Latest Videos

ಹಿಂದೂಗಳ ಅವಹೇಳನ: ರಾಹುಲ್‌ ಗಾಂಧಿ ಕ್ಷಮೆಗೆ ವಿಜಯೇಂದ್ರ ಆಗ್ರಹ

By Kannadaprabha NewsFirst Published Jul 3, 2024, 8:46 AM IST
Highlights

ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಸುಳ್ಳನ್ನೇ ಹತ್ತಾರು ಬಾರಿ ಹೇಳಿಕೊಂಡು ದೇಶಾದ್ಯಂತ ಪ್ರವಾಸ ಮಾಡಿದ್ದರು. ಈಗ ವಿಪಕ್ಷ ನಾಯಕನಾಗಿ ಹಳೇ ಚಾಳಿ ಮುಂದುವರೆಸಿದ್ದಾರೆ. ಸಂಸದರೂ ಆದ ಅವರು ತಮ್ಮ ಸ್ಥಾನದ ಘನತೆ ಎತ್ತಿ ಹಿಡಿಯುವ ಬದಲಾಗಿ ಆ ಸ್ಥಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಬೆಂಗಳೂರು(ಜು.03):  ಹಿಂದುಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬೇಜವಾಬ್ದಾರಿ ನಡವಳಿಕೆ ಅಕ್ಷಮ್ಯ ಅಪರಾಧ ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಹುಲ್ ಗಾಂಧಿ ಅವರು ಹಿಂದುಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ವಿಪಕ್ಷ ನಾಯಕನಾಗಿ ಮಾಡಿದ ಚೊಚ್ಚಲ ಭಾಷಣ ಸುಳ್ಳು, ನಿರಾಶೆ, ಆಧಾರರಹಿತ ಆರೋಪಗಳಿಂದ ಕೂಡಿತ್ತು. ಅವರ ನಡವಳಿಕೆ ಸಂಸತ್ತಿನ ನಿಯಮಗಳಿಗೆ ಧಕ್ಕೆ ತರುವಂತಿತ್ತು ಎಂದು ಹೇಳಿದರು.

ಮೂರು ಡಿಸಿಎಂ ಮೂಲಕ ಡಿಕೆಶಿ ಕಟ್ಟಿಹಾಕಲು ಪಿತೂರಿ: ವಿಜಯೇಂದ್ರ

ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಸುಳ್ಳನ್ನೇ ಹತ್ತಾರು ಬಾರಿ ಹೇಳಿಕೊಂಡು ದೇಶಾದ್ಯಂತ ಪ್ರವಾಸ ಮಾಡಿದ್ದರು. ಈಗ ವಿಪಕ್ಷ ನಾಯಕನಾಗಿ ಹಳೇ ಚಾಳಿ ಮುಂದುವರೆಸಿದ್ದಾರೆ. ಸಂಸದರೂ ಆದ ಅವರು ತಮ್ಮ ಸ್ಥಾನದ ಘನತೆ ಎತ್ತಿ ಹಿಡಿಯುವ ಬದಲಾಗಿ ಆ ಸ್ಥಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ತಮ್ಮ ಭಾಷಣದಲ್ಲಿ ಹಿಂದುಗಳು ಹಿಂಸಾಚಾರ ಮತ್ತು ದ್ವೇಷದಲ್ಲಿ ಹಗಲಿರುಳು ನಿರತರು ಎಂಬ ಮಾತನ್ನು ಉಲ್ಲೇಖಿಸಿದ್ದಾರೆ. ಈ ಮಾತನ್ನು ಹೇಳುವ ಮೂಲಕ ಅವರು ಈ ದೇಶದ ಅಸಂಖ್ಯಾತ ಹಿಂದುಗಳಿಗೆ ಅವಮಾನ ಮಾಡಿದ್ದಾರೆ. ಹಿಂದುಗಳ ತೇಜೋವಧೆ ಮಾಡಿದ್ದಾರೆ. ಅಷ್ಟೇ ಸಾಲದೆಂದು ಅಗ್ನಿವೀರ್, ರೈತರ ಬಗ್ಗೆ, ಅಯೋಧ್ಯೆ ವಿಚಾರ ಮಾತ್ರವಲ್ಲದೆ, ಮೈಕ್ರೋಫೋನ್ ಬಗ್ಗೆ ಮಾತನಾಡಿದ್ದಾರೆ. ಇವೆಲ್ಲ ವಿಚಾರಗಳಲ್ಲಿ ಸುಳ್ಳು ಹೇಳಿಕೆ ನೀಡಿದ್ದಲ್ಲದೆ, ಹಿಂದುಗಳ ತೇಜೋವಧೆ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು.

