲಸಿಕೆ ಹಾಕಿಸದಿದ್ದರೆ 3ನೇ ಅಲೆ ಭೀಕರ| ಅಕ್ಟೋಬರ್‌ಗೆ ಬರಲಿದೆ ಮತ್ತೊಂದು ಅಲೆ: ತಜ್ಞರು| ಲಸಿಕೆಯಿಂದ ಸಾವು- ನೋವು ತಡೆಯಲು ಸಾಧ್ಯ


 ಬೆಂಗಳೂರು(ಏ.25): ‘ರಾಜ್ಯದಲ್ಲಿ ಬರುವ ಅಕ್ಟೋಬರ್‌ ಅಥವಾ ನವೆಂಬರ್‌ ವೇಳೆಗೆ ಕೋವಿಡ್‌ ಮೂರನೇ ಅಲೆ ಆರಂಭವಾಗುವ ಸಾಧ್ಯತೆ ಇದೆ. ಈ ವೇಳೆ ಎರಡನೇ ಅಲೆಯಷ್ಟುಸೋಂಕು, ಸಾವು ನೋವುಗಳು ಉಂಟಾಗದಂತೆ ತಡೆಯಲು ಸಾಧ್ಯವಾದಷ್ಟೂಹೆಚ್ಚಿನ ಜನರಿಗೆ ಸಮರೋಪಾದಿಯಲ್ಲಿ ಲಸಿಕೆ ಹಾಕಬೇಕು’ ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

‘ಬರುವ ಮೇ ಅಂತ್ಯ ಅಥವಾ ಜೂನ್‌ ಮೊದಲ ವಾರದಲ್ಲಿ ಎರಡನೇ ಅಲೆ ಉತ್ತುಂಗಕ್ಕೆ ಏರುವ ಸಾಧ್ಯತೆ ಇದೆ. ಆ ನಂತರ ಕಡಿಮೆಯಾಗಬಹುದಾದರೂ ನಂತರ ಐದರಿಂದ ಒಂಬತ್ತು ತಿಂಗಳಲ್ಲಿ ಮೂರನೇ ಅಲೆ ಆರಂಭವಾಗಬಹುದು. ಆದರೆ, ಇದು ಜನರು ಎಷ್ಟುಕಟ್ಟುನಿಟ್ಟಾಗಿ ಕೋವಿಡ್‌ ನಿಯಮಗಳನ್ನು ಪಾಲಿಸುತ್ತಾರೆ ಅಥವಾ ಎಷ್ಟುಬೇಗ ನಿರ್ಲಕ್ಷಿಸಲು ಆರಂಭಿಸುತ್ತಾರೆ ಎಂಬುದರ ಮೇಲೆ ಮೂರನೇ ಅಲೆ ಕೆಲ ತಿಂಗಳು ಬೇಗ ಅಥವಾ ಕೆಲ ತಿಂಗಳು ತಡವಾಗಬಹುದು’ ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಗಿರಿಧರ ಬಾಬು ಹೇಳಿದ್ದಾರೆ.

Tap to resize

Latest Videos

ಡಾ| ಮಂಜುನಾಥ ಸಹಮತ:

ಸಮಿತಿಯ ಮತ್ತೊಬ್ಬ ಸದಸ್ಯರಾದ ಜಯದೇವ ಸಂಸ್ಥೆ ನಿರ್ದೇಶಕ ಡಾ.ಮಂಜುನಾಥ್‌ ಅವರು ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

‘ರಾಜ್ಯದಲ್ಲಿ ಮೊದಲ ಅಲೆಗೂ ಎರಡನೇ ಅಲೆಗೂ ಇರುವ ಅಂತರದ ಲೆಕ್ಕಾಚಾರವನ್ನು ಗಮನಿಸಿದಾಗ ಹಾಗೂ ಯೂರೋಪ್‌ ಸೇರಿದಂತೆ ಬೇರೆ ದೇಶಗಳಲ್ಲಿ ಒಂದು ಅಲೆಯಿಂದ ಮತ್ತೊಂದು ಅಲೆಗೆ ಇರುವ ಅಂತರವನ್ನು ಗಮನಿಸಿದಾಗ ಬರುವ ಅಕ್ಟೋಬರ್‌ ಅಥವಾ ನವೆಂಬರ್‌ ವೇಳೆಗೆ ರಾಜ್ಯದಲ್ಲಿ ಮೂರನೇ ಅಲೆ ಆರಂಭವಾಗಬಹುದು. ಆ ಮೂರನೇ ಅಲೆಯು ಎರಡನೇ ಅಲೆಯಷ್ಟುಭೀಕರವಾಗಿರದೆ ಹೆಚ್ಚಿನ ಸೋಂಕು ಮತ್ತು ಸಾವು ಪ್ರಕರಣಗಳಾಗದಂತೆ ತಡೆಯಲು ಇರುವ ಒಂದೇ ಮಾರ್ಗ ಆದಷ್ಟೂಹೆಚ್ಚಿನ ಜನರಿಗೆ ವ್ಯಾಕ್ಸಿನ್‌ ನೀಡಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

‘ಪ್ರಕರಣಗಳು ಕಡಿಮೆಯಾದಾಗ ಜನರು ನಿರಾಳರಾಗುವಂತಿಲ್ಲ. ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಬಾರದು. ಈಗಾಗಲೇ ಬೇರೆ ಬೇರೆ ದೇಶ, ರಾಜ್ಯಗಳಲ್ಲಿ ಬಂದಿರುವಂತೆ 3ನೇ ಅಲೆ ಬರುತ್ತದೆ. ಹಾಗಾಗಿ ಜನರು ಆದಷ್ಟುಬೇಗ ವ್ಯಾಕ್ಸಿನ್‌ ಪಡೆದುಕೊಳ್ಳಬೇಕು. ಇದರಿಂದ 3ನೇ ಅಲೆಯಲ್ಲಿ ಸಾಧ್ಯವಾದಷ್ಟೂಸೋಂಕು ತಗುಲುವುದನ್ನು ತಪ್ಪಿಸಿಕೊಳ್ಳಬಹುದು. ಒಂದು ವೇಳೆ ಕೆಲವರಿಗೆ ಸೋಂಕು ತಗುಲಿದರೂ ಇದರ ತೀವ್ರತೆ ಅಷ್ಟಾಗಿ ಇರುವುದಿಲ್ಲ. ಲಕ್ಷಣಗಳು ಕಂಡುಬಂದರೂ ಲಸಿಕೆ ಹಾಕಿಸಿಕೊಳ್ಳದೆ ಇದ್ದವರಿಗೆ ಆಗುವಷ್ಟುಆಯಾಸ, ಆರೋಗ್ಯ ಸಮಸ್ಯೆಗಳು ಆಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ವ್ಯಾಕ್ಸಿನ್‌ನಿಂದ ಬಹುತೇಕ ಸಾವಿನ ಪ್ರಮಾಣ ತಡೆಯಬಹುದು’ ಎಂದು ಡಾ.ಗಿರಿಧರ್‌ ಬಾಬು ಹೇಳಿದ್ದಾರೆ.

ಸೋಂಕು ತಗುಲದ ಬೇರೆ ಲಸಿಕೆ ಸಂಶೋಧನೆ:

‘ಇತ್ತೀಚೆಗೆ ಕೆಲ ಸಂಸ್ಥೆಗಳು ಸೋಂಕು ಕೂಡ ತಗುಲದಂತಹ ವ್ಯಾಕ್ಸಿನ್‌ ಸಂಶೋಧನೆಯಲ್ಲಿ ತೊಡಗಿವೆ. ಆ ನಂತರ ಲಸಿಕೆ ಪಡೆದವರಿಗೆ ಸೋಂಕು ಬರುವುದಿಲ್ಲ ಎಂದು ಹೇಳಬಹುದು. ಆದರೆ, ಪ್ರಸ್ತುತ ಜಗತ್ತಿನಲ್ಲಿ ಸಂಶೋಧಿಸಿರುವ ಯಾವುದೇ ಲಸಿಕೆ ಮತ್ತೆ ಸೋಂಕು ಬರದಂತೆ ಸಂಪೂರ್ಣವಾಗಿ ತಡೆಯುವುದಿಲ್ಲ. ಆದರೆ, ಕೋವಿಡ್‌ ವೈರಾಣು ಆರೋಗ್ಯದ ಮೇಲೆ ಅಷ್ಟುತೀವ್ರ ಪರಿಣಾಮ ಬೀರುವುದಿಲ್ಲ. ಇದರಿಂದ ಸೋಂಕಿತರ ಸಾವಿನ ಪ್ರಮಾಣ ಬಹುತೇಕ ತಡೆಯಬಹುದಾಗಿದೆ. ಹಾಗಾಗಿ ಸಾರ್ವಜನಿಕರು ನಿರ್ಲಕ್ಷ್ಯ ಮಾಡದೆ ಪ್ರತಿಯೊಬ್ಬರೂ ವ್ಯಾಕ್ಸಿನ್‌ ಪಡೆಯಬೇಕು. ಸರ್ಕಾರ ಆದಷ್ಟೂಬೇಗ ಎಲ್ಲಾ ವಯೋವೃದ್ಧರು, ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿರುವವರಿಗೆ ಲಸಿಕೆ ಹಾಕಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

click me!