ಬ್ರ್ಯಾಂಡ್‌ ಬೆಂಗಳೂರು ಸಲಹೆಗೆ ವೆಬ್‌ಸೈಟ್‌ ಶುರು: ಡಿ.ಕೆ.ಶಿವಕುಮಾರ್‌

By Kannadaprabha News  |  First Published Jun 22, 2023, 7:44 AM IST

ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ಸಲಹೆ ಪಡೆಯುವ ಉದ್ದೇಶಕ್ಕಾಗಿ ರೂಪಿಸಲಾದ ‘ಬ್ರ್ಯಾಂಡ್‌ ಬೆಂಗಳೂರು ಪೋರ್ಟಲ್‌’ಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಬುಧವಾರ ವಿಕಾಸಸೌಧದಲ್ಲಿ ಚಾಲನೆ ನೀಡಿದರು.


ಬೆಂಗಳೂರು (ಜೂ.22): ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ಸಲಹೆ ಪಡೆಯುವ ಉದ್ದೇಶಕ್ಕಾಗಿ ರೂಪಿಸಲಾದ ‘ಬ್ರ್ಯಾಂಡ್‌ ಬೆಂಗಳೂರು ಪೋರ್ಟಲ್‌’ಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಬುಧವಾರ ವಿಕಾಸಸೌಧದಲ್ಲಿ ಚಾಲನೆ ನೀಡಿದರು. www.brandbengaluru.karnataka.gov.in ವೆಬ್‌ಸೈಟ್‌ ಮೂಲಕ ಬೆಂಗಳೂರಿಗರು, ವಿದೇಶ ಹಾಗೂ ಹೊರ ರಾಜ್ಯದಲ್ಲಿರುವ ಕನ್ನಡಿಗರು ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಸಲ್ಲಿಸುವುದಕ್ಕೆ ಜೂ.30ರವರೆಗೆ ಅವಕಾಶ ನೀಡಲಾಗಿದೆ. ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಸಲಹೆಗಳನ್ನು ನೀಡಬಹುದಾಗಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಈಗಾಗಲೇ ಬೆಂಗಳೂರಿನ ಸರ್ವಪಕ್ಷ ಶಾಸಕರ ಸಭೆ ಮಾಡಿದ್ದೇನೆ. ಬೆಂಗಳೂರಿನ ಎಲ್ಲಾ ವರ್ಗಗಳ ಬ್ರ್ಯಾಂಡ್‌ ಅಂಬಾಸಿಡರ್‌ಗಳ ಜತೆ ಚರ್ಚಿಸಿದ್ದೇನೆ. ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ನನಗೆ ಸಾರ್ವಜನಿಕರ ಅಭಿಪ್ರಾಯ ಬಹಳ ಮುಖ್ಯ. ಹೀಗಾಗಿ, ಅಭಿಪ್ರಾಯ ಸಂಗ್ರಹಿಸಲು ಪೋರ್ಟಲ್‌ ಆರಂಭಿಸುತ್ತಿದ್ದೇವೆ ಎಂದು ತಿಳಿಸಿದರು. 

Tap to resize

Latest Videos

ಬಿಬಿಎಂಪಿ, ಬಿಡಿಎ ಕಾಮಗಾರಿ ತನಿಖೆಗೆ ವಿಶೇಷ ತಂಡ: ಡಿ.ಕೆ.ಶಿವಕುಮಾರ್‌

ಶಾಸಕರು, ಅಧಿಕಾರಿಗಳು, ಅಂಬಾಸಿಡರ್‌ಗಳ ಸಭೆಯಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೈಡೆನ್ಸಿಟಿ ಕಾರಿಡಾರ್‌, ಮೆಟ್ರೋ ಸಂಪರ್ಕ ವಿಸ್ತರಣೆ, ಮೊನೊ ರೈಲು, ಉಪ ನಗರ ರೈಲು, ರಸ್ತೆ ಅಗಲೀಕರಣ, ಎಲಿವೇಟೆಡ್‌ ರಸ್ತೆ, ನೈಸ್‌ ರಸ್ತೆಯನ್ನು ವರ್ತುಲ ರಸ್ತೆ ಆಗಿ ಮಾರ್ಪಾಡು, ನಗರದಲ್ಲಿ ಸುರಂಗ ರಸ್ತೆಗಳ ನಿರ್ಮಾಣ, ಸ್ವಚ್ಛತೆ, ಪರಿಸರ ವಿಚಾರದಲ್ಲಿ ಕಸ ವಿಲೇವಾರಿ ಹಾಗೂ ಕೊಳಚೆ ನೀರು ನಿರ್ವಹಣೆ, ಕೊಳಚೆ ನೀರು ಪರಿಷ್ಕರಣೆ ಮತ್ತು ಮರುಬಳಕೆ, ಕಾವೇರಿ ನೀರು ಪೂರೈಕೆ, ಕೊಳಗೇರಿ ಪ್ರದೇಶ ಅಭಿವೃದ್ಧಿ ಸೇರಿದಂತೆ ದಕ್ಷ ಆಡಳಿತ, ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಅನೇಕ ಸಲಹೆ ನೀಡಿದ್ದಾರೆ.