ಹಿಂದುಗಳ ತೇಜೋವಧೆ ಮಾಡಲು ಸದನವನ್ನು ಬಳಸಿದ ರಾಹುಲ್ ಗಾಂಧಿಯವರು 1984ರ ಸಿಕ್ಖ್ ಹತ್ಯಾಕಾಂಡಕ್ಕೆ ಕಾರಣಕರ್ತರು ಕಾಂಗ್ರೆಸ್ ಮುಖಂಡರಲ್ಲವೇ ಎಂಬ ಪ್ರಶ್ನೆಗೆ ಉತ್ತರ ಹೇಳಬೇಕು. ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಿ ದೇಶದ ಮುಗ್ಧ ಜನರ ಮೇಲೆ ದಬ್ಬಾಳಿಕೆ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷ ಎಂಬುದನ್ನೂ ಅವರು ಗಮನಿಸಿ ಉತ್ತರ ಕೊಡಲಿ. ಇಂಥ ಕಾಂಗ್ರೆಸ್ ಪಕ್ಷವು ದೇಶದ ಉದ್ಧಾರ ಮಾಡುವುದಾಗಿ ಜನರ ಮುಂದೆ ಅನೇಕ ವಿಚಾರಗಳನ್ನು ಮುಂದಿಟ್ಟಿತ್ತು. ಈಗ ಹಿಂದುಗಳ ತೇಜೋವಧೆ ಮಾಡಿದ್ದು, ಯಾರೂ ಇದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ದಕ್ಷಿಣ ಭಾರತದಲ್ಲೇ ಕರ್ನಾಟಕ ಬಿಜೆಪಿ ಭದ್ರಕೋಟೆ: ಬಿ.ವೈ.ವಿಜಯೇಂದ್ರ

2010ರಲ್ಲಿ ಆಗಿನ ಗೃಹ ಸಚಿವ ಚಿದಂಬರಂ ಅವರು ಸಹ ಹಿಂದೂಗಳು ಭಯೋತ್ಪಾದಕರು ಎಂದು ಉದ್ಧಟತನದಿಂದ ಹೇಳಿದ್ದರು. 2013ರಲ್ಲಿ ಸುಶೀಲ್‍ಕುಮಾರ್ ಶಿಂಧೆ ಅವರೂ ಇದೇ ಧಾಟಿಯಲ್ಲಿ ಮಾತನಾಡಿದ್ದರು. ಸ್ವತಃ ರಾಹುಲ್ ಗಾಂಧಿಯವರು 2021ರಲ್ಲಿ ಹಿಂದುತ್ವ ಬೆಂಬಲಿಸುವವರನ್ನು ದೇಶದಿಂದ ಹೊಡೆದೋಡಿಸಿ ಎಂದು ತಿಳಿಸಿದ್ದರು. ನಿನ್ನೆಯ ಅವರ ಮಾತಿನ ಧಾಟಿಯಿಂದ ತಮ್ಮ ಪಕ್ಷದ ಉದ್ದೇಶವನ್ನು ರಾಹುಲ್ ಗಾಂಧಿಯವರೇ ಬಿಚ್ಚಿಟ್ಟಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್ ಅವರು ಉಪಸ್ಥಿತರಿದ್ದರು.

click me!