Karnataka Cabinet Expansion: ಬೊಮ್ಮಾಯಿ ಸಂಪುಟಕ್ಕೆ ಸೇರ್ತಾರಾ ಬಿ.ವೈ.ವಿಜಯೇಂದ್ರ?

By Kannadaprabha NewsFirst Published Dec 5, 2021, 8:10 AM IST
Highlights

*ಸಂಕ್ರಾಂತಿಗೆ ವಿಸ್ತರಣೆ/ಪುನಾರಚನೆ ಸಂಭವ
*ದೆಹಲಿಗೆ ತೆರಳಿದಾಗ ಪಕ್ಷದ ವರಿಷ್ಠರೊಂದಿಗೆ ಚರ್ಚೆ
*ಸಾರ್ವತ್ರಿಕ ಚುನಾವಣೆ ಮೇಲೆ ಗಮನ
*ಶೀಘ್ರ ಸಂಪುಟ ವಿಸ್ತರಣೆ: ಯಡಿಯೂರಪ್ಪ ಸುಳಿವು

ಬೆಂಗಳೂರು(ಡಿ. 05): ಹೊಸ ವರ್ಷದ ಸಂಕ್ರಾಂತಿ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರ ಸಂಪುಟ ವಿಸ್ತರಣೆ (Cabinet expansion) ಅಥವಾ ಪುನಾರಚನೆಯಾಗುವ ನಿರೀಕ್ಷೆಯಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (B S Yediyurappa) ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಅವರಿಗೆ ಸಂಪುಟದಲ್ಲಿ ಅವಕಾಶ ಸಿಗಲಿದೆಯೇ ಎಂಬ ಕುತೂಹಲ ಮೂಡಿದೆ. ಆಡಳಿತಾರೂಢ ಬಿಜೆಪಿಯ (BJP) ತೆರೆಮರೆಯಲ್ಲಿ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಬಿರುಸಿನ ಚಟುವಟಿಕೆ ನಡೆದಿದ್ದು, ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಈ ನಿಟ್ಟಿನಲ್ಲಿ ಪ್ರತಿಬಾರಿ ದೆಹಲಿಗೆ ತೆರಳಿದ ವೇಳೆ ಪಕ್ಷದ ವರಿಷ್ಠರೊಂದಿಗಿನ ಮಾತುಕತೆಯಲ್ಲಿ ವಿಜಯೇಂದ್ರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ಬೊಮ್ಮಾಯಿ ಅವರು ಪ್ರಸ್ತಾಪ ಮಾಡುತ್ತಲೇ ಇದ್ದಾರೆ. ಆದರೆ, ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ಇದುವರೆಗೆ ಹಸಿರು ನಿಶಾನೆ ತೋರಿಲ್ಲ. ಒಂದು ವೇಳೆ ಸಂಪುಟ ವಿಸ್ತರಣೆಯಾಗುವುದಾದರೆ ವಿಜಯೇಂದ್ರ ಅವರಿಗೆ ಈ ಬಾರಿ ಸಚಿವ ಸ್ಥಾನ ಖಚಿತ ಎಂಬ ಮಾತು ಕೇಳಿಬರುತ್ತಿದೆ.

ಸಾರ್ವತ್ರಿಕ ಚುನಾವಣೆ ಮೇಲೆ ಗಮನ:

ಯಡಿಯೂರಪ್ಪ ಅವರು ರಾಜಕೀಯವಾಗಿ ಪ್ರಬಲವಾಗಿರುವಾಗಲೇ ಪ್ರಮುಖ ಜವಾಬ್ದಾರಿ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ವಿಜಯೇಂದ್ರ ಅವರು ಹಿಂದೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನದ ಬಗ್ಗೆ ವರಿಷ್ಠರ ಬಳಿ ಒಲವು ವ್ಯಕ್ತಪಡಿಸಿದ್ದರು. ಆದರೆ, ಪ್ರಮುಖ ಜವಾಬ್ದಾರಿ ಇಲ್ಲದ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದೀಗ ಮುಂಬರುವ ಸಾರ್ವತ್ರಿಕ ಚುನಾವಣೆಗಳನ್ನು (Upcomimg Elections) ಗಮನದಲ್ಲಿರಿಸಿಕೊಂಡು ವಿಜಯೇಂದ್ರ ಅವರಿಗೆ ಸಚಿವ ಸ್ಥಾನದಂಥ ಪ್ರಮುಖ ಸ್ಥಾನವೊಂದನ್ನು ನೀಡಬೇಕು ಎಂಬ ಒತ್ತಾಯ ಯಡಿಯೂರಪ್ಪ ಬೆಂಬಲಿಗರಿಂದ ಹಾಗೂ ಪಕ್ಷದ ಹಲವು ಮುಖಂಡರಿಂದ ಪ್ರತಿಪಾದನೆಯಾಗುತ್ತಿದೆ.

