'ಕರ್ನಾಟಕಕ್ಕೆ ನೀರಿಲ್ಲ, ನಮಗೆಲ್ಲಿಂದ ಕೊಡ್ತಾರೆ..' ಸೋಶಿಯಲ್‌ ಮೀಡಿಯಾದಲ್ಲಿ ಮತ್ತೆ ವೈರಲ್‌ ಆದ ನಟ ಸಿಂಬು ಹೇಳಿಕೆ!

By Santosh Naik  |  First Published Sep 26, 2023, 1:04 PM IST

ಕರ್ನಾಟಕದಲ್ಲಿ ಕಾವೇರಿ ವಿವಾದ ಜೋರಾಗಿದೆ. ಮಂಗಳವಾರದ ಬೆಂಗಳೂರು ಬಂದ್‌ಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ನಡುವೆ ಐದು ವರ್ಷದ ಹಿಂದೆ ತಮಿಳು ನಟ ಸಿಂಬು, ಕಾವೇರಿ ವಿಚಾರವಾಗಿ ಮಾತನಾಡಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
 


ಬೆಂಗಳೂರು (ಸೆ.26): ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿ ಪ್ರಾಧಿಕಾರದ ರಚನೆಯಾಗಿದ್ದರೂ, ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ಜಲ ವಿವಾದ ಇತ್ಯರ್ಥವಾಗುವ ಲಕ್ಷಣ ಕಾಣುತ್ತಿಲ್ಲ. ಮಳೆ ಬರಲಿ, ಬರದೇ ಇರಲಿ, ನಮಗೆ ಬೇಕಾದಷ್ಟು  ನೀರನ್ನು ಕರ್ನಾಟಕ ಬಿಡಲೇಬೇಕು ಎಂದು ಪಟ್ಟು ಹಿಡಿದಿದ್ದೇ ಈಗ ವಿವಾದಕ್ಕೆ ಕಾರಣವಾಗಿದೆ. ಅದರೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿಯೇ ಕರ್ನಾಟಕಕ್ಕೆ ಹಿನ್ನಡೆಯ ಮೇಲೆ ಹಿನ್ನಡೆ ಆಗುತ್ತಿದೆ. ನೀರಿನ ಅಭಾವದ ನಡುವೆಯೂ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಮಂಗಳವಾರ ದೊಡ್ಡ ಮಟ್ಟದಲ್ಲಿ ಕರ್ನಾಟಕ ಬಂದ್‌ ಮಾಡಲಾಗಿದೆ. ಈ ನಡುವೆ ಐದು ವರ್ಷದ ಹಿಂದೆ ಕಾವೇರಿ ವಿವಾದ ಉದ್ಭವಿಸಿದ್ದಾಗ ತಮಿಳುನಾಡು ನಟ ಸಿಲಂಬರಸನ್‌ ನೀಡಿದ್ದ ಹೇಳಿಕೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಕಾವೇರಿ ನಮ್ಮದು ಎನ್ನುವ ಹ್ಯಾಶ್‌ಟ್ಯಾಗ್‌ನಲ್ಲಿ ಈ ವಿಡಿಯೋವನ್ನು ವೈರಲ್‌ ಮಾಡಲಾಗುತ್ತಿದೆ. ಇನ್ನೊಂದೆಡೆ ಕನ್ನಡ ಚಿತ್ರರಂಗ ಕೂಡ ಕಾವೇರಿ ಪ್ರತಿಭಟನೆಗೆ ತನ್ನ ಬೆಂಬಲವನ್ನು ನೀಡಿದೆ.

