
ಮಂಗಳೂರು, (ನ.12): ಪಂಪ್ ಆನ್ ಮಾಡಿದರೆ ನೀರು (Water) ಸರಾಗ ಹರಿಯುವುದು ಗೊತ್ತು, ಆದರೆ ಇಲ್ಲಿ ಪಂಪ್ ಚಾಲೂ ಮಾಡಿ ಆಫ್ ಮಾಡಿದರೆ ನೀರು ಹರಿಯುವುದು ನಿಲ್ಲುವುದೇ ಇಲ್ಲ!
ಇಂತಹ ಅಚ್ಚರಿಯ ವಿದ್ಯಮಾನ ಕಳೆದ ಹಲವು 12 ವರ್ಷಗಳಿಂದ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ನಡೆಯುತ್ತಿದೆ.
Flying Carಗಳ ಕನಸು ನನಸಾಗುವತ್ತ : ಸರ್ಕಾರದಿಂದ ಹಾರುವ ಕಾರಿಗೆ ಗ್ರೀನ್ ಸಿಗ್ನಲ್!
ಗುರುವಾಯನಕೆರೆ ವಿದ್ಯಾಾನಗರ ನಿವಾಸಿ, ನಿವೃತ್ತ ಪ್ರಾಂಶುಪಾಲ ಗೋವಿಂದ ಭಟ್ ಕಡಪ್ಪು ಎಂಬವರು ಈ ಅಪರೂಪದ ಸಾಧನೆಯನ್ನು ಸಾಕ್ಷೀಕರಿಸಿದ್ದಾಾರೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಸೈಫನ್ ವಿಧಾನ ಬಳಸಿ ತೆರೆದ ಬಾವಿಯಿಂದ ಕೊಳವೆ ಬಾವಿಗೆ ನಿರಂತರವಾಗಿ ನೀರಿನ ರೀಚಾರ್ಜ್ ಮಾಡುತ್ತಿದ್ದಾರೆ. ಪದೇ ಪದೇ ಯಂತ್ರದ ಸಹಾಯ ಇಲ್ಲದೆ ಒಮ್ಮೆ ಚಾಲೂ ಮಾಡಿ ಆಫ್ ಮಾಡಿದ ಬಳಿಕ ನಿರಂತರವಾಗಿ ನೀರು ಪೂರೈಸುವ ಸೈಫನ್ ವಿಧಾನ ಇದು. ಈ ವಿಧಾನದಲ್ಲಿ ಬೋರ್‌ವೆಲ್ ರೀಚಾರ್ಜ್ ಮಾಡುವುದು ರಾಜ್ಯದಲ್ಲೇ ಅಪರೂಪ.
ಸೈಫನ್ ವಿಧಾನದಿಂದ ಸುಲಭದಲ್ಲಿ ಕೊಳವೆಬಾವಿ ರೀಚಾರ್ಜ್ ಮಾಡುವುದನ್ನು ದೇಶಾದ್ಯಂತ ಅಳವಡಿಸುವ ಬಗ್ಗೆೆ ನಿರ್ದೇಶನ ನೀಡುವಂತೆ ಗೋವಿಂದ ಭಟ್ಟರು 2021 ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರಾಫ್ ಸಹಿತ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಕೂಡಲೇ ಪ್ರಧಾನಿ ಕಾರ್ಯಾಲಯದಿಂದ ಸ್ಪಂದನ ಸಿಕ್ಕಿದೆ. ಈ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಮುಖ್ಯಕಾರ್ಯದರ್ಶಿಗೆ ಪ್ರಧಾನಿ ಕಾರ್ಯಾಲಯ ಸೂಚನೆ ನೀಡಿದೆ. ಅಲ್ಲದೆ ಕೇಂದ್ರ ಕೃಷಿ ಖಾತೆ ಸಚಿವೆ ಶೋಭಾ ಕರಂದ್ಲಾಜೆಗೂ ಮಾಹಿತಿ ರವಾನಿಸಿದ್ದಾರೆ.