Kasturirangan Report on Western Ghats ಜಾರಿಗೆ ರಾಜ್ಯದಿಂದ ವಿರೋಧ : ಕೇಂದ್ರ ಸಚಿವರ ಮುಂದೆ ಸಿಎಂ ವಾದ!

ಈ ನಿಟ್ಟಿನಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಆಂತರ್ಯದಲ್ಲಿ ಚರ್ಚೆ ಆರಂಭವಾಗಿದ್ದು, ಹಲವು ಬದಲಾವಣೆ ಮೂಲಕ ಸಂಪುಟ ಪುನಾರಚನೆಯನ್ನೇ ಕೈಗೆತ್ತಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯವೂ ಪಕ್ಷದಲ್ಲಿ ಗಂಭೀರವಾಗಿ ಪ್ರಸ್ತಾಪವಾಗಿದೆ. ಸಂಕ್ರಾಂತಿ ಬಳಿಕ ವಿಸ್ತರಣೆ ಅಥವಾ ಪುನಾರಚನೆಗೆ ವರಿಷ್ಠರು ಅನುಮೋದನೆ ನೀಡಬಹುದು ಎನ್ನಲಾಗುತ್ತಿದ್ದು, ಆಗ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಸಿಗುವ ಸಂಭವ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ಶೀಘ್ರ ಸಂಪುಟ ವಿಸ್ತರಣೆ: ಯಡಿಯೂರಪ್ಪ ಸುಳಿವು

ರಾಜ್ಯ ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆಯಾಗುವ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಆದರೆ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತೀರ್ಮಾನಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ. ದಾವಣಗೆರೆಯ ಆನಗೋಡು ಗ್ರಾಮದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್ಟವಿಚಾರ. ಯಾರನ್ನು ಸಚಿವರನ್ನಾಗಿ ಮಾಡಬೇಕು, ಯಾರನ್ನು ಕೈಬಿಡಬೇಕು ಎಂಬುದನ್ನು ಮುಖ್ಯಮಂತ್ರಿ ಅವರೇ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.

Karnataka Politics: ಸಿದ್ದು ಸಿಎಂ ಆಗಲೆಂದು ಪೂಜೆ, ಜಿಟಿ ದೇವೇಗೌಡ್ರ ಬಾಗಿಲು ಬಂದ್ ಮಾಡಿದ ಎಚ್‌ಡಿಕೆ

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರು ಮೊದಲಿಗೆ 29 ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಆ ಬಳಿಕ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ಕೊಟ್ಟಾಗಲೆಲ್ಲ ಸಂಪುಟ ವಿಸ್ತರಣೆಯ ಮಾತುಗಳು ಕೇಳಿಬರುತ್ತಲೇ ಇದ್ದವು. ಆದರೆ ವರಿಷ್ಠರ ಜತೆ ಆ ಕುರಿತು ಚರ್ಚೆ ನಡೆದಿರುವ ಸಾಧ್ಯತೆಗಳನ್ನು ಬೊಮ್ಮಾಯಿ ತಳ್ಳಿಹಾಕುತ್ತಾ ಬಂದಿದ್ದರು. ಆದರೆ ಇದೀಗ ಸ್ವತಃ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಹಿರಂಗವಾಗಿಯೇ ಈ ವಿಚಾರ ಪ್ರಸ್ತಾಪಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

click me!