ಮಾಜಿ ಸಚಿವರೂ ಹಾಗೂ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಮತ್ತೆ ಕಾಂಗ್ರೆಸ್‌ಗೆ ಮರಳಲು ಆಸಕ್ತಿ ತೋರಿರುವುದಕ್ಕೆ ಅವರ ಪುತ್ರರ ರಾಜಕೀಯ ಭವಿಷ್ಯದ ಬಗ್ಗೆ ಇರುವ ಆತಂಕವೂ ಒಂದು ಮುಖ್ಯ ಕಾರಣ ಎಂಬ ಮಾತು ಕೇಳಿಬರುತ್ತಿದೆ.
ವಿಜಯ್ ಮಲಗಿಹಾಳ
ಬೆಂಗಳೂರು (ಆ.21) : ಮಾಜಿ ಸಚಿವರೂ ಹಾಗೂ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಮತ್ತೆ ಕಾಂಗ್ರೆಸ್‌ಗೆ ಮರಳಲು ಆಸಕ್ತಿ ತೋರಿರುವುದಕ್ಕೆ ಅವರ ಪುತ್ರರ ರಾಜಕೀಯ ಭವಿಷ್ಯದ ಬಗ್ಗೆ ಇರುವ ಆತಂಕವೂ ಒಂದು ಮುಖ್ಯ ಕಾರಣ ಎಂಬ ಮಾತು ಕೇಳಿಬರುತ್ತಿದೆ.
ಸೋಮಶೇಖರ್(ST Somashekhar) ಅವರು ತಮ್ಮ ಪುತ್ರ ನಿಶಾಂತ್ ಅವರನ್ನು ಮತ್ತು ಶಿವರಾಂ ಹೆಬ್ಬಾರ್ ಅವರು ತಮ್ಮ ಪುತ್ರ ವಿವೇಕ್ ಅವರನ್ನು ಚುನಾವಣಾ ರಾಜಕೀಯಕ್ಕೆ ಕರೆತರಲು ಇನ್ನಿಲ್ಲದ ಆಸ್ಥೆ ವಹಿಸಿದ್ದಾರೆ ಎನ್ನುವುದು ಗುಟ್ಟಿನ ವಿಷಯವೇನಲ್ಲ. ಉಭಯ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದು ಶಾಸಕರಾಗಿ, ಸಚಿವರಾದ ನಂತರ ಅವರವರ ಕ್ಷೇತ್ರಗಳಲ್ಲಿ ತಂದೆಗಿಂತ ಹೆಚ್ಚು ಪುತ್ರರೇ ಹೆಚ್ಚು ಕಾಣಿಸಿಕೊಂಡರು. ಚುನಾವಣಾ ರಾಜಕೀಯಕ್ಕೆ ಧುಮುಕಲು ಅವರು ತುದಿಗಾಲ ಮೇಲೆ ನಿಂತಿದ್ದಾರೆ.
ಘರ್ ವಾಪಸಿ ಚಟುವಟಿಕೆ ತೀವ್ರ; ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಬಾಂಬೆ ಬಾಯ್ಸ್!
ಆದರೆ, ಬಿಜೆಪಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕುಟುಂಬ ರಾಜಕಾರಣದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಕಳೆದ ಚುನಾವಣೆ ವೇಳೆಯೂ ಈ ವಿಷಯ ಪ್ರಮುಖವಾಗಿ ಪ್ರಸ್ತಾಪವಾಗಿ ಹಲವು ಸಚಿವರು, ನಾಯಕರಿಗೆ ನಿರಾಶೆ ಉಂಟಾಗಿರುವುದು ಕಣ್ಣ ಮುಂದೆಯೇ ಇದೆ. ಹೀಗಿರುವಾಗ ಬಿಜೆಪಿಯಲ್ಲೇ ಮುಂದುವರೆದರೆ ತಮ್ಮ ಮಕ್ಕಳಿಗೂ ಅವಕಾಶ ಸಿಗಲಿಕ್ಕಿಲ್ಲ ಎಂಬ ಆತಂಕ ಈ ಉಭಯ ನಾಯಕನ್ನು ಕಾಡುತ್ತಿದೆ. ಈ ಬಗ್ಗೆ ರಾಜ್ಯ ನಾಯಕರು ಆಶ್ವಾಸನೆ ಕೊಟ್ಟರೂ ಪಕ್ಷದ ವರಿಷ್ಠರು ನೀಡುವ ಬಗ್ಗೆ ಅನುಮಾನವಿದೆ. ಇದು ಸೋಮಶೇಖರ್ ಮತ್ತು ಶಿವರಾಂ ಅವರಿಗೆ ಚೆನ್ನಾಗಿಯೇ ಗೊತ್ತಿದೆ ಎಂದು ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ.
ಇಂಥ ಆತಂಕ ಕಾಂಗ್ರೆಸ್ ಬಗ್ಗೆ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಪುತ್ರರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟಲ್ಲಿ ಈಡೇರುತ್ತದೆ ಎಂಬ ಅದಮ್ಯ ವಿಶ್ವಾಸವಿದೆ. ಹೀಗಾಗಿ, ಬಿಜೆಪಿ ಬದಲು ಕಾಂಗ್ರೆಸ್‌ಗೆ ವಲಸೆ ಹೋದಲ್ಲಿ ಪುತ್ರರ ರಾಜಕೀಯ ಭವಿಷ್ಯದ ಹಾದಿಯೂ ಸುಗಮವಾಗುತ್ತದೆ ಎಂಬ ಲೆಕ್ಕಾಚಾರವೂ ಈ ಘರ್ ವಾಪ್ಸಿ ಹಿಂದೆ ಅಡಗಿದೆ ಎನ್ನಲಾಗಿದೆ.
ಆದರೆ, ಹಾಗಂತ ಪುತ್ರರ ರಾಜಕೀಯ ಭವಿಷ್ಯವೊಂದೇ ಬಿಜೆಪಿ ತೊರೆದು ಕಾಂಗ್ರೆಸ್ ವಾಪಸಾಗುವುದಕ್ಕೆ ಮುಖ್ಯ ಕಾರಣವಲ್ಲ. ಅನೇಕ ಕಾರಣಗಳ ಜತೆ ಇದು ಕೂಡ ಮುಖ್ಯವಾದದ್ದು ಎನ್ನಲಾಗುತ್ತಿದೆ.
ಒಂದು ವೇಳೆ ಈಗ ಕಾಂಗ್ರೆಸ್‌ಗೆ ವಾಪಸಾದಲ್ಲಿ ಕ್ಷೇತ್ರದ ಉಪಚುನಾವಣೆ ಎದುರಾಗುತ್ತದೆ. ಈ ಉಪಚುನಾವಣೆಯನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಎದುರಿಸಿ ಗೆಲ್ಲುವುದು. ಬಳಿಕ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪುತ್ರರನ್ನು ಕಣಕ್ಕಿಳಿಸುವುದು ಒಂದು ಲೆಕ್ಕಾಚಾರ. ಅಕಸ್ಮಾತ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕಲ್ಲಿ ಅಲ್ಲಿ ಒಂದು ಕೈ ನೋಡುವುದು. ಗೆದ್ದಲ್ಲಿ ಪುತ್ರರಿಗೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗುವಂತೆ ನೋಡಿಕೊಳ್ಳುವುದು ಮತ್ತೊಂದು ಲೆಕ್ಕಾಚಾರ.
Ghar wapsi: ಕಾಂಗ್ರೆಸ್‌ಗೆ ಸೋಮಶೇಖರ್ ಕರೆ ತರಲು ಶಾಸಕ ಶ್ರೀನಿವಾಸ್‌ಗೆ ಡಿಕೆ ಶಿವಕುಮಾರ್ ಟಾಸ್ಕ್
ಎಲ್ಲವೂ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರ ರಾಜಕೀಯ ಲೆಕ್ಕಾಚಾರದ ಹಂತದಲ್ಲಿವೆ. ಒಂದು ವೇಳೆ ಪುತ್ರರ ರಾಜಕೀಯ ಭವಿಷ್ಯದ ಬಗ್ಗೆ ಬಿಜೆಪಿಯಲ್ಲಿ ಸ್ಪಷ್ಟಭರವಸೆ ಸಿಕ್ಕಲ್ಲಿ ಉಭಯ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋಗುವ ಪ್ರಯತ್ನವನ್ನೂ ಕೈಬಿಟ್ಟರೂ ಬಿಡಬಹುದು ಎಂದು ತಿಳಿದು ಬಂದಿದೆ.