ಸೈಫನ್ ವಿಧಾನ ಹೇಗೆ?:
ಪ್ರಸಕ್ತ ಕೊಳವೆ ಬಾವಿಗೆ ರೀಚಾರ್ಜ್ ಮಾಡಲು ಎರಡು ಪ್ರಮುಖ ವಿಧಾನ ಇದೆ. ಒಂದು ಮಾಡಿನ ನೀರನ್ನು ನೇರವಾಗಿ ಪೈಪ್ ಅಳವಡಿಸಿ ಕೊಳವೆ ಬಾವಿಗೆ ಇಂಗಿಸುವುದು, ಇನ್ನೊಂದು ಕೊಳವೆಬಾವಿ ಸುತ್ತ ಗುಂಡಿ ತೆಗೆದು ಮರಳು ಹಾಗೂ ಜಲ್ಲಿ ತುಂಬಿಸಿ ನೀರು ಫಿಲ್ಟರ್ ಆಗಿ ರೀಚಾರ್ಜ್ ಆಗುವಂತೆ ಮಾಡುವುದು. ಈ ವಿಧಾನಗಳಿಗೆ 10 ಸಾವಿರ ರು. ವರೆಗೂ ವೆಚ್ಚ ತಗಲುತ್ತದೆ. ಆದೆ ಗೋವಿಂದ ಭಟ್ಟರ ಸೈಫನ್ ವಿಧಾನದಲ್ಲಿ ಕಡಿಮೆ ಎಂದರೆ 3.50ರಿಂದ 4 ಸಾವಿರ ರು. ಸಾಕು. ಇದು ಪೈಪ್ ಅಳವಡಿಕೆ, ಗೇಟ್‌ವಾಲ್‌ವ್ ಹಾಗೂ ಫುಟ್‌ವಾಲ್‌ವ್ ವೆಚ್ಚ ಮಾತ್ರ.
ತೆರೆದ ಬಾವಿ ಅಥವಾ ಕೆರೆ ಎತ್ತರದಲ್ಲೇ ಇರಬೇಕು ಎಂದೇನಿಲ್ಲ. ಕೊಳವೆಬಾವಿಯಿಂದ ತಗ್ಗಿನಲ್ಲಿ ಇದ್ದರೂ ತೊಂದರೆ ಆಗದು. ಆದರೆ ತೆರೆದ ಬಾವಿಯ ಜಲಮಟ್ಟದಿಂದ ಕೊಳವೆ ಬಾವಿಯ ಜಲಮಟ್ಟ ಕಡಿಮೆ ಇರಬೇಕು. ಅದೇ ಮಾನದಂಡದಲ್ಲಿ ತೆರೆದ ಬಾವಿ ಮತ್ತು ಕೊಳವೆ ಬಾವಿಗೆ ಮುಕ್ಕಾಲು ಇಂಚಿನ ಪೈಪನ್ನು ಅಳವಡಿಸಬೇಕು. ಅದರ ಸಮೀಪವೇ ಇನ್ನೊಂದು ಒಂದು ಇಂಚಿನ ಪೈಪನ್ನು ಅಳವಡಿಸಿ, ಈ ಪೈಪಿನ ತುದಿಯನ್ನು ಮುಕ್ಕಾಲು ಇಂಚಿನ ಪೈಪ್‌ನ ತುದಿಯ ಫುಟ್‌ವಾಲ್‌ವ್‌ಗೆ ಜೋಡಿಸಬೇಕು. ಕೊಳವೆಬಾವಿಯ ಪಂಪ್ ಚಾಲೂ ಮಾಡಿದಾಗ ಒಂದು ಇಂಚು ಪೈಪ್‌ನ ಗೇಟ್‌ವಾಲ್‌ವ್‌ನ್ನು ತೆರೆದು ಮುಕ್ಕಾಲು ಇಂಚಿನ ಪೈಪ್‌ನಲ್ಲಿ ನೀರು ತುಂಬುವಂತೆ ಮಾಡಬೇಕು.
ನೀರು ತುಂಬಲು ಒಂದು ಸೆಕೆಂಡ್ ಸಾಕು. ಕೂಡಲೇ ಪಂಪ್ ಆಫ್ ಮಾಡಿ ಗೇಟ್‌ವಾಲ್‌ವ್ ಬಂದ್ ಮಾಡಬೇಕು. ಆ ಕ್ಷಣದಲ್ಲಿ ನೀರು ತುಂಬಿಸಿದ ಶಕ್ತಿಯಲ್ಲಿ ಮುಕ್ಕಾಲು ಇಂಚಿನ ಪೈಪ್ ತೆರೆದ ಬಾವಿಯಿಂದ ನೀರನ್ನು ಸ್ವೀಕರಿಸಿ ಕೊಳವೆ ಬಾವಿಗೆ ಹರಿಯಿಸುತ್ತದೆ. ನಂತರ ಪಂಪ್‌ನ್ನು ಮತ್ತೆ ಚಾಲೂ ಮಾಡುವ ಅನಿವಾರ್ಯತೆ ಬರುವುದಿಲ್ಲ. ಇದು ನಿರಂತರವಾಗಿ ನೀರು ಹರಿಯುತ್ತಲೇ ಇರುತ್ತದೆ.
ಪಂಪ್ ಇಲ್ಲದೆಯೂ ಸೈಫನ್ ವಿಧಾನದಿಂದ ಕೊಳವೆಬಾವಿ ರೀಚಾರ್ಜ್ ಮಾಡಬಹುದು. ಅಂದರೆ ಎತ್ತರದಲ್ಲಿ ನೀರಿನ ಟ್ಯಾಂಕ್‌ನಿಂದ ಮುಕ್ಕಾಲು ಇಂಚು ಪೈಪ್‌ಗೆ ನೀರು ತುಂಬಿಸಿ ಗೇಟ್‌ವಾಲ್‌ವ್ ಬಂದ್ ಮಾಡಿದರೆ ಸಾಕು, ಪಂಪ್ ಚಾಲೂ ಮಾಡುವ ಬದಲು ಇಲ್ಲಿ ಟ್ಯಾಂಕ್ ನೀರು ತುಂಬಿಸುವುದಷ್ಟೆ ವ್ಯತ್ಯಾಸ. ಈ ವಿಧಾನದಲ್ಲಿ ಕೂಡ ನೀರು ಬಾವಿಯಿಂದ ಓತಪ್ರೋತವಾಗಿ ಕೊಳವೆಬಾವಿಗೆ ನೀರು ಹರಿಯುತ್ತದೆ.
ಪ್ರತಿ ಬಾರಿ ಬೇಸಗೆಯಲ್ಲಿ ಕೊಳವೆ ಬಾವಿ ನೀರು ಬತ್ತುವ ಸನ್ನಿವೇಶ ಕಾಣುತ್ತೇವೆ. ಈ ವಿಧಾನದಿಂದ ಹೆಚ್ಚಿನ ಖರ್ಚಿಲ್ಲದೆ ನೀರಿಂಗಿಸಲು ಸಾಧ್ಯ.
ಗೋವಿಂದ ಭಟ್ಟರು ಮನೆಯಲ್ಲಿ ಪ್ರತಿ ವರ್ಷ ಮಳೆಗಾಲ ಆರಂಭದ ಕೂಡಲೇ ಈ ರೀತಿ ರೀಚಾರ್ಜ್ ಮಾಡಲು ಶುರು ಮಾಡುತ್ತಾರೆ. ಸಾಮಾನ್ಯ ಡಿಸೆಂಬರ್ ವರೆಗೂ ರೀಚಾರ್ಜ್ ಆಗುತ್ತಲೇ ಇರುತ್ತದೆ. ಬಾವಿಯಲ್ಲಿ ನೀರು ಕಡಿಮೆಯಾಗಲು ಶುರುವಾದಾಗ ಮಾತ್ರ ನಿಲ್ಲಿಸುತ್ತಾರೆ. ಇವರಲ್ಲಿ ಇರುವ ಎರಡು ಕೊಳವೆ ಬಾವಿಯಲ್ಲಿ ಇಲ್ಲಿವರೆಗೆ ಬೇಸಗೆ ದಿನಗಳಲ್ಲಿ ನೀರಿನ ಕೊರತೆ ಉಂಟಾಗಿಲ್ಲ.
ಗೋವಿಂದ ಭಟ್ಟರು ಬಹುವಿಧದ ಸಂಶೋಧಕ. ಇವರ ತಂದೆ ಮೊದಲ ಬಾರಿಗೆ ಅಡಕೆ ಸುಲಿಯುವ ಯಂತ್ರ ಆವಿಷ್ಕರಿಸಿದ್ದರು. ನಿವೃತ್ತಿ ಬಳಿಕ ಇವರು ಪೆನ್ನಿಗೆ ಬೇಕಾಗುವ ಇಂಕ್ ಸಿದ್ಧಪಡಿಸಿ, ರೀಫಿಲ್ ತಯಾರಿಸುತ್ತಿದ್ದರು. ವಿವಿಧ ಬಗೆಯ ವಜ್ರ, ಕಲ್ಲುಗಳ ಕಟ್ಟಿಂಗ್ ಮಾಡುತ್ತಿದ್ದರು. ಈಗ 7.5ರ ಇಳಿವಯಸ್ಸಿನಲ್ಲಿ ಕೃಷಿಗೆ ಗಮನ ನೀಡುತ್ತಿದ್ದಾರೆ.
ಏನಿದು ಸೈಫನ್ ವಿಧಾನ?:
ಸೈಫನ್ ತತ್ವ ಎಂಬುದು ಪುರಾತನ ವಿಧಾನ. ಗುರುತ್ವಾಕರ್ಷಣ ಶಕ್ತಿ ಬಳಸಿಕೊಂಡು ಮೇಲ್ಭಾಗದಿಂದ ಕೆಳಭಾಗಕ್ಕೆ ನೀರು ಹರಿಯಿಸುವ ವಿಧಾನ. ಹಳ್ಳಿ ಪ್ರದೇಶಗಳಲ್ಲಿ ಈ ವಿಧಾನದಲ್ಲಿ ಹಿಂದಿನಿಂದಲೇ ಕೃಷಿ ತೋಟಗಳಲ್ಲಿ ನೀರು ಹಾಯಿಸುತ್ತಿದ್ದರು. ಪಾಳುಬಿದ್ದ ಬಾವಿಯಲ್ಲಿ ಜಲಮರುಪೂರಣಕ್ಕೆ ಬಳಸುತ್ತಿದ್ದರು. ಕಾಲಕ್ರಮೇಣ ಸೈಫನ್ ವಿಧಾನ ದೂರವಾಯಿತು. ಆದರೆ ಇಲ್ಲಿ ಸೈಫನ್ ವಿಧಾನವನ್ನು ಕೊಳವೆ ಬಾವಿ ರೀಚಾರ್ಜ್‌ಗೆ ಬಳಸಲಾಗಿದೆ. ಅತ್ಯಂತ ಸುಲಭ ಹಾಗೂ ಸರಳ ವಿಧಾನದಲ್ಲಿ ಕಡಿಮೆ ವೆಚ್ಚದಲ್ಲಿ ತೆರೆದ ಬಾವಿಯಿಂದ ಕೊಳವೆ ಬಾವಿಗೆ ನಿರಂತರ ನೀರು ಪೂರೈಸಲು ಸಾಧ್ಯ ಎಂಬುದನ್ನು ಗೋವಿಂದ ಭಟ್ ಸಾಧಿಸಿ ತೋರಿಸಿದ್ದಾಾರೆ.
ಗೋವಿಂದ ಭಟ್, ಕಡಪ್ಪು ಅಭಿಪ್ರಾಯ
ನನಗೆ ಒಂದೂವರೆ ಎಕರೆ ಅಡಕೆ ತೋಟವಿದೆ, ರಬ್ಬರ್ ಬೆಳೆದಿದ್ದಾಾರೆ. ಇವರಿಗೆ ಎಂದಿಗೂ ನೀರಿನ ಕೊರತೆ ಉಂಟಾಗಿಲ್ಲ. ರಾಜ್ಯದಲ್ಲಿ ನೀರಿನ ಕೊರತೆ ಇರುವ ಕೊಳವೆ ಬಾವಿಗಳಿಗೆ ಸೈಫನ್ ವಿಧಾನದಿಂದ ಸುಲಭದಲ್ಲಿ ನಿರಂತರವಾಗಿ ನೀರು ತುಂಬಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