ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಪ್ರಕರಣದಲ್ಲಿ ಸಿಐಡಿ ಪೊಲೀಸರು ಮೈಸೂರಿನ ಕೃಷಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷಿ ಸಹಾಯಕ ನಿರ್ದೇಶಕ ಗುರುಪ್ರಸಾದ್ ಹಾಗೂ ಕೃಷಿ ಅಧಿಕಾರಿ ಸುದರ್ಶನ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.
ಮಂಡ್ಯ/ಮೈಸೂರು (ಆ.21) ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಪ್ರಕರಣದಲ್ಲಿ ಸಿಐಡಿ ಪೊಲೀಸರು ಮೈಸೂರಿನ ಕೃಷಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷಿ ಸಹಾಯಕ ನಿರ್ದೇಶಕ ಗುರುಪ್ರಸಾದ್ ಹಾಗೂ ಕೃಷಿ ಅಧಿಕಾರಿ ಸುದರ್ಶನ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಇವರನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜಂಟಿ ಕೃಷಿ ನಿರ್ದೇಶಕರ ಮೂಲಕ 6ರಿಂದ 8 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿಲ್ಲೆಯ 7 ತಾಲೂಕುಗಳ ಸಹಾಯಕ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರದ ಬರೆದು, ದೂರು ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಳಿಕ, ಇದು ವಿವಾದವಾಗುತ್ತಿದ್ದಂತೆ, ತಾವು ಈ ರೀತಿಯ ಪತ್ರ ಬರೆದಿಲ್ಲ, ತಮ್ಮ ಹೆಸರಿನಲ್ಲಿ, ನಕಲಿ ಸಹಿ ಮಾಡಿ ಪತ್ರ ಬರೆಯಲಾಗಿದೆ ಎಂದು ಪತ್ರ ಬರೆದಿದ್ದಾರೆ ಎನ್ನಲಾದ ಸಹಾಯಕ ಕೃಷಿ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದರು. ಬಳಿಕ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.
undefined
ಕೃಷಿ ಸಚಿವರ ಲಂಚ ಬೇಡಿಕೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಸಿಐಡಿ: ಮಂಡ್ಯ ಮಾತ್ರವಲ್ಲ, ಮೈಸೂರಿನವರ ಕೈವಾಡವೂ ಇದೆ
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೂರಿನ ಪತ್ರದಲ್ಲಿರುವ ಸಹಿಗಳೆಲ್ಲವೂ ನಕಲಿ ಎನ್ನುವುದು ತಿಳಿದು ಬಂದಿತ್ತು. ಅಲ್ಲದೆ, ಪತ್ರವನ್ನು ಮೈಸೂರಿನ ಸರಸ್ವತಿಪುರಂನ ಪ್ರಧಾನ ಅಂಚೆ ಕಚೇರಿಯಿಂದ ರಾಜ್ಯಪಾಲರಿಗೆ ಕಳುಹಿಸಿರುವುದು ಪತ್ತೆಯಾಗಿತ್ತು. ಆದರೆ, ಅಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಪತ್ರ ಕಳುಹಿಸಿದ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ. ಈಗ ಪತ್ರ ಬರೆದವರು ಮೈಸೂರಿನ ಕೃಷಿ ಇಲಾಖೆಯ ಈ ಇಬ್ಬರು ಅಧಿಕಾರಿಗಳು ಎಂಬ ಮಾಹಿತಿ ದೊರಕಿದ್ದು, ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಕೆ.ಆರ್.ನಗರ ಮೂಲದ ಇವರು ಪ್ರಸ್ತುತ ಮೈಸೂರಿನ ಕೃಷಿ ಇಲಾಖೆಯ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇವರು ಮಂಡ್ಯದ ಅಧಿಕಾರಿಗಳ ಹೆಸರಿನಲ್ಲಿ ಪತ್ರ ಬರೆದಿದ್ದು ಏಕೆ? ಇದರ ಹಿಂದೆ ರಾಜಕೀಯ ಷಡ್ಯಂತ್ರವೇನಾದರೂ ಇದೆಯಾ ಎಂಬುದೂ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭ್ರಷ್ಟಾಚಾರದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಫಸ್ಟ್: ಮಾಜಿ ಶಾಸಕ ಸುರೇಶ್‌ಗೌಡ ವಾಗ್ದಾಳಿ