
ಬೆಂಗಳೂರು(ಜೂ.27): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಜಾತಿವಾರು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿ’ (ಜಾತಿಗಣತಿ) ವಿಚಾರದಲ್ಲಿ ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಳ್ಳದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಆರಂಭಿಕ ಸಚಿವ ಸಂಪುಟ ಸಭೆಗಳಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಿರುವ ಜಾತಿಗಣತಿ ವರದಿ ಸ್ವೀಕರಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿತ್ತು. ಈ ವೇಳೆ ಬಹುತೇಕ ಸಂಪುಟ ಸದಸ್ಯರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾತಿ ಹಾಗೂ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳಿಗೆ ಕೈ ಹಾಕದಿರುವುದು ಒಳ್ಳೆಯದು ಎಂಬ ಸಲಹೆ ನೀಡಿದರು.
ಜಾತಿಗಣತಿ ವರದಿ ಬಿಡುಗಡೆಗೆ ಕಾಂಗ್ರೆಸ್‌ನಲ್ಲೇ ವಿರೋಧ: ಬಹುಸಂಖ್ಯಾತರಾದ ಮುಸ್ಲಿಮರು
ಜಾತಿ ಹಾಗೂ ಧರ್ಮದ ವಿಚಾರದಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳುವಲ್ಲಿ ಎಡವಿದ ಕಾರಣ ಕಳೆದ ಚುನಾವಣೆ (2018)ಯಲ್ಲಿ ಕಹಿ ಅನುಭವ ಕಂಡಿದ್ದೇವೆ. ಪರಿಣಾಮ ಸರ್ಕಾರ ಜನಪರ ಆಡಳಿತ ನೀಡಿದ್ದರೂ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋಲುಣ್ಣಬೇಕಾಯಿತು. ಹೀಗಾಗಿ ಇಂತಹ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ ಎಂದು ಸಲಹೆ ಕೇಳಿ ಬಂದಿತ್ತು ಎನ್ನಲಾಗಿದೆ.
ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಹಾಕುತ್ತಿದೆ. ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದಾಗಿ ರಾಜ್ಯದ ಜನತೆಯು ಕಾಂಗ್ರೆಸ್ ಪಕ್ಷದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಇದರ ಲಾಭವನ್ನು ಪಡೆಯುವ ಬಗ್ಗೆ ಚಿಂತಿಸಬೇಕು. ಜಾತಿ ಗಣತಿಯಂತಹ ವಿಚಾರಗಳನ್ನು ಸದ್ಯಕ್ಕೆ ಪರಿಗಣಿಸಬಾರದು ಎಂದು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