Anti Conversion Bill: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಜ್ಞಾನೇಂದ್ರ ವಿರುದ್ಧ ದೂರು ದಾಖಲು

By Suvarna News  |  First Published Dec 26, 2021, 4:09 PM IST

* ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಜ್ಞಾನೇಂದ್ರ ವಿರುದ್ಧ ದೂರು ದಾಖಲು
* ರಾಯಚೂರು ಜಿಲ್ಲೆ ಲಿಂಗಸುಗೂರು ಪೊಲೀಸ್ ಠಾಣೆಗೆ ದೂರು
*  ಎಸ್ಸಿ ಮತ್ತು ಎಸ್ಟಿ ಜನಾಂಗದ ಹೆಸರು ಪ್ರಸ್ತಾಪಿಸಿ ಅವಮಾನ ಆರೋಪ


ರಾಯಚೂರು, (ಡಿ.26): ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲಾಗಿದೆ.

ಸಾಮಾಜಿಕ ಹೋರಾಟಗಾರ ಆರ್.ಮಾನಸಯ್ಯ ದೂರು ದಾಖಲಿಸಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Tap to resize

Latest Videos

Anti Conversion Bill: ಮತಾಂತರ ನಿಷೇಧ ಮಸೂದೆ ಜಾರಿಗೆ ಸುಗ್ರೀವಾಜ್ಞೆ: ಕೋಟ

ಮತಾಂತರ ತಿದ್ದುಪಡಿ ಬಿಲ್‌ ಮೇಲಿನ ಚರ್ಚೆ ಮಾಡುವ ವೇಳೆ, ಹಣದ ಆಮಿಷಕ್ಕೆ ಎಸ್ಟಿ, ಎಸ್‌ಸಿ ಯವರು ಮತಾಂತರವಾಗ್ತಿದ್ದಾರೆ ಎಂದು ಸದನದಲ್ಲಿ ಸ್ಪೀಕರ್, ಗೃಹ ಸಚಿವರು ನೀಡಿದ ಹೇಳಿಕೆ ವಿರುದ್ಧ ಸಾಮಾಜಿಕ ಹೋರಾಟಗಾರ ಆರ್.ಮಾನಸಯ್ಯ ದೂರು ದಾಖಲಿಸಿದ್ದಾರೆ.

ಕಾಯ್ದೆಯಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದ ಹೆಸರು ಪ್ರಸ್ತಾಪಿಸಿ ಅವಮಾನ ಮಾಡಿದ್ದಾರೆ. ಸ್ಪೀಕರ್ ಮತ್ತು ಗೃಹ ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆರ್.ಮಾನಸಯ್ಯ ದೂರು ನೀಡಿದ್ದಾರೆ.  ಆದ್ರೆ ದೂರಿನಲ್ಲಿ ನೀಡಿದ ಅಂಶಗಳು ಶಾಸಕಾಂಗ ಸಭೆಯಲ್ಲಿ ನಡೆದ ಕಾರ್ಯಕಲಾಪಗಳದ್ದು ದೂರು ನಮ್ಮ ಕಾರ್ಯವ್ಯಾಪ್ತಿಗೆ ಬರಲ್ಲವೆಂದು ಪೊಲೀಸರು ಹಿಂಬರಹ ನೀಡಿದ್ದಾರೆ. 

ಕಾಯಿದೆಯಲ್ಲಿರುವ ಪ್ರಮುಖಾಂಶಗಳು
* ಬಲವಂತ, ವಂಚನೆ,  ಒತ್ತಾಯ ಹಾಗೂ ಆಮಿಷದ ಮೂಲಕ ನಡೆಸುವ ಮತಾಂತರ ಹಾಗೂ  ಮದುವೆಯಾಗುವ ಭರವಸೆಯ  ಮೂಲಕ ನಡೆಸುವ ಮತಾಂತರಕ್ಕೆ ನಿಷೇಧವಿದೆ.‌

* ವ್ಯಕ್ತಿಯು ಆತನ ನಿಕಟಪೂರ್ವ ಧರ್ಮಕ್ಕೆ ಮರು ಮತಾಂತರಗೊಂಡರೆ ಅದನ್ನು ಈ ಅಧಿನಿಯಮದ ಅಡಿಯಲ್ಲಿ ಮತಾಂತರವೆಂದು ಪರಿಗಣಿಸಲಾಗುವುದಿಲ್ಲ.

* ಮತಾಂತರಗೊಂಡ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ, ಸಹವರ್ತಿ ಅಥವಾ ಸಹೋದ್ಯೋಗಿಗಳಿಗೂ ಮತಾಂತರದ ಬಗ್ಗೆ ದೂರನ್ನು ನೀಡಿದರೆ ಎಫ್ ಐಆರ್ ದಾಖಲಿಸುವ ಅವಕಾಶವಿದೆ.

* ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಐದು ವರ್ಷಗಳವರೆಗೆ  ಜೈಲು ಶಿಕ್ಷೆ ಹಾಗೂ ಇಪ್ಪತ್ತೈದು ಸಾವಿರ ರೂಪಾಯಿಗಳ ದಂಡ‌ ವಸೂಲಾತಿಗೆ ಅವಕಾಶವಿದೆ.

* ಅಪ್ರಾಪ್ತ ವ್ಯಕ್ತಿ, ಮಹಿಳೆ, ಎಸ್ ಸಿ, ಎಸ್ ಟಿ  ಸೇರಿದ ವ್ಯಕ್ತಿಯ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆಗೆ ಕಾಯ್ದೆಯಲ್ಲಿ ಅವಕಾಶವಿದೆ. ಅಷ್ಟೇ ಅಲ್ಲದೆ 50 ಸಾವಿರ ದಂಡ ವಸೂಲಿಗೂ ಅವಕಾಶವಿದೆ.

ಕೆ.ಹೆಚ್. ಮುನಿಯಪ್ಪ ಅಭಿಪ್ರಾಯ
ಕೋಲಾರ: ಮತಾಂತರ ನಿಷೇಧ ಕಾಯ್ದೆ ಜಾರಿ ಆರೋಗ್ಯಕರವಲ್ಲ. ಅದು ಮನುಷ್ಯನ ಸಂವಿಧಾನಬದ್ಧವಾದ ಹಕ್ಕು ಕಸಿದುಕೊಂಡಂತೆ. ಮೂಲಭೂತವಾದ ಹಕ್ಕಿಗೆ ಸ್ವಾತಂತ್ರ್ಯವಿಲ್ಲದಂತೆ ಆಗುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿಕೆ ನೀಡಿದ್ದಾರೆ. 

ಮನುಷ್ಯ ಹುಟ್ಟುವಾಗ, ಸಾಯುವಾಗ ಜಾತಿ‌ ಧರ್ಮ ಇರಲ್ಲ. ಇದರ ಮಧ್ಯೆ ಜ್ಞಾನವಂತರಾದ ಮೇಲೆ ತೀರ್ಮಾನಿಸುತ್ತಾರೆ. ಮನುಷ್ಯ ಸ್ವಾತಂತ್ರ್ಯನಾದ ಬಳಿಕ ತೆಗೆದುಕೊಳ್ಳುವಂತಹ ಹಕ್ಕು ಅದಾಗಿರುತ್ತದೆ. ಆದರೆ ಅಂತಹ ಹಕ್ಕನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳಬಾರದು. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಅವಶ್ಯಕತೆ ಇರಲಿಲ್ಲ ಎಂದು ಮುನಿಯಪ್ಪ ತಿಳಿಸಿದ್ದಾರೆ.

ಬಿಜೆಪಿಯವರು ಯಾವ ಕಾರಣಕ್ಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಸ್ವಇಚ್ಛೆಯಿಂದ ಮನುಷ್ಯ ಮತಾಂತರವಾಗುವುದು ಅವರ ಹಕ್ಕು. ಬಿಜೆಪಿ ಅಂತಹ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳುತ್ತಿದೆ. ಜನರು ಸ್ವಾತಂತ್ರ್ಯವಾಗಿ ಬಾಳಿ‌ ಬದುಕುವುದಕ್ಕೇ ಬಿಡುತ್ತಿಲ್ಲ. ದೇಶದ ಜನರು‌ ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಸಿಎಂ ಬೊಮ್ಮಾಯಿ ಹೇಳಿದ್ದೇನು?
ಮತಾಂತರ ನಿಷೇಧ ಕಾಯ್ದೆ ಜನಪರ ಹಾಗೂ ಸಂವಿಧಾನಬದ್ಧವಾದ ಕಾಯ್ದೆಯಾಗಿದೆ. ವಿಶೇಷವಾಗಿ ಎಸ್‍ಸಿ, ಎಸ್‍ಟಿ, ಬಡವರ ಪರವಾದ ಕಾಯ್ದೆಯಾಗಿದೆ. ಬರುವ ದಿನಗಳಲ್ಲಿ ಎಲ್ಲಾ ಜನಾಂಗಗಳ ರಕ್ಷಣೆ ಜೊತೆ ಅವರ ಸ್ವಾಭಿಮಾನವನ್ನು ಎತ್ತಿಹಿಡಿಯಲು ನೆರವಾಗುತ್ತದೆ. ಈ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಸರ್ಕಾರದ ಸ್ಪಷ್ಟ ನೀತಿಯಿದೆ. ಬಡತನ, ನಿರುದ್ಯೋಗ, ಶಿಕ್ಷಣದ ಕೊರತೆಯಿರುವ ಜನರಿಗೆ ಆಸೆ ಆಮಿಷಗಳನ್ನು ಒಡ್ಡುವ ಮೂಲಕ ಮತಾಂತರಕ್ಕೆ ಒತ್ತಾಯ ಮಾಡುತ್ತಿರುವುದಕ್ಕೆ ಸರ್ಕಾರದ ವಿರೋಧವಿದೆ ಎಂದಿದ್ದಾರೆ.

ಕಾಂಗ್ರೆಸ್‍ನ ದ್ವಿಮುಖ ನೀತಿ:
ಇಂದು ಮತಾಂತರ ನಿಷೇಧ ಕಾಯ್ದೆ ವಿಧಾನಮಂಡಲದಲ್ಲಿ ಸರ್ವಾನುಮತದಿಂದ ಪಾಸ್ ಮಾಡಲಾಗಿದೆ. ಇಂದಿನ ದಿನವನ್ನು ಕಾಯ್ದೆಯ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡಲಾಗಿತ್ತು. ವಿರೋಧ ಪಕ್ಷದವರು ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಮಾತನಾಡದೇ ಕೇವಲ ರಾಜಕೀಯ ಭಾಷಣ ಮಾಡಿದ್ದಾರೆ. ಕಾಂಗ್ರೆಸ್ ಅವರ ಕಾಲದಲ್ಲಿಯೇ ಈ ಕಾಯ್ದೆಯ ರಚನೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕಾನೂನು ಸಚಿವರ ಪರಿಶೀಲನೆಯ ನಂತರ ಸಚಿವ ಸಂಪುಟದಲ್ಲಿ ಕಾಯ್ದೆಯನ್ನು ಮಂಡಿಸಲು ಸ್ವತ: ಸಿದ್ದರಾಮಯ್ಯನವರೇ ಒಪ್ಪಿಗೆ ನೀಡಿದ್ದರು. ಸಚಿವ ಸಂಪುಟದಲ್ಲಿ ಮಂಡಿಸಲು ಒಪ್ಪಿಗೆ ನೀಡುವುದೆಂದರೆ ಕಾಯ್ದೆಯನ್ನು ಒಪ್ಪಿದಂತೆಯೇ ಅಲ್ಲವೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ನಂತರ ವಿಧಾನಮಂಡಲದಲ್ಲಿ ಅದೇ ಕಾಯ್ದೆಗೆ ಅವರು ವಿರೋಧ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್ ನ ದ್ವಿಮುಖ ನೀತಿಯನ್ನು ತೋರುತ್ತದೆ ಎಂದು ಹೇಳಿದ್ದನ್ನ ಇಲ್ಲಿ ಸ್ಮರಿಸಹುದು.

click me!