
ವಿಜಯಪುರ(ಡಿ.15): ವಯಸ್ಸು ದೇಹಕ್ಕೆ ಮಾತ್ರ ಮನಸ್ಸಿಗಲ್ಲ. ಕನಸಿನ ಸಾಕಾರಕ್ಕೆ ವಯಸ್ಸಿನ ಹಂಗಿಲ್ಲ. ದೃಢ ನಿಶ್ಚಯ, ಸಾಧಿಸುವ ಛಲವಿದ್ದವನಿಗೆ ವಯಸ್ಸು ಎಂಬುದು ಕೇವಲ ಎಣಿಕೆ ಮಾತ್ರ.
ಅದರಂತೆ ಕಲಿಯುವಿಕೆ ಕೂಡ ನಿರಂತರ. ಅದಕ್ಕೆ ವಯಸ್ಸಿನ ಮಿತಿಯಿಲ್ಲ ಎನ್ನುತ್ತಾರೆ. ಅದನ್ನು 76 ವರ್ಷದ ಈ ಅಜ್ಜನೋರ್ವ ನಿಜ ಮಾಡಿ ತೋರಿಸುತ್ತಿದ್ದಾರೆ.
ಈಗಾಗಲೇ 3 ಸ್ನಾತಕೋತ್ತರ ಪದವಿ ಪಡೆದಿದ್ದರೂ, 4ನೇ ಪಿಜಿಗಾಗಿ ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಬಿಎಡ್ ಕಾಲೇಜ್‌ನಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ ಬಾಗಲಕೋಟ ಜಿಲ್ಲೆ ಇಳಕಲ್ ತಾಲೂಕು ಕೆಲೂರ ಗ್ರಾಮದ ಹಿರಿಯ ನಿಂಗಯ್ಯ ಬಸಯ್ಯ ಒಡೆಯರ್.
ಆರೋಗ್ಯ ಇಲಾಖೆಯ ನಿವೃತ್ತ ಪತ್ರಾಂಕಿತ ಸಹಾಯಕರಾಗಿರುವ ನಿಂಗಯ್ಯ ಬಸಯ್ಯ ಒಡೆಯರ್, ತಮ್ಮ 4ನೇ ಸ್ನಾತಕೋತ್ತರ ಪದವಿಗಗಿ ಪರೀಕ್ಷೆ ಬರೆಯುವ ಮೂಲಕ ಇಡೀ ಪರೀಕ್ಷಾ ಕೇಂದ್ರದ ಗಮನಸೆಳೆದಿದ್ದಾರೆ.
1942 ಅಕ್ಟೋಬರ್ 4ರಂದು ಜನಿಸಿದ ಈ ಅಜ್ಜನಿಗೀಗ ಬರೋಬ್ಬರಿ 76 ವಯಸ್ಸು. ನಿವೃತ್ತಿಯಾಗಿ 18 ವರ್ಷಗಳು ಸಂದಿವೆ. ಆದರೆ ಈ ವಯಸ್ಸಲ್ಲೂ ಜ್ಞಾನದ ವಿಸ್ತರಿಸಿಕೊಳ್ಳಬೇಕೆಂಬ ಇವರ ಹುಮ್ಮಸ್ಸು ಕುಗ್ಗಿಲ್ಲ.
ಅಜ್ಜನ ಸಾಧನೆಯ ಹಾದಿ:
1967ರಲ್ಲಿ ಬಿಎ ವಿದ್ಯಾರ್ಹತೆ ಮೇಲೆ ಆರೋಗ್ಯ ಇಲಾಖೆಯಲ್ಲಿ ಗುಮಾಸ್ತನಾಗಿ ಸರಕಾರಿ ಸೇವೆಗೆ ಸೇರಿಕೊಂಡಿದ್ದರು. 1996ರಲ್ಲಿ ಮೊಟ್ಟ ಮೊದಲ ಬಾರಿಗೆ ಧಾರವಾಡ ಕವಿವಿಯ ಬಾಹ್ಯ ವಿದ್ಯಾರ್ಥಿಯಾಗಿ ಕನ್ನಡ ಎಂಎ ಪದವಿ ಪಡೆದರು ಒಡೆಯರ್.
2011ರಲ್ಲಿ ಮತ್ತೆ ಇಂಗ್ಲಿಷ್‌ನಲ್ಲಿ ಹಾಗೂ 2016ರಲ್ಲಿ ಹಿಂದಿ ಎಂಎ ಪದವಿ ಪಡೆದ ಅಜ್ಜ ನಿಂಗಯ್ಯ, ಇದೀಗ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕೆಂಬ ಆಸೆಯಿಂದ ಇಗ್ನೋ ವಿಜಯಪುರ ಅಧ್ಯಯನ ಕೇಂದ್ರದ ಬಾಹ್ಯ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯುವ ಮೂಲಕ ಪ್ರಾಧ್ಯಾಪಕರನ್ನೇ ಬೆರುಗೊಳಿಸಿದ್ದಾರೆ.
ಇನ್ನು ಈ ತಾತಪ್ಪನ ವಿಶೇಷತೆ ಇಲ್ಲಿಗೆ ನಿಲ್ಲಲ್ಲ. ಎರಡೂ ಬಕೈಗಳಿಂದ ಬರೆಯಬಲ್ಲ ವಿಶಿಷ್ಟ ಕಲೆ ನಿಂಗಯ್ಯ ಅವರಿಗೆ ಕರಗತ. ಅಲ್ಲದೇ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದು ಇವರಿಗೆ ನೀರು ಕುಡಿದಷ್ಟೇ ಸುಲಭ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