ಕಾವೇರಿ, ಕೃಷ್ಣ, ಮಹದಾಯಿ ನ್ಯಾಯಾಧೀಕರಣ ವಕೀಲರಿಗೆ 122.75 ಕೋಟಿ ಶುಲ್ಕ ಪಾವತಿ

By Kannadaprabha NewsFirst Published Sep 26, 2023, 12:21 PM IST
Highlights

ಕಾವೇರಿ, ಕೃಷ್ಣ, ಮಹದಾಯಿ ನ್ಯಾಯಾಧೀಕರಣಗಳ ಒಟ್ಟು 41 ರಾಜ್ಯದ ವಕೀಲರಿಗೆ ರಾಜ್ಯ ಸರ್ಕಾರ ಕೋಟ್ಯಂತರ ಶುಲ್ಕ ಪಾವತಿಸುವ ಮೂಲಕ ರಾಜ್ಯದ ಅನ್ನದಾತರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ ಎಂದು ಆರೋಪಿಸಿದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ 

ಬೆಳಗಾವಿ(ಸೆ.26): ಕಾವೇರಿ ಮತ್ತು ಕೃಷ್ಣಾ ಹಾಗೂ ಮಹದಾಯಿ ನದಿಗಳ ವಿವಾದಗಳನ್ನು ಬಗೆಹರಿಸಲು ರಚನೆ ಮಾಡಲಾಗಿದ್ದ ಕಾವೇರಿ ಜಲವಿವಾದ ನ್ಯಾಯಾಧೀಕಣ, ಕೃಷ್ಣಾ ಜಲವಿವಾದ ನ್ಯಾಯಾಧೀಕಣ ಹಾಗೂ ಮಹದಾಯಿ ಜಲವಿವಾದ ನ್ಯಾಯಾಧೀಕಣಗಳ ವಿಚಾರಣೆ ಸಮಯದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಲು ಹಾಜರಾಗಿದ್ದ ವಕೀಲರಿಗೆ ರಾಜ್ಯ ಸರ್ಕಾರದ ಬೊಕ್ಕಸದಿಂದ ₹122.75 ಕೋಟಿ ಶುಲ್ಕ ಪಾವತಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾಹಿತಿ ಹಕ್ಕು ಕಾಯ್ದೆಯಡಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯಿಂದ ಈ ವಿಚಾರ ಬೆಳಕಿಗೆ ಬಂದಿದೆ ಎಂದಿದ್ದಾರೆ. ಕಾವೇರಿ ನ್ಯಾಯಾಧೀಕರಣ: ಕರ್ನಾಟಕ, ತಮಿಳನಾಡು, ಕೇರಳ ಮತ್ತು ಪಾಂಡೀಚೇರಿ ರಾಜ್ಯಗಳ ನಡುವೆ ಉದ್ಭವಿಸಿದ ಅಂತಾರಾಜ್ಯ ಜಲವಿವಾದದ ಇತ್ಯರ್ಥಕ್ಕಾಗಿ ಜೂ.2, 1990 ರಂದು ಕಾವೇರಿ ಜಲವಿವಾದ ನ್ಯಾಯಾಧೀಕರಣವನ್ನು ರಚಿಸಲಾಗಿದೆ. ಪ್ರಾರಂಭದಿಂದ ಜುಲೈ 10, 2017ರವರೆಗೆ ರವರೆಗೆ ಒಟ್ಟು 580 ಸಿಟಿಂಗ್‌ಗಳು ನಡೆದಿವೆ. ಈ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರ ಶುಲ್ಕಕ್ಕಾಗಿ ₹54,13,21282 ಪಾವತಿಸಲಾಗಿದೆ.

ಕಾವೇರಿ ಹೋರಾಟಕ್ಕೆ ಉತ್ತರ ಕರ್ನಾಟಕದವರಿಗೆ ಬೆಂಬಲ ಕೊಡಿ ಅಂತೀರಿ, ಕೃಷ್ಣೆಗೆ ಬಂದಾಗ ಯಾಕೆ ಮಲಗಿಕೊಳ್ತಿರಿ?: ಯತ್ನಾಳ್‌

ಕೃಷ್ಣಾ ನ್ಯಾಯಾಧೀಕರಣ:

ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳ ರಾಜ್ಯಗಳ ನಡುವೆ ಉದ್ಭವಿಸಿದ ಅಂತಾರಾಜ್ಯ ಜಲವಿವಾದದ ಇತ್ಯರ್ಥಕ್ಕಾಗಿ ಏ.2, 2004 ರಂದು ಕೃಷ್ಣಾ ಜಲವಿವಾದ ನ್ಯಾಯಾಧೀಕರಣವನ್ನು ರಚಿಸಲಾಗಿದೆ. ಪ್ರಾರಂಭದಿಂದ ನವೆಂಬರ್‌ 29, 2013 ರವರೆಗೆ ಒಟ್ಟು 295 ಸಿಟಿಂಗ್‌ ನಡೆದಿವೆ. ಈ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರುಗಳ ಶುಲ್ಕಕ್ಕಾಗಿ ₹43,24,29,000 ಪಾವತಿಸಲಾಗಿದೆ.

ಮಹದಾಯಿ ನ್ಯಾಯಾಧೀಕರಣ:

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಉದ್ಭವಿಸಿದ ಅಂತಾರಾಜ್ಯ ಜಲವಿವಾದದ ಇತ್ಯರ್ಥಕ್ಕಾಗಿ ನವೆಂಬರ್‌ 16, 2010 ರಂದು ಮಹದಾಯಿ ಜಲವಿವಾದ ನ್ಯಾಯಾಧೀಕರಣವನ್ನು ರಚಿಸಲಾಗಿದೆ. ಪ್ರಾರಂಭದಿಂದ ಡಿಸೆಂಬರ್‌ 1, 2017 ರವರೆಗೆ ಒಟ್ಟು 97 ಸಿಟಿಂಗ್‌ಗಳು ನಡೆದಿವೆ. ಈ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರುಗಳ ಶುಲ್ಕಕ್ಕಾಗಿ ₹ 25,38,35,600 ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾವೇರಿ, ಕೃಷ್ಣ, ಮಹದಾಯಿ ನ್ಯಾಯಾಧೀಕರಣಗಳ ಒಟ್ಟು 41 ರಾಜ್ಯದ ವಕೀಲರಿಗೆ ರಾಜ್ಯ ಸರ್ಕಾರ ಕೋಟ್ಯಂತರ ಶುಲ್ಕ ಪಾವತಿಸುವ ಮೂಲಕ ರಾಜ್ಯದ ಅನ್ನದಾತರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

click me!