ಈ ಮಧ್ಯೆ ಕೆಲವು ದೊಡ್ಡ ನಾಯಕರ ಮನೆಗೆ ಹೋಗಿ ಚರ್ಚೆ ಮಾಡಲು ತೀರ್ಮಾನಿಸಿದ್ದೇನೆ. ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು, ಇನ್ನು ಕೆಲವರನ್ನು ಭೇಟಿ ಮಾಡಬೇಕು. ಬಸವರಾಜ ಬೊಮ್ಮಾಯಿ ಅವರ ಸಮಯ ಕೇಳಿದ್ದು, ಅವರ ಸಮಯದ ಅಭಾವದಿಂದ ಭೇಟಿ ಮಾಡಲು ಆಗಿಲ್ಲ ಎಂದರು.

ಫುಟ್‌ಪಾತ್‌ ಒತ್ತುವರಿ: ಪೊಲೀಸರೊಂದಿಗೆ ಸಭೆ: ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ದೇಶದ ಬೇರೆ ನಗರಗಳಲ್ಲಿ ಬೆಂಗಳೂರಿನ ವಾಹನ ದಟ್ಟಣೆಗಿಂತ ಹೆಚ್ಚಿನ ದಟ್ಟಣೆ ಇದೆ. ಆ ಬಗ್ಗೆ ಯಾರೂ ಮಾತನಾಡುವುದಿಲ್ಲ. ಆದರೆ, ಬೆಂಗಳೂರನ್ನು ಇಡೀ ವಿಶ್ವ ನೋಡುತ್ತಿದೆ. ಹಾಗಾಗಿ, ಇಲ್ಲಿನ ಸಮಸ್ಯೆಗಳ ಮಾತನಾಡುತ್ತಾರೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ನಡೆದಾಡುವ ಸ್ಥಿತಿ ಇದೆ. ಹೀಗಾಗಿ, ಬೆಂಗಳೂರು ನಗರದ ಸಂಚಾರಿ ಪೊಲೀಸ್‌ ವಿಭಾಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. 20 ಅಧಿಕಾರಿಗಳ ಪಟ್ಟಿಸಿದ್ಧಪಡಿಸುತ್ತಿದ್ದೇನೆ. ಈ ಬಗ್ಗೆ ಗೃಹ ಸಚಿವರೊಂದಿಗೂ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಕನ್ನಡಿಗರಿಂದ ಮುಂಬೈನಲ್ಲಿ ಸುರಂಗ ರಸ್ತೆ ನಿರ್ಮಾಣ: ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಸಲಹೆ ಬಂದಿವೆ. ಕರ್ನಾಟಕದವರು ಮುಂಬೈನಲ್ಲಿ ಸುರಂಗ ರಸ್ತೆ ನಿರ್ಮಿಸುತ್ತಿದ್ದಾರೆ. ಪಕ್ಕದ ರಾಜ್ಯದವರು ಕಾಶ್ಮೀರದಲ್ಲಿ ಸುರಂಗ ರಸ್ತೆ ನಿರ್ಮಿಸುತ್ತಿದ್ದಾರೆ. ಜಯನಗರದಲ್ಲಿ ಒಂದೇ ಪಿಲ್ಲರ್‌ ಮೇಲೆ ನಿರ್ಮಿಸಿದ ಸೇತುವೆ ಮೇಲೆ ಮೆಟ್ರೋ ಹಾಗೂ ವಾಹನ ಸಂಚಾರ ಮಾಡುವ ಪ್ರಯೋಗವನ್ನು ಮಾಡಿದ್ದು, ಇದು ಮಾದರಿಯಾಗಿದೆ ಎಂದು ಉಪಮುಖ್ಯಮಂತ್ರಿಗಳು ಹೇಳಿದರು.