2018ರಲ್ಲಿ ಮಾತನಾಡಿದ್ದ ಸಿಂಬು ಕರ್ನಾಟಕದಲ್ಲಿ ಕನ್ನಡಿಗರಿಗೆ ಕಾವೇರಿ ನೀರಿಲ್ಲ. ಇಂಥ ಸಮಯದಲ್ಲಿ ಅವರು ನಮಗೆಲ್ಲಿಂದ ಕೊಡ್ತಾರೆ ಎಂದು ಹೇಳಿದ್ದರು. ಅವರು ನೀಡಿದ್ದ ಹೇಳಿಕೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಮತ್ತೊಮ್ಮೆ ಕಾವೇರಿ ಕಿಚ್ಚು ಜೋರಾಗಿರುವ ನಡುವೆ ಸಿಂಬು ಅವರ ಈ ಮಾತುಗಳು ಮ್ತೆ ವೈರಲ್‌ ಆಗಿದೆ. 2018ರಲ್ಲಿಯೂ ಮಳೆ ಕಡಿಮೆಯಾಗಿ ತಮಿಳುನಾಡಿಗೆ ನೀರು ಬಿಡದೇ ಇರುವಂಥ ಸ್ಥಿತಿ ಇತ್ತು. ಎರಡೂ ರಾಜ್ಯಗಳು ನದಿ ನೀರಿಗಾಗಿ ಹಗ್ಗಜಗ್ಗಾಟ ಆರಂಭ ಮಾಡಿತ್ತು. ಈ ಹಂತದಲ್ಲಿ ತಮಿಳು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ಸಿಂಬು, ಕಾವೇರಿ ಹೋರಾಟ ನಡೆಯುತ್ತಿರುವುದು ಗೊತ್ತಿದೆ. ಆದರೆ ಕನ್ನಡಿಗರಿಗೆ ನೀರಿಲ್ಲ, ಇನ್ನು ನಮಗೆಲ್ಲಿಂದ ಕೊಡ್ತಾರೆ. ಈ ಪ್ರಪಂಚದಲ್ಲಿ ಪ್ರೀತಿಯಿಂದ ಮಾತ್ರ ಯಾವುದೇ ಒಂದು ವಿಷಯ ಗೆಲ್ಲೋದಿಕ್ಕೆ ಸಾಧ್ಯ. ಇದು ಗಾಂಧಿ ಹುಟ್ಟಿದ ಭೂಮಿ. ಅಹಿಂಸಾ ಮಾರ್ಗದ ಹೋರಾಟವೇ ಸರಿಯಾದ ಹೋರಾಟ' ಎಂದು ಹೇಳಿದ್ದರು.

ಇಲ್ಲಿ ನಾವು ಯಾರೊಂದಿಗೂ ಜಗಳ ಮಾಡಬಾರದು. ಕರ್ನಾಟಕದ ಜನ ನೀರು ಕೊಡೋದಿಲ್ಲ ಅಂತೇನಾದರೂ ಹೇಳಿದ್ದಾರೆಯೇ? ನಾನು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾತಾಡುತ್ತಿಲ್ಲ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿ ಎನ್ನುವ ಒತ್ತಾಯ ಮಾಡುವುದಕ್ಕೆ ನಾನಿಲ್ಲಿಗೆ ಬಂದಿಲ್ಲ. ಆ ಕೆಲಸ ಮಾಡೋದಕ್ಕೆ ಬಹಳಷ್ಟು ಜನ ಇದ್ದಾರೆ. ನಾನು ಹೆತ್ತ ಮಗ ಅಲ್ಲದೇ ಇದ್ರೂ, ಕರ್ನಾಟಕದಲ್ಲಿರುವಂತ ತಾಯಿಗೆ ಕೇಳ್ತಾ ಇದ್ದೀನಿ. ನೀವು ಕುಡಿದು ದಣಿವಾರಿಸಿಕೊಂಡ ಬಳಿಕ ಉಳಿದಿರುವ ನೀರನ್ನು ನಮಗೆ ಕೊಡ್ತೀರಾ ತಾಯಿ' ಎಂದಿದ್ದರು.

"ನೀವು ಬಳಸಿ ಉಳಿದ ನೀರನ್ನು ಮಾತ್ರ ನಮಗೆ ಕೊಡಿ. ನೀವು ಅಣೆಕಟ್ಟು ಕಟ್ಟಿ ನೀರನ್ನು ತಡೀಬಹುದು, ಆದರೆ ಅಣೆಕಟ್ಟು ಅಳತೆ ಮೀರಿ ನೀರು ಬಂತು ಅಂದರೆ ಅದನ್ನ ನೀವು ಹೇಗೆ ತಡೆಯಲು ಸಾಧ್ಯ. ಆ ನೀರನ್ನು ಬಿಡಲೇ ಬೇಕಾಗುತ್ತದೆ ಅಲ್ಲವೇ,  ಅಲ್ಲಿರುವ ಎಲ್ಲ ತಾಯಂದಿರೂ 'ಅಯ್ಯೋ, ನೀರು ಕೊಡೋದಿಕ್ಕಾಗ್ತಿಲ್ಲವಲ್ಲ ಅಂತ ನೊಂದು ಕಣ್ಣೀರು ಹಾಕಿದರು ಅಂದರೆ, ಆ ತಾಯಂದಿರ ಪ್ರೀತಿಯ ಅಣೆಕಟ್ಟು ಒಡೀತು ಅಂತ. ತಮಿಳುನಾಡಿನ ಜನರಿಗೆ ಆ ದೇವು ನೀರು ಕೊಟ್ಟೆ ಕೊಡ್ತಾನೆ, ಇದನ್ನು ಬೇಕಾದರೆ ನೀವು ನೋಡಿ' ಎಂದು ಸಿಂಬು ತಿಳಿಸಿದ್ದರು.

ಕಾವೇರಿಗಾಗಿ ಕನ್ನಡಿಗರ ಹೃದಯ ತಟ್ಟಿದ ತಮಿಳು ನಟ

"ಈ ಭೂಮಿ ಅಂತ ಅಂದರೆ ಅದು ಭಾರತ ಆಗಿರಬಹುದು, ಕರ್ನಾಟಕ ಆಗಿರಬಹುದು, ತಮಿಳುನಾಡು ಆಗಿರಬಹುದು ಮೊದಲಿಗೆ ನಾವು ಈ ಭೂಮಿ ಮೇಲೆ ಮನುಷ್ಯರಾಗಿ ಹುಟ್ಟಿದ್ದೀವಿ. ಈಗ ಒಬ್ಬ ಮನುಷ್ಯನಿಗೆ ಮತ್ತೊಬ್ಬ ಮನುಷ್ಯ ಸಹಾಯ ಮಾಡಬೇಕು. ಇನ್ನು ಎಷ್ಟು ದಿನ ಈ ಜಾತಿ, ಧರ್ಮ, ಪಂಗಡ ಅನ್ನೋ ಹೆಸರಿನಲ್ಲಿ ಬೇರೆ ಮಾಡ್ತಾ ಇರ್ತೀರಿ? ಯಾರೋ ಅಧಿಕಾರಕ್ಕೆ ಬರುವುದಕ್ಕೋಸ್ಕರ ನಮ್ಮನ್ನು ನಾನಾ ಕಾರಣಕ್ಕೆ ಹೀಗೆ ಒಡೆದು ಬೇರೇ ಬೇರೆ ಮಾಡಿ ಆಳುತ್ತಿದ್ದಾರೆ" ಎಂದು ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ವ್ಯಕ್ತಿಗಳ ಮೇಲೂ ಹರಿಹಾಯ್ದಿದ್ದರು. ಸಿಂಬು ಅವರ ಈ ಹೇಳಿಕೆ ಎಷ್ಟು ಜನಪ್ರಿಯರಾಗಿತ್ತೆಂದರೆ, ಕರ್ನಾಟಕದಲ್ಲಿ ಕನ್ನಡದ ನಟರುಗಳೇ ಕಾವೇರಿ ಬಗ್ಗೆ, ಕನ್ನಡಿಗೆ ಬಗ್ಗೆ ಇಷ್ಟು ಹೆಮ್ಮೆಯಿಂದ ಮಾತನಾಡಿರಲಿಲ್ಲ ಎಂದು ಹೇಳಿದ್ದರು.

Tap to resize

Latest Videos

undefined

ಕಾವೇರಿ ಹೋರಾಟಕ್ಕೆ ಟ್ವೀಟ್‌ನಲ್ಲೇ ಬೆಂಬಲಿಸಿದ ಕಿಚ್ಚ ಸುದೀಪ್: ಬೀದಿಗಿಳಿದು ಹೋರಾಡುವಂತೆ ನೆಟ್ಟಿಗರ ತಾಕೀತು!

 

click me!