ಟ್ರಾಯ್ ಕಾಯ್ದೆಗೆ ವಿರೋಧ: ಸಿಡಿದೆದ್ದ ಕೇಬಲ್ ಆಪರೇಟರ್‌ಗಳು!

By Web DeskFirst Published Dec 15, 2018, 6:27 PM IST
Highlights

ಸರ್ಕಾರದ ಟ್ರಾಯ್ ಕಾಯ್ದೆ ವಿರೋಧಿಸಿ ಜಿಲ್ಲಾ ಕೇಬಲ್ ಆಪರೇಟರ್‌ಗಳಿಂದ ಭಾರೀ ಪ್ರತಿಭಟನೆ| ಬಾಗಲಕೋಟೆಯಲ್ಲಿ ಪ್ರತಿಭಟನೆ ನಡೆಸಿದ ಜಿಲ್ಲಾ ಕೇಬಲ್ ಆಪರೇಟರ್‌ಗಳು| ಟ್ರಾಯ್ ಕಾಯ್ದೆ ಹಿಂಪಡಿಯುವಂತೆ ಒತ್ತಾಯ| ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕೇಬಲ್ ಆಪರೇಟರ್‌ಗಳು

ಮಲ್ಲಿಕಾರ್ಜುನ್ ಹೊಸಮನಿ

ಬಾಗಲಕೋಟೆ(ಡಿ.15): ಕೇಂದ್ರ ಸರ್ಕಾರದ ನೂತನ ಟ್ರಾಯ್ ಕಾಯ್ದೆಯ ನೀತಿಯನ್ನು ವಿರೋಧಿಸಿ ಬಾಗಲಕೋಟೆಯಲ್ಲಿ ಜಿಲ್ಲಾ ಕೇಬಲ್ ಆಪರೇಟರ್‌ಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. 

ನವನಗರದ ಎಲ್‌ಐಸಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲೆಯ ಬಾದಾಮಿ, ಬಾಗಲಕೋಟೆ, ಹುನಗುಂದ, ಬೀಳಗಿ, ಮುಧೋಳ, ಜಮಖಂಡಿ ತಾಲೂಕಿನ ಭಾಗದಿಂದ ಕೇಬಲ್ ಆಪರೇಟರ್‌ಗಳು ಆಗಮಿಸಿದ್ದರು.

ದಾರಿಯುದ್ದಕ್ಕೂ ಘೋಷಣೆ ಕೂಗುತ್ತಾ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದ ಕೇಬಲ್ ಆಪರೇಟರ್ ಗಳು, ಬಳಿಕ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಂ ಅವರಿಗೆ ಲಿಖಿತ ಮನವಿಯನ್ನು ಸಲ್ಲಿಸಿದರು.

ಈ ವೇಳೆ ಕೇಬಲ್ ಆಪರೇಟ್‌ರ ಮುಖಂಡರು ಮಾತನಾಡಿ, ಕೇಂದ್ರ ಸರ್ಕಾರದ ಟ್ರಾಯ್ ಕಾಯ್ದೆಯಿಂದ ಜನರಿಗೆ ಕೇಬಲ್ ಎಂಆರ್‌ಪಿ ದರ ಹೆಚ್ಚಳವಾಗಲಿದ್ದು, ಇದರಿಂದ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು . 

ಹೀಗಾಗಿ ಕೂಡಲೇ ಟ್ರಾಯ್ ಕಾಯ್ದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಜಿಲ್ಲಾ ಕೇಬಲ್ ಆಪರೇಟರ್ ಗಳು ಎಚ್ಚರಿಕೆ ನೀಡಿದ್ದಾರೆ.

click me!