ಕಸ ವಿಲೇವಾರಿಗೆ ಶಾಶ್ವತ ಪರಿಹಾರ: ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಸಚಿವ ಜಾಜ್‌ರ್‍ ಅವರೊಂದಿಗೆ ದೆಹಲಿ ಸೇರಿದಂತೆ ವಿವಿಧ ನಗರಕ್ಕೆ ಭೇಟಿ ನೀಡಿ ಅಲ್ಲಿನ ಕಸ ವಿಲೇವಾರಿ ಪದ್ಧತಿ ಪರಿಶೀಲನೆ ನಡೆಸಲಾಗಿತ್ತು. ಕಸವನ್ನು ಖಾಲಿ ಜಾಗಗಳಲ್ಲಿ ತುಂಬುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಅದು ಬೇರೆ ರೀತಿ ಸಮಸ್ಯೆ ಆಗಲಿದೆ. ಹೀಗಾಗಿ, ಶಾಶ್ವತ ಪರಿಹಾರ ಹೆಚ್ಚಿನ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ವಿವರಿಸಿದರು.

ದೇಶದ ಒಂದೊಂದು ರಾಜ್ಯಗಳಲ್ಲಿ ಒಂದೊಂದು ಮಾದರಿ ಅಳವಡಿಸಿಕೊಳ್ಳಲಾಗಿದೆ. ಬಹಳ ಜನ ನಮ್ಮ ಬಳಿ ಹಣ ಪಡೆದರೂ ಪರವಾಗಿಲ್ಲ. ವ್ಯವಸ್ಥಿತವಾಗಿ ಕಸ ವಿಲೇವಾರಿ ಮಾಡಿ ಎಂದು ಕೇಳುತ್ತಿದ್ದಾರೆ. ಸಾರಿಗೆ ಇಲಾಖೆಯಲ್ಲಿ ಇಂಧನ ಬೆಲೆ ಏರಿಕೆಯಾದಂತೆ ದರ ಏರಿಕೆಗೆ ಅಧಿಕಾರ ನೀಡಲಾಗಿದೆ. ಆದರೆ, ನೀರು ಶುಲ್ಕ ಹಾಗೂ ಆಸ್ತಿ ತೆರಿಗೆ ವಿಚಾರವಾಗಿ ಆ ಅಧಿಕಾರ ನೀಡಿಲ್ಲ ಎಂದು ತಿಳಿಸಿದರು. ಇನ್ನು ಕೆಲವರು ಆಸ್ತಿ ತೆರಿಗೆ ವಂಚನೆ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

Bengaluru: ಪುತ್ರ, ಸೊಸೆ ವಿರುದ್ಧ ದೂರು ಕೊಟ್ಟ 'ಬಂಗಾರದ ಮನುಷ್ಯ' ನಿರ್ದೇಶಕನ ಪತ್ನಿ

ಒತ್ತುವರಿ ತೆರವಿಗೆ ಸಂಪೂರ್ಣ ಅಧಿಕಾರ: ರಾಜಕಾಲುವೆ ಒತ್ತುವರಿ ತೆರವು ಮಾಡಲಾಗುತ್ತಿದೆ. ಅಧಿಕಾರಿಗಳು ಒತ್ತುವರಿ ಗುರುತು ಮಾಡಿ, ಅದರ ಆಧಾರದ ಮೇಲೆ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಕೆಲಸ ಮಾಡಲು ಸಂಪೂರ್ಣ ಅಧಿಕಾರ ನೀಡಲಾಗಿದೆ. ಅತಿಯಾದ ಮಳೆಯಿಂದಾಗಿ ತಾತ್ಕಾಲಿಕವಾಗಿ ತೆರವು ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ಸಿಡಿಪಿ ಹಾಗೂ ಕಂದಾಯ ಇಲಾಖೆ ಒಂದಾಗಿ ಕೆಲಸ ಮಾಡಬೇಕು. ಇರಡು ಇಲಾಖೆಗಳು ಪ್ರತ್ಯೇಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು.

click me!