ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯುಸೆಕ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶ ಖಂಡಿಸಿ ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿ ಸೇರಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ನಗರ, ಮದ್ದೂರು ತಾಲೂಕು ಬಂದ್ ಬಂದ್‌ಗೆ ಶನಿವಾರ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಮಂಡ್ಯ/ಮದ್ದೂರು (ಸೆ.24): ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯುಸೆಕ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶ ಖಂಡಿಸಿ ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿ ಸೇರಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ನಗರ, ಮದ್ದೂರು ತಾಲೂಕು ಬಂದ್ ಬಂದ್‌ಗೆ ಶನಿವಾರ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಪ್ರತಿಭಟನೆ, ರಸ್ತೆ ತಡೆಗಳ ಹೊರತಾಗಿಯೂ ಬಂದ್ ಸಂಪೂರ್ಣ ಶಾಂತಿಯುತವಾಗಿತ್ತು. ವರ್ತಕರು, ವ್ಯಾಪಾರಿಗಳು ಹಾಗೂ ವಾಣಿಜ್ಯೋದ್ಯಮಿಗಳು ಬಂದ್‌ಗೆ ಪೂರ್ಣ ಬೆಂಬಲ ಘೋಷಿಸಿದ್ದ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ವ್ಯಾಪಾರ ಬಹುತೇಕ ಸ್ಥಗಿತಗೊಂಡಿತ್ತು.
ಬಹುತೇಕ ಎಲ್ಲಾ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳೂ ಬೀದಿಗಿಳಿದು ಹೋರಾಟದಲ್ಲಿ ಪಾಲ್ಗೊಂಡರು. ಇನ್ನು ವಕೀಲರು ಕೂಡ ಕೋರ್ಟ್ ಕಲಾಪ ಬಹಿಷ್ಕರಿಸಿ ಮೆರವಣಿಗೆ ನಡೆಸಿ ಬಂದ್‌ಗೆ ಕೈಜೋಡಿಸಿದರು. ನಾಲ್ಕನೇ ಶನಿವಾರವಾಗಿದ್ದರಿಂದ ಸರ್ಕಾರಿ ಕಚೇರಿಗಳು, ಬ್ಯಾಂಕುಗಳಿಗೆ ರಜೆ ಇತ್ತು. ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಕೂಡ ಸಂಪೂರ್ಣ ಸ್ತಬ್ಧಗೊಂಡಿತ್ತು. ಇದರಿಂದ ರಸ್ತೆಯಲ್ಲಿ ಜನ ಸಂಚಾರ ವಿರಳವಾಗಿತ್ತು. ಜಿಲ್ಲಾ ಕೇಂದ್ರದಲ್ಲೇ ಬಂದ್ ಇದ್ದ ಹಿನ್ನೆಲೆಯಲ್ಲಿ ಮಂಡ್ಯದಿಂದ ದೂರದೂರಿಗೆ ಹೋಗಬೇಕಿದ್ದ ಪ್ರಯಾಣಿಕರು ಪರದಾಡಬೇಕಾಯಿತು.
ಕಾವೇರಿ ಹೋರಾಟ: ಮಂಗಳವಾರ ಬೆಂಗಳೂರು ಬಂದ್: ಶಾಲೆ ಕಾಲೇಜುಗಳಿಗೆ ರಜೆ
ಸ್ಟಾಲಿನ್ ಪ್ರತಿಕೃತಿ ದಹಿಸಿ ಆಕ್ರೋಶ: ತಮಿಳುನಾಡಿಗೆ ನೀರು ಬಿಡುವ ಸುಪ್ರೀಂ ಕೋರ್ಟ್, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮದ್ದೂರು ತಾಲೂಕಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಕೆಲ ರೈತರು ಕಬ್ಬಿನ ಕಂತೆಗಳನ್ನು ತಲೆ ಮೇಲಿಟ್ಟುಕೊಂಡು ಬಾಯಿ ಬಡಿದುಕೊಳ್ಳುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಇನ್ನು ಕೆಲ ಸಂಘಟನೆಗಳ ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಪ್ರತಿಭಟನಾಕಾರರು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪ್ರತಿಕೃತಿಗೆ ದಹಿಸಿದರು. ಇದೇ ವೇಳೆ ಸೋಮನಹಳ್ಳಿ ಸಮೀಪದ ಶಿಂಷಾ ಸೇತುವೆಯಲ್ಲಿ ಪ್ರತಿಭಟನಾಕಾರರು ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಧರಣಿ ಮಾಡಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.
ಬಿಗಿ ಬಂದೋಬಸ್ತ್: ಸಕ್ಕರೆ ನಾಡಲ್ಲಿ ಕಾವೇರಿ ಹೋರಾಟದ ಕಿಚ್ಚು ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ವಿವಿಧೆಡೆಯಿಂದ ಮಂಡ್ಯ ನಗರಕ್ಕೆ ಆಗಮಿಸುತ್ತಿದ್ದ ರೈತರನ್ನು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಹೊರವಲಯದಲ್ಲೇ ತಡೆದು ವಾಪಸ್ ಕಳುಹಿಸಿಸಲಾಯಿತು. ಪ್ರತಿಭಟನೆಯ ಕೇಂದ್ರ ಸ್ಥಳವಾದ ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರು. ಇದನ್ನು ಖಂಡಿಸಿ ಹೋರಾಟಗಾರರು ಪೊಲೀಸರ ಜತೆ ಕೆಲಕಾಲ ವಾಗ್ವಾದ ನಡೆಸಿದರು.
ನಡುಗಡ್ಡೆಯಲ್ಲಿ ಪ್ರತಿಭಟನೆ: ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ತಾಲೂಕು ಮಡಿವಾಳರ ಸಂಘದ ಮುಖಂಡರು ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ನಡುಗಡ್ಡೆಯಲ್ಲಿ ಕೂತು ಮಣಿಸರ ಹಿಡಿದು ಪ್ರತಿಭಟನೆ ನಡೆಸಿದರು. ಪಟ್ಟಣದ ಸ್ನಾನಘಟ್ಟದಲ್ಲಿ ನದಿ ಮಧ್ಯೆ ಸಂಘದ ಅಧ್ಯಕ್ಷ ಮರಳಗಾಲ ಮಂಜುನಾಥ ನೇತೃತ್ವದಲ್ಲಿ ರುದ್ರಾಕ್ಷಿ ಮಣಿ ಹಿಡಿದು ಜಪ ಮಾಡಿ ನೀರು ಉಳಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಕಾವೇರಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಜನತಾ ದಂಗೆ ಖಚಿತ: ಮಾಜಿ ಸಿಎಂ ಬೊಮ್ಮಾಯಿ
ಕರ್ತವ್ಯ ನಿರತ ಎಆರ್‌ಎಸ್‌ಐ ಅಸ್ವಸ್ಥ: ಮಂಡ್ಯ ಬಂದ್ ವೇಳೆ ಕರ್ತವ್ಯ ನಿರತ ಎಆರ್‌ಎಸ್‌ಐ (ಅಸಿಸ್ಟೆಂಟ್ ರಿಸರ್ವ್ ಸಬ್ ಇನ್ಸ್‌ಪೆಕ್ಟರ್)ವೊಬ್ಬರು ಬಿಸಿಲಿಂದ ಬಸವಳಿದು ಅಸ್ವಸ್ಥಗೊಂಡ ಘಟನೆ ನಡೆಯಿತು. ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದ ಬಳಿ ಕರ್ತವ್ಯದಲ್ಲಿದ್ದ ಆರ್‌ಎಸ್‌ಐ ಈಶ್ವರಪ್ಪ ಬಿಸಿಲ ತಾಪಕ್ಕೆ ಬಸವಳಿದು ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ಮಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.